ರೂಪೇ ಕಿಸಾನ್‌ಕಾರ್ಡ್, ಡೆಬಿಟ್ ಕಾರ್ಡ್ ಬಿಡುಗಡೆ
ಮಂಗಳೂರು: ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಸುಧಾರಿತ ರೂಪೇ ಕಿಸಾನ್ ಕಾರ್ಡ್ ಮತ್ತು ರೂಪೇ ಡೆಬಿಟ್ ಕಾರ್ಡ್ ವಿತರಿಸಿದೆ.
ಎಸ್‌ಸಿಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಮಂಗಳವಾರ ನಬಾರ್ಡ್ ಮುಖ್ಯ ಮಹಾ ಪ್ರಬಂಧಕ ಜಿ.ಆರ್. ಚಿಂತಾಲ ಮತ್ತು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ರೈತರಿಗೆ ಮತ್ತು ಬ್ಯಾಂಕ್ ಗ್ರಾಹಕರಿಗೆ ಕಾರ್ಡ್ ವಿತರಿಸಿದರು.
'ಎಲೆಕ್ಟ್ರಾನಿಕ್ ಪೇಮೆಂಟ್ ಸಿಸ್ಟಂ ಮೂಲಕ ಹಣಕಾಸು ವ್ಯವಹಾರಗಳು ನಡೆಯುತ್ತಿರುವುದರಿಂದ ಹಳ್ಳಿಯ ಬಡ ರೈತರಿಗೂ ಈ ಸೌಲಭ್ಯ ದೊರೆಯಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ನಬಾರ್ಡ್ ಸಹಯೋಗದೊಂದಿಗೆ ಯೋಜನೆಯನ್ನು ರಾಷ್ಟ್ರಮಟ್ಟದಲ್ಲಿ ಸಹಕಾರಿ ರಂಗದಲ್ಲಿ ಪ್ರಥಮವಾಗಿ ಜಾರಿಗೆ ತರುತ್ತಿದೆ. ರೂಪೇ ಕಾರ್ಡ್ ಈ ಹಿಂದೆ ಬೇರೆಡೆ ವಿತರಿಸಿದ್ದರೂ ತಾಂತ್ರಿಕ ಕಾರಣಗಳಿಗಾಗಿ ಮಂಗಳೂರಿನಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ವಿತರಿಸಿದ ರೂಪೇ ಕಿಸಾನ್ ಮತ್ತು ಡೆಬಿಟ್ ಕಾರ್ಡ್‌ಗಳು ರಾಷ್ಟ್ರಮಟ್ಟದಲ್ಲಿಯೇ ಮೊದಲು' ಎಂದು ಜಿ.ಆರ್.ಜಿಂತಾಲ್ ಹೇಳಿದರು.
ದಕ್ಷಿಣ ಕನ್ನಡದ ಸಹಕಾರಿ ಬ್ಯಾಂಕ್‌ಗಳಲ್ಲಿ ಗ್ರಾಹಕರಿಗೆ ವಿಶ್ವ ಮಟ್ಟದ ಸೌಲಭ್ಯ ವ್ಯವಸ್ಥೆ ಸಿಗುತ್ತಿದೆ. ಇದನ್ನು ಬೇರೆಡೆ ಮಾದರಿ ಉದಾಹರಣೆಯಾಗಿ ಹೇಳುತ್ತೇನೆ ಎಂದು ಪ್ರಶಂಶಿಸಿದರು.
