ಕ್ರೀಡಾ ಇಲಾಖೆಗೆ ಕಂಬಳ ಸೇರ್ಪಜೆ: ಸಚಿವ ಜೈನ್
ವಿಧಾನಪರಿಷತ್ತು: ಕರಾವಳಿ ಜಿಲ್ಲೆಗಳ ಪ್ರಮುಖ ಕ್ರೀಡೆ ಕಂಬಳವನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಸೇರಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ತಿಳಿಸಿದ್ದಾರೆ. ಸದನದಲ್ಲಿ ಮಂಗಳವಾರ ಬಜೆಟ್ ಮೇಲಿನ ಚರ್ಚೆ ವೇಳೆ ಬಿಜೆಪಿಯ ಮೋನಪ್ಪ ಭಂಡಾರಿ ಕೋರಿಕೆಗೆ ಸ್ಪಂದಿಸಿದ ಸಚಿವರು, ಕಂಬಳ ಕ್ರೀಡೆ ಕರಾವಳಿ ಜಿಲ್ಲೆಯಲ್ಲಿ ತುಂಬಾ ಪ್ರಮುಖವಾಗಿದ್ದು, ಸಹಸ್ರಾರು ಮಂದಿ ಅದನ್ನು ಉಳಿಸಿ, ಬೆಳೆಸಿ ಬಂದಿದ್ದಾರೆ. ಆದರೂ ಈತನಕ ಇದನ್ನು ಅಧಿಕೃತವಾಗಿ ಒಂದು ಕ್ರೀಡೆ ಎಂದು ಯುವಜನ ಸೇವಾ ಇಲಾಖೆಗೆ ಸೇರಿಸಿರಲಿಲ್ಲ. ಆದ್ದರಿಂದ ಈ ಬಾರಿ ಇದನ್ನು ಇಲಾಖೆ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ ಎಂದರು. ಈ ಕ್ರೀಡೆಯನ್ನು ಉತ್ತೇಜಿಸಲು ಇನ್ನು ಮುಂದೆ ಕಂಬಳದ ಕ್ರೀಡಾಂಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಮುಂದಿನ ವರ್ಷದಿಂದ 25ಲಕ್ಷ ಬಿಡುಗಡೆ ಮಾಡಲಾಗುವುದು ಎಂದು ಎಂದು ಅಭಯಚಂದ್ರ ಜೈನ್ ವಿವರಿಸಿದರು.
ಸೇವಾ ಮನೋಭಾವ ಬೆಳೆಯಲಿ:
ಚಂದ್ರಶೇಖರ ಸ್ವಾಮೀಜಿ
ಮೂಲ್ಕಿ: ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುತ್ತಾ ನಿಸ್ವಾರ್ಥವಾಗಿ ಸಮಾಜ ಸೇವೆಯಲ್ಲಿ ತೊಡಗಿರುವವರನ್ನು ಗುರುತಿಸಿ ಗೌರವಿಸಿದಲ್ಲಿ ಅವರ ಸೇವಾ ಮನೋಭಾವ ಇನ್ನಷ್ಟು ಬೆಳೆಯಲು ಪೂರಕ ಶಕ್ತಿ ನೀಡಿದಂತೆ ಆಗುತ್ತದೆ ಎಂದು ವೈಜ್ಞಾನಿಕ ವಾಸ್ತು ತಜ್ಞ, ಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹೇಳಿದರು. ಮೂಲ್ಕಿ ಗೇರುಕಟ್ಟೆ ಶ್ರೀಚಂದ್ರಶೇಖರ ಸ್ವಾಮೀಜಿ ಆಶ್ರಮದಲ್ಲಿ ಪಟೇಲ್ ವಾಸುದೇವ ಪುನರೂರು ಅವರನ್ನು ವಿಶೇಷವಾಗಿ ಸನ್ಮಾನಿಸಿ ಮಾತನಾಡಿದರು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಆದ್ಯತೆ ನೀಡಿದ ಪಟೇಲ್ ವಾಸುದೇವ ರಾವ್ ಅಭಿನಂದನೆಗೆ ಅರ್ಹರು ಎಂದು ಸ್ವಾಮೀಜಿ ನುಡಿದರು. ಹಿರಿಯ ಜ್ಯೋತಿಷಿ ಕಿಲ್ಪಾಡಿ ಗೋವಿಂದ ಭಟ್, ಶಾರದಮ್ಮ, ಆಶ್ರಮ ನಿರ್ದೇಶಕಿ ರಜನಿ ಚಂದ್ರಶೇಖರ್, ವಿಶ್ವಕರ್ಮ ಒಕ್ಕೂಟ ಜಿಲ್ಲಾ ಉಪಾಧ್ಯಕ್ಷ ಮಧು ಆಯಾರ್ಚ ಕಾರ್ನಾಡು, ಮೂಲ್ಕಿ ಉದ್ಯಮಿ ಗಿರೀಶ್ ಕಾಮತ್ ಇದ್ದರು.
