ಮಂಗಳೂರಲ್ಲಿ ರಾಷ್ಟ್ರೀಯ ಹಾಫ್ ಮ್ಯಾರಥಾನ್
ಮಂಗಳೂರು: ದ.ಕ.ಜಿಲ್ಲಾ ಅತ್ಲೆಟಿಕ್ ಎಸೋಸಿಯೇಷನ್ ಮತ್ತು ರಾಜ್ಯ ಅತ್ಲೆಟಿಕ್ ಸಂಘಟನೆ ವತಿಯಿಂದ ನಿಟ್ಟೆ ಶಿಕ್ಷಣ ಸಮೂಹ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ 3ನೇ ವರ್ಷದ ನಿಟ್ಟೆ ಮಂಗಳೂರು ರಾಷ್ಟ್ರೀಯ 'ಹಾಫ್ ಮ್ಯಾರಥಾನ್' ಮತ್ತು 10 ಕಿ.ಮೀ. 'ರನ್ ಫಾರ್ ಯೂನಿಟಿ' ಭಾನುವಾರ ಏರ್ಪಟ್ಟಿತು.
ನಿಟ್ಟೆ ಸಂಸ್ಥೆಗಳ ಅಧ್ಯಕ್ಷ ಎನ್.ವಿನಯ ಹೆಗ್ಡೆ ಹಾಫ್ ಮ್ಯಾರಥಾನ್ಗೆ ಚಾಲನೆ ನೀಡಿದರು. ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ನಗರ ಪೊಲೀಸ್ ಕಮಿಷನರ್ ಆರ್.ಹಿತೇಂದ್ರ ಮತ್ತಿತರರಿದ್ದರು.
ಮಂಗಳಾ ಕ್ರೀಡಾಂಗಣದಿಂದ ಪ್ರಾರಂಭವಾದ ರನ್ ಫಾರ್ ಯೂನಿಟಿ ನಗರ ವಿವಿಧ ರಸ್ತೆಗಳಲ್ಲಿ ಸಂಚರಿಸಿತು. ಹಿರಿಯ, ಕಿರಿಯ ಹಾಗೂ ವಿದ್ಯಾರ್ಥಿಗಳಿಗೆ 25 ಕಿ.ಮೀ, 15 ಕಿ.ಮೀ ಹಾಗೂ 10 ಕಿ.ಮೀ. ಹೀಗೆ ವಿವಿಧ ವಿಭಾಗದಲ್ಲಿ ಮ್ಯಾರಥಾನ್ ಜರುಗಿತು. ವಿವಿಧ ಭಾಗಗಳಿಂದ 10 ಸಾವಿರಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಓಟದಲ್ಲಿ ಪಾಲ್ಗೊಂಡರು.
ಪಾಶ್ಚಾತ್ಯ ವಿದ್ವಾಂಸರಿಗಿರುವ ಗೌರವ ದೇಶಿಯರಿಗಿಲ್ಲ: ನಾಗರಾಜ್
ಪುತ್ತೂರು: ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಕುರಿತು ಇನ್ನೂ ಸರಿಯಾದ ಅಧ್ಯಯನ ನಡೆದಿಲ್ಲ. ಪಾಶ್ಚಾತ್ಯ ವಿದ್ವಾಂಸರಿಗಿರುವ ಗೌರವ ದೇಶದ ವಿದ್ವಾಂಸರಿಗೆ ಇಲ್ಲಿ ಸಿಕ್ಕಿಲ್ಲ ಎಂದು ಲೇಖಕ ಬಿ.ಎಲ್. ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ. ಪುತ್ತೂರಿನ ಅನುರಾಗ ವಠಾರದಲ್ಲಿ ನಡೆಯುತ್ತಿರುವ 'ಸಾಹಿತ್ಯ ಕಲಾ ಕುಶಲೋಪರಿ-11' ಕಾರ್ಯಕ್ರಮದಲ್ಲಿ ಕಡವ ಶಂಭು ಶರ್ಮ ಸ್ಮಾರಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ 'ಶಂಭು ಶರ್ಮ' ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಪಾಶ್ಚಾತ್ಯ ವಿದ್ವಾಂಸರು ಗೌರವಿಸಲ್ಪಡುವುದು ಮೆಕಾಲೆ ತಂದು ಕೊಟ್ಟ ಬಳುವಳಿ ಎಂದ ಅವರು ಭಾರತೀಯ ಸಂಸ್ಕೃತಿಯ ಬಗ್ಗೆ ಸರಿಯಾದ ಅಧ್ಯಯನ ನಡೆಯಲು ಮೆಕಾಲೆ ಬಿಟ್ಟಿಲ್ಲ. ಇಲ್ಲಿನ ಬ್ರಾಹ್ಮಣರು ಮತ್ತು ಹೆಣ್ಣು ಮಕ್ಕಳನ್ನು ಹಾಳು ಮಾಡುವುದು ಮೆಕಾಲೆ ಅಜೆಂಡಾವಾಗಿತ್ತು ಎಂದರು. ಶಂಭು ಶರ್ಮರ ಸಂಶೋಧನೆಗಳ ಕುರಿತು ಡಾ. ಪುಂಡಿಕಾಯಿ ಗಣಪಯ್ಯ ಭಟ್ ಮಾತನಾಡಿದರು. ಕೊಡಿಪ್ಪಾಡಿ ನಾರಾಯಣ ಜೋಯಿಸ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಪುರಂದರ ಭಟ್ ಇದ್ದರು.
ಕಾರ್ಯದರ್ಶಿ ಡಾ.ಎಚ್.ಜಿ. ಶ್ರೀಧರ್ ಸ್ವಾಗತಿಸಿದರು. ಉಪನ್ಯಾಸಕ ಡಾ. ರಾಜೇಶ್ ಬೆಜ್ಜಂಗಳ ನಿರೂಪಿಸಿ, ವಂದಿಸಿದರು.