ರಾಷ್ಟ್ರಪಿತನ ಭೇಟಿಯ 80ನೇ ವರ್ಷಾಚರಣೆ: ಸುಳ್ಯದಲ್ಲಿ ಗಾಂಧಿ ನಡಿಗೆ
ಸುಳ್ಯ: ರಾಷ್ಟ್ರಪಿತ ಮಹಾತ್ಮ ಗಾಂಧಿ ಹರಿಜನ ಯಾತ್ರೆಯ ಅಂಗವಾಗಿ ಸುಳ್ಯಕ್ಕೆ ಆಗಮಿಸಿ 80 ವರ್ಷವಾದ ನೆನಪಿಗೆ ಗಾಂಧಿ ಆದರ್ಶಗಳನ್ನು ಉಳಿಸುವ ನಿಟ್ಟಿನಲ್ಲಿ ಸುಳ್ಯದಲ್ಲಿ ಗಾಂಧಿ ನಡಿಗೆ ಕಾರ್ಯಕ್ರಮ ಸೋಮವಾರ ನಡೆಯಿತು.
ಗಾಂಧಿ ಚಿಂತನಾ ವೇದಿಕೆ ಮತ್ತು ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸಂಘ ಸಂಸ್ಥೆಗಳ ಹಾಗೂ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಾಂಧಿನಗರದಿಂದ ಹಳೆಗೇಟುವರೆಗೆ ನಡೆದ ನಡಿಗೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಡ್ರಂ ಬಾರಿಸುವ ಮೂಲಕ ಚಾಲನೆ ನೀಡಿದರು.
ಕೃಷಿಕ, ಮಾಜಿ ಸೈನಿಕ, ಗಾಂಧಿವಾದಿ ಅಪ್ಪಾಜಿ ರಾವ್ 80 ವರ್ಷಗಳ ಹಿಂದೆ ಸುಳ್ಯದಲ್ಲಿ ನಡೆದ ಗಾಂಧಿ ಕಾರ್ಯಕ್ರಮದ ನೆನಪುಗಳನ್ನು ಮೆಲುಕು ಹಾಕಿದರು. ಈ ನಡಿಗೆಯಲ್ಲಿ ಅನೇಕ ಗಣ್ಯರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು. ಜಿಲ್ಲಾ ಪತ್ರಕರ್ತರ ಸಂಘದ ಗ್ರಾಮಾಂತರ ಕಾರ್ಯದರ್ಶಿ ಹರೀಶ್ ಬಂಟ್ವಾಳ ಸ್ವಾಗತಿಸಿದರು. ಡಾ.ಸುಂದರ್ ಕೇನಾಜೆ ವಂದಿಸಿದರು.