ಇಂದು ರಕ್ತದಾನ ಶಿಬಿರ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ವತಿಯಿಂದ ದೇರಳಕಟ್ಟೆ ಯೇನೇಪೋಯ ಆಸ್ಪತ್ರೆಯಲ್ಲಿ ಫೆ.26ರಂದು ರಕ್ತದಾನ ಶಿಬಿರ ನಡೆಯಲಿದೆ. ವಿವಿ ಸ್ನಾತಕೋತ್ತರ ವಿದ್ಯಾರ್ಥಿ ಮಂಡಳಿ, ಎಂಬಿಎ ಮತ್ತು ಎಂಸಿಜೆಯ ಮಂಗಳೂರು ವಿವಿ ರಕ್ತ ದಾನಿಗಳ ತಂಡ ಶಿಬಿರ ಆಯೋಜಿಸಿದೆ. ಕುಲಪತಿ ಟಿ.ಸಿ.ಶಿವಶಂಕರಮೂರ್ತಿ ಶಿಬಿರ ಉದ್ಘಾಟಿಸುವರು. ಹೆಚ್ಚಿನ ಮಾಹಿತಿ ಸಂಯೋಜಕ ಜಿ.ಪಿ.ಶಿವರಾಮ್ (94484 50150) ಸಂಪರ್ಕಿಸಬಹುದು.
ಸಹಕಾರಿ ಸಂಘಕ್ಕೆ ಆಯ್ಕೆ
ಮಂಗಳೂರು: ಶ್ರೀಭಾರತೀ ಸೌಹಾರ್ದ ಸಹಕಾರಿ ನಿಯಮಿತದ ನೂತನ ಅಧ್ಯಕ್ಷರಾಗಿ ಜಿ. ಕೆ. ಭಟ್ ಕೊಣಾಜೆ ಹಾಗೂ ಉಪಾಧ್ಯಕ್ಷರಾಗಿ ಶ್ಯಾಮಸುಂದರ ಭೀಮಗುಳಿ ಆಯ್ಕೆಯಾಗಿದ್ದಾರೆ. ಮಂಗಳೂರಿನ ಬಿಜೈ ಚರ್ಚ್ ಕಾಂಪ್ಲೆಕ್ಸ್ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಸ್ಥೆಯು ನಾಟೆಕಲ್ಲು ಮತ್ತು ಪುತ್ತೂರಿನಲ್ಲಿ ಶಾಖೆ ಹೊಂದಿದೆ.
ಎ.ಪಿ.ಉಸ್ತಾದ್ ಇಂದು ಸುಳ್ಯದಲ್ಲಿ
ಸುಳ್ಯ: ಸುನ್ನಿ ಜಂಇಯ್ಯತ್ತುಲ್ ಮಅಲ್ಲಿಮೀನ್ ಸುಳ್ಯ ರೇಂಜ್ ಇದರ ಇಪ್ಪತ್ತನೇ ವಾರ್ಷಿಕ ಮಹಾಸಮ್ಮೇಳನ ಹಾಗೂ ತಾಜುಲ್ ಉಲಮಾ ಅನುಸ್ಮರಣೆ ಫೆ.26ರಂದು ಸಂಜೆ 5ಕ್ಕೆ ಸುಳ್ಯದ ಗಾಂಧಿನಗರ ತಾಜುಲ್ ಉಲಮಾ ವೇದಿಕೆ ಗಾಂಧಿನಗರ ಸುಳ್ಯದಲ್ಲಿ ನಡೆಯಲಿದೆ. ಈ ಮಹಾಸಂಗಮದಲ್ಲಿ ಅಖಿಲ ಭಾರತ ಸುನ್ನೀ ಜಂಇಯ್ಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಮುಖ್ಯಭಾಷಣಗೈಯಲಿದ್ದಾರೆ. ಸಮ್ಮೇಳನದ ಪ್ರಯುಕ್ತ ಮಧ್ಯಾಹ್ನ 2 ಗಂಟೆಗೆ ಬೃಹತ್ ಶೈಕ್ಷಣಿಕ ರ್ಯಾಲಿ ನಡೆಯಲಿದೆ.
ಭೂ ಮಾಲೀಕರ ಸಭೆ ಮುಂದೂಡಿಕೆ
ಮಂಗಳೂರು: ಬಂಟ್ವಾಳ ತಾಲೂಕಿನಲ್ಲಿ ಗ್ಯಾಸ್ ಪೈಪ್ಲೈನ್ ಯೋಜನೆಗೆ ಸಂತ್ರಸ್ತರಾಗುವ ಭೂಮಾಲೀಕರಿಗೆ ನೀಡಬೇಕಾದ ಪರಿಹಾರ ದರ ನಿಗದಿಗೆ ಫೆ. 26 ರಂದು ನಡೆಯಬೇಕಿದ್ದ ಸಭೆಯು ಫೆ. 28 ರಂದು ಬೆಳಗ್ಗೆ 10 ಗಂಟೆಗೆ ಬಂಟ್ವಾಳ ತಾ.ಪಂ. ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಂಬಂಧಪಟ್ಟ ಗ್ರಾಮಗಳ ಭೂಮಾಲೀಕರು ಸಂತ್ರಸ್ತರು ಹಾಜರಿರಬಹುದು ಎಂದು ಪ್ರಕಟಣೆ ತಿಳಿಸಿದೆ.