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, 'ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ರೈತರಿಗೆ ಹಾಗೂ ಬ್ಯಾಂಕ್‌ನ ಎಲ್ಲ ಗ್ರಾಹಕರಿಗೆ ಎಟಿಎಂ ಕಾರ್ಡ್ ನೀಡುವುದು ನಮ್ಮ ಕನಸಿನ ಯೋಜನೆಯಾಗಿತ್ತು. ಇದೀಗ ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರದ ಆರ್ಥಿಕ ಸೇರ್ಪಡೆ ಯೋಜನೆಯಂತೆ ನಬಾರ್ಡ್ ಸಹಯೋಗದೊಂದಿಗೆ ಎಲ್ಲ ಕೃಷಿಕರಿಗೂ ರೂಪೇ ಕಾರ್ಡ್ ನೀಡಲು ಮುಂದೆ ಬಂತು. ಇಲ್ಲಿಯವರೆಗೆ ವೀಸಾ, ಮಾಸ್ಟರ್ ಕಾರ್ಡ್ ಹೆಸರಲ್ಲಿ ಎಟಿಎಂ ಕಾರ್ಡ್ ವಿತರಣೆಯಾಗುತ್ತಿದ್ದು, ಇದರಿಂದ ಬರುವ ಆದಾಯ ಹೊರ ರಾಷ್ಟ್ರಗಳಿಗೆ ಹೋಗುತ್ತಿತ್ತು. ಕಳೆದ ವರ್ಷದಲ್ಲಿಯೇ 650 ಕೋಟಿ ಆದಾಯ ಹೊರ ರಾಷ್ಟ್ರಕ್ಕೆ ಹೋಗಿದೆ. ಆದ್ದರಿಂದ ಭಾರತದ ಕೆಲವು ಬ್ಯಾಂಕ್‌ಗಳು ಒಟ್ಟು ಸೇರಿ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ ಸ್ಥಾಪನೆ ಮಾಡಿ ರೂಪೇ ಕಾರ್ಡ್ ಪರಿಚಯಿಸಿದೆ. ಈ ಕಾರ್ಡ್‌ನಿಂದ ಬರುವ ಆದಾಯ ಭಾರತಕ್ಕೆ ಸಿಗುತ್ತದೆ. ಎಲ್ಲ ಎಟಿಎಂಗಳು ರೂಪೇ ಕಾರ್ಡ್ ಸ್ವೀಕರಿಸುವಂತೆ ರಿಸರ್ವ್ ಬ್ಯಾಂಕ್ ಆದೇಶಿಸಿದೆ ಎಂದರು. ಜಿಲ್ಲೆಯ ಎಲ್ಲ 166 ಪ್ರಾಥಮಿಕ ಸಹಕಾರ ಸಂಘದಲ್ಲಿ ಮತ್ತು ಅದರ ಶಾಖೆಗಳಲ್ಲಿ ಮೈಕ್ರೋ ಎಟಿಎಂ ಮೆಶಿನ್ ಇಡಲಾಗುವುದು. ಇದಕ್ಕೆ ಆಧಾರ್ ಕಾರ್ಡ್ ನಂಬರ್ ಜೋಡಿಸಲಾಗುತ್ತಿದ್ದು, ಸರ್ಕಾರದ ಸಬ್ಸಿಡಿ ಸೌಲಭ್ಯಕ್ಕೆ ಬಳಸಬಹುದು. ದೈನಂದಿನ ನಗದೀಕರಣದ ಗರಿಷ್ಠ ಮಿತಿ 25 ಸಾವಿರ.
ಬ್ಯಾಂಕ್ ಮುಂದಿನ ಹಂತವಾಗಿ ಕರೆನ್ಸಿ ನೋಟು ಬಳಸದೆಯೇ ಇಂಟರ್ನೆಟ್ ಬ್ಯಾಂಕಿಂಗ್ ಅಳವಡಿಸುವ ಯೋಜನೆ ಹೊಂದಿದೆ, ರೈತನ ಮಗ ವಿದ್ಯಾಭ್ಯಾಸಕ್ಕಾಗಿ ದೂರ ಪ್ರದೇಶಕ್ಕೆ ತೆರಳಿದ್ದರೆ ಮನೆಯಲ್ಲಿಯೇ ಕುಳಿತು ಮಗನ ಖಾತೆಗೆ ಹಣ ಕಳುಹಿಸಬಹುದಾಗಿದೆ. ಈ ಯೋಜನೆ ಬಗ್ಗೆ ಎಲ್ಲ ಪ್ರಾಥಮಿಕ ಸಹಕಾರ ಸಂಘದ ಸಿಬ್ಬಂದಿ ಹಾಗೂ ಬ್ಯಾಂಕ್‌ನ ಒಟ್ಟು 1,200 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದರು.
ಐವರು ರೈತರಿಗೆ ಕಾರ್ಡ್‌ಗಳನ್ನು ಸಾಂಕೇತಿಕವಾಗಿ ನೀಡಲಾಯಿತು. ಈ ಸಂದರ್ಭ ರೂಪೇ ಕಾರ್ಡ್ ಅಳವಡಿಸಲು ಶ್ರಮಿಸಿದ ಬ್ಯಾಂಕ್‌ನ ವಿಶ್ವನಾಥ ನಾಯಕ್ ಮತ್ತು ತಂತ್ರಜ್ಞಾನ ಮುಖ್ಯಸ್ಥ ಸುನೀಲ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಐಡಿಬಿಐ ಸಹಾಯಕ ಮಹಾಪ್ರಬಂಧಕ ರಾಜೇಂದ್ರ ಪೂಜಾರ್, ಎಸ್‌ಸಿಸಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕ ರಾಜಾರಾಮ್ ಭಟ್, ವೆಂಕಟಸ್ವಾಮಿ, ಗೋಪಾಲಕೃಷ್ಣ ಭಟ್ ಇದ್ದರು.