ಬಾಂಗ್ಲಾ ಕಾರ್ಮಿಕರನ್ನು ತನಿಖೆಗೊಳಪಡಿಸಿ: ಶ್ರೀಕರ ಪ್ರಭು
ಮಂಗಳೂರು: ಕರಾವಳಿ ಭಯೋತ್ಪಾದಕ ಚಟುವಟಿಕೆಗಳಿಗೆ ಆಶ್ರಯ ಕೇಂದ್ರವಾಗುತ್ತಿದ್ದು, ಕರಾವಳಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಅನೇಕರು ಬಾಂಗ್ಲಾ ಮೂಲದವರಾಗಿದ್ದಾರೆ. ಇವರ ಬಗ್ಗೆ ಸರ್ಕಾರ ಸರಿಯಾದ ದಿಕ್ಕಿನಲ್ಲಿ ತನಿಖೆ ಆರಂಭಿಸಬೇಕಾಗಿದೆ ಎಂದು ಬಿಜೆಪಿ ರಾಜ್ಯಕಾರಣಿ ಸದಸ್ಯ ಆರ್. ಶ್ರೀಕರ ಪ್ರಭು ಆಗ್ರಹಿಸಿದ್ದಾರೆ.
ದೇಶದಲ್ಲಿ ಇಲ್ಲಿಯವರೆಗೆ ನಡೆದಿರುವ ಭಯೋತ್ಪಾದನೆ ದಾಳಿಯ ಒಂದು ಕೊಂಡಿ ಕರಾವಳಿ ಭಾಗದಲ್ಲಿ ಗುರುತಿಸ್ಪಟ್ಟಿರುವ ಬಗ್ಗೆ ಇರುವ ವರದಿಯನ್ನು ಆಧರಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.
ಬಿಹಾರ ಸ್ಪೋಟಕ್ಕೆ ಸಂಬಂಧಿಸಿ ಕಾವೂರಿನ ದಂಪತಿ ಪ್ರಕರಣ, ಜೈಲಿನಲ್ಲಿರುವ ಯಾಸೀನ್ ಭಟ್ಕಳ್, ರಶೀದ್ ಮುಬಾರಿ ಸೇರಿದಂತೆ ಇತರರ ಹೇಳಿಕೆಯನ್ನು ಪರಿಗಣಿಸಿ ಕೆಲವೊಂದು ಚಲನವಲನಗಳು ಮಂಗಳೂರು ಆಸುಪಾಸಿನಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ವರದಿಯನ್ನು ಸಂಗ್ರಹಿಸಬೇಕಾದ ಅವಶ್ಯಕತೆಯಿದೆ.
ಕರಾವಳಿಗೆ ವಿಪರೀತ ಅರಬ್ ಹಣ ಹರಿದು ಬರುತ್ತಿದ್ದು, ದೇಶದೊಂದಿಗೆ ನಂಟು ಹೆಚ್ಚಾಗುತ್ತಿರುವ ಪರಿಣಾಮ ಭೂಮಿಯ ಬೆಲೆ ಹೆಚ್ಚಾಗುತ್ತಿದೆ. ಇದಕ್ಕೆ ಅನಧಿಕೃತ ಹಣದ ಹೊಳೆಯೇ ಕಾರಣ. ಇದನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ವಿಮಾನದಲ್ಲಿ ಕಿಲೋಗಟ್ಟಲೆ ಬಂಗಾರಗದ ಅಕ್ರಮ ಸಾಗಾಟ ಗಮನಿಸುವಾಗ ಇದೂ ದೊಡ್ಡ ಷಡ್ಯಂತರದ ಭಾಗವಾಗಿದ್ದು, ಸೂಕ್ತ ತನಿಖೆ ಅಗತ್ಯವಿದೆ ಎಂದಿದ್ದಾರೆ.
ಬೇಡಿಕೆಗಳು: ದೇಶದಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಮಂಗಳೂರು ಸೇರಿ ಕರಾವಳಿ ಭಾಗದ ಸಂಬಂಧ ಹೊರ ಬಹಿರಂಗಗೊಂಡಿರುವ ಪ್ರಕರಣಗಳನ್ನೂ ಮರು ತನಿಖೆ ನಡೆಸಬೇಕು. ಬಾಂಗ್ಲಾ ಮೂಲದವರು ಕರಾವಳಿಯಲ್ಲಿ ಕೆಲಸ ಮಾಡುತ್ತಿದ್ದು ಇವರುಗಳ ಬಗ್ಗೆ ಸರಿಯಾದ ದಾಖಲೆ ಸಂಗ್ರಹಿಸಬೇಕಾಗಿದೆ. ಕರಾವಳಿಯಲ್ಲಿ ಭಯೋತ್ಪಾದನಾ ನಿಗ್ರಹದಳ ಕೇಂದ್ರ ರಚಿಸಬೇಕು. ವಿಶೇಷವಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಹೊಸ ಜನರ ಬಗ್ಗೆ ಮಾಹಿತಿ ಸಂಗ್ರಹಿಸಿ, ಇವರುಗಳ ಪೌರತ್ವ ನೈಜತೆ ಸಂಗ್ರಹಿಸಲು ಹೊಸ ಯೋಜನೆ ಸರ್ಕಾರ ಕೈಗೆತ್ತಿಕೊಳ್ಳಬೇಕು.