ಎತ್ತಿನಹೊಳೆ ಶಂಕುಸ್ಥಾಪನೆ ದಿನ ಬಂದ್
ಮಂಗಳೂರು: ಚಿಕ್ಕಬಳ್ಳಾಪುರದಲ್ಲಿ ನೇತ್ರಾವತಿ ನದಿ ತಿರುವಿನ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನಡೆಯುವ ದಿನ ಮಾ.3ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್‌ಗೆ ನೇತ್ರಾವತಿ ರಕ್ಷಣೆ ಸಮಿತಿ ಕರೆ ನೀಡಿದೆ.
ಕುಡಿಯುವ ನೀರು ಯೋಜನೆ ಹೇಳಿಕೊಂಡು, ಬೆಂಗಳೂರು, ಹಾಸನ, ಚಿಕ್ಕಬಳ್ಳಾಪುರದಲ್ಲಿ ನೀರಾವರಿಗೆ ಅಲ್ಲಿನ ಎಲ್ಲ ನೀರಿನ ಟ್ಯಾಂಕ್‌ಗಳನ್ನು ತುಂಬಿಸುವ ಯೋಜನೆ. ಕುಡಿಯುವ ನೀರು ಯೋಜನೆ ಎಂದು ಸುಳ್ಳು ಹೇಳಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಬಳಿಕ ಇಲ್ಲಿ ನೀರಿಗೆ ಬರ ಬರುತ್ತದೆ, ಆದ್ದರಿಂದ ನಾವೆಲ್ಲರೂ ಪ್ರತಿಭಟಿಸುತ್ತಿದ್ದೇವೆ ಎಂದು ಸಮಿತಿ ಮುಖಂಡ ವಿಜಯಕುಮಾರ್ ಶೆಟ್ಟಿ ಹೇಳಿದರು.
'ನಾವು ಎಲ್ಲೂ ಓಡಿ ಹೋಗಿಲ್ಲ. ವೀರಪ್ಪ ಮೊಯ್ಲಿಗೆ ಕೇಳುತ್ತೇನೆ. ಕೇಂದ್ರ ಪರಿಸರ ಸಚಿವೆ ಜಯಂತಿ ನಟರಾಜನ್ ಅನುಮತಿ ನೀಡಿಲ್ಲ. ಇವರು ಹೇಗೆ ಪರವಾನಗಿ ನೀಡಿದರು. ಜಿಲ್ಲೆಯವರಿಂದಲೇ ಇಲ್ಲಿನ ಜನರಿಗೆ ಅನ್ಯಾಯ ಆಗುತ್ತಿದೆ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರಿಗೆ ತಲೆಯಲ್ಲಿ ಮಿದುಳಿಲ್ಲ, ಅದಕ್ಕೆ ಇಂಥ ಕೆಲಸ ಮಾಡಿದ್ದಾರೆ' ಎಂದು ವಿಜಯಕುಮಾರ್ ಶೆಟ್ಟಿ ಟೀಕಿಸಿದರು.
ಏಕೀಕರಣ ಭರವಸೆ ಎಲ್ಲಿ?: ಹೋರಾಟಗಾರ ಪಿ.ವಿ. ಮೋಹನ್ ಮಾತನಾಡಿ, ಕರ್ನಾಟಕ ಏಕೀಕರಣ ಸಂದರ್ಭ ಮದ್ರಾಸ್ ಪ್ರಾಂತ್