ಗುಣಮಟ್ಟದ ಉನ್ನತ ಶಿಕ್ಷಣ ಅಗತ್ಯ: ದೇಶಪಾಂಡೆ
ಬೆಳ್ತಂಗಡಿ: ವಿಶ್ವ ಮಾರುಕಟ್ಟೆಯಲ್ಲಿನ ಸ್ಪರ್ಧೆ ಎದುರಿಸಬೇಕಾದರೆ ಗುಣಮಟ್ಟದ ಉನ್ನತ ಶಿಕ್ಷಣ ಅವಶ್ಯ ಎಂದು ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಮಂಗಳವಾರ ಉಜಿರೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಸೊಸೈಟಿಯ ಶ್ರೀ ಧ.ಮಂ.ಕಾಲೇಜು ಸ್ನಾತಕೋತ್ತರ ವಿಭಾಗದ ನೂತನ ಕಟ್ಟಡಗಳಲ್ಲಿ ಮುಖ್ಯ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ತಾನೂ ಧರ್ಮಸ್ಥಳದ ವಿವಿಧ ಚಿಂತನೆಗಳಿಂದ ಪ್ರಭಾವಿತನಾಗಿ ಯುವಕರಿಗೆ ಸ್ವ ಉದ್ಯೋಗ ನೀಡುವ ಸಂಸ್ಥೆ ನಡೆಸುತ್ತಿದ್ದೇನೆ ಎಂದ ಅವರು, ತಾನು ಕೈಗಾರಿಕಾ ಮಂತ್ರಿಯಾಗಿದ್ದಾಗ ಉದ್ಯೋಗ ಕೊಡಿಸುವಂತೆ ಹಲವಾರು ಅರ್ಜಿಗಳು ಬರುತ್ತಿದ್ದವು. ಈ ಬಗ್ಗೆ ಕೈಗಾರಿಕೋದ್ಯಮಿಗಳಲ್ಲಿ ಚರ್ಚಿಸಿದಾಗ ವಿಶ್ವ ವಿದ್ಯಾಲಯಗಳ ಕಲಿಕೆ ಕೈಗಾರಿಕೋದ್ಯಮಕ್ಕೆ ಯಾವುದೇ ಪ್ರಯೋಜನಕಾರಿಯಾಗಿಲ್ಲ. ಕೈಗಾರಿಕೆಗೆ ಬೇಕಾದದುದನ್ನು ವಿ.ವಿ.ಗಳು ಕಲಿಸುವುದಿಲ್ಲ. ಹೀಗಾಗಿ ನಿರುದ್ಯೋಗ ನಿರಂತರ ಇದೆ ಎಂಬ ಮಾಹಿತಿ ದೊರೆಯಿತು ಎಂದರು.
ಹೀಗಾಗಿ ವಿ.ವಿ.ಗಳು ಜೀವನದಲ್ಲಿ ಲಾಭ ಆಗುವ ಶಿಕ್ಷಣ ಕೊಡಿಸಲು ಪ್ರಯತ್ನಿಸುವಂತೆ ಎಲ್ಲಾ ಕುಲಸಚಿವರಿಗೆ ಸೂಚಿಸಿದ್ದೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಸಂಸ್ಥೆ ಸಂಶೋಧನೆಯ ವಿಚಾರದಲ್ಲಿ ಬಂಡವಾಳ ಹೂಡಲು ಸಿದ್ಧ. ಇಲ್ಲಿನ ಎಸ್ಡಿಎಂ ಕಾಲೇಜಿನಲ್ಲಿ ಒಂದು ಲಕ್ಷ ಪುಸ್ತಕಗಳಿವೆ. ಧರ್ಮಸ್ಥಳ ಸಂಸ್ಕೃತಿ ಪ್ರತಿಷ್ಠಾನದಲ್ಲಿ 4,400 ಕ್ಕೂ ಹೆಚ್ಚು ತಾಳೆಗರಿಗಳ ಗ್ರಂಥಗಳು ವಿವಿಧ ಭಾಷೆಗಳಲ್ಲಿದ್ದು, ಇದರ ಅಧ್ಯಯನಕ್ಕೆ ಅವಕಾಶ ನೀಡಲಾಗಿದೆ ಎಂದು ವಿವರಿಸಿದರ ಈಗಾಗಲೇ ಜರ್ಮನಿಯ 6 ಮಂದಿ ವಿದ್ಯಾಥರ್ಗಳ ತಂಡ ಅದನ್ನು ಅಧ್ಯಯನ ಮಾಡುತ್ತಿದೆ. ಕನ್ನಡ ಸ್ನಾತಕೋತ್ತರ ವಿಭಾಗ ಪ್ರಾರಂಭವಾದಾಗ ಸಂಶೋಧನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.
ವಿದ್ಯಾರ್ಥಿನಿ ನಿಲಯ ಉದ್ಘಾಟಿಸಿದ ಮಂಗಳೂರು ವಿ.ವಿ.ಯ ಕುಲಪತಿ ಡಾ.ಟಿ.ಸಿ.ಶಿವಶಂಕರ ಮೂರ್ತಿ, ಹೇಮಾವತಿ ವಿ.ಹೆಗ್ಗಡೆ, ವಿ.ವಿ.ಜಂಟಿ ನಿರ್ದೇಶಕ ಯೋಗಾನಂದ, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಪ್ರಭಾಕರ್, ಉಜಿರೆ ಜನಾರ್ದನ ಸ್ವಾಮಿ ದೇವಳದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ಇದ್ದರು.
ಎಸ್.ಡಿ.ಎಂ. ಸೊಸೈಟಿ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಸ್ವಾಗತಿಸಿದರು. ಸ್ನಾತಕೋತ್ತರ ವಿಭಾಗ ಡೀನ್ ಡಾ.ಎಂ.ವೈ.ಮಂಜುಳ ವಂದಿಸಿದರು. ಉಪನ್ಯಾಸಕ ಸುವೀರ್ ಜೈನ್, ವಿದ್ಯಾರ್ಥಿನಿ ರಕ್ಷಾ ವಿ. ನಿರ್ವಹಿಸಿದರು.
ನೂತನ ಕಟ್ಟಡದಲ್ಲಿ ಎಂ.ಎಸ್ಸಿ. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ, ಜೈವಿಕ ತಂತ್ರಜ್ಞಾನ, ಎಂ.ಎ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಎಂ.ಎ.ಇಂಗ್ಲಿಷ್, ಎಂ.ಎಸ್.ಡಬ್ಲ್ಯೂ, ಎಂ.ಎ.ಅರ್ಥಶಾಸ್ತ್ರ, ವಿಭಾಗಳನ್ನು ಪ್ರಾರಂಭಿಸಲಾಗಿದೆ. ಅತ್ಯಾಧುನಿಕ ಪ್ರಯೋಗಾಲಯಗಳು, ಗ್ರಂಥಾಲಯ, ಸೆಮಿನಾರ್ ಹಾಲ್ ಇಲ್ಲಿವೆ.
ಅನುದಾನಿತ ಕಾಲೇಜ್ ವಿದ್ಯಾರ್ಥಿನಿಯರಿಗೂ ಉಚಿತ ಶಿಕ್ಷಣ
ಕೇಂದ್ರ ಸರ್ಕಾರ ಈಗಾಗಲೇ ವೃತ್ತಿಪರ ಶಿಕ್ಷಣಕ್ಕೆ ಪಡೆದ ಸಾಲದ ಬಡ್ಡಿ ನೀಡುವ ಯೋಚನೆ ಹೊಂದಿದೆ. ಹೀಗಾಗಿ ರಾಜ್ಯ ಸರ್ಕಾರ ರಾಜೀವ ಗಾಂಧಿ ವಿದ್ಯಾರ್ಥಿ ವೇತನ ಯೋಜನೆಯಡಿ ಪದವಿ, ಸ್ನಾತಕೋತ್ತರ ಪದವಿ, ಪಿಎಚ್ಡಿಗಾಗಿ ಪಡೆದ ಸಾಲದ ಬಡ್ಡಿ ನೀಡಲಿದೆ. ಈಗಾಗಲೇ ಸರ್ಕಾರಿ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಮುಂದಕ್ಕೆ ಅನುದಾನಿತ ಕಾಲೇಜುಗಳ ವಿದ್ಯಾರ್ಥಿನಿಯರಿಗೂ ಇದನ್ನು ವಿಸ್ತರಿಸಲಾಗುವುದು ಎಂದು ಸಚಿವ ದೇಶಪಾಂಡೆ ಹೇಳಿದರು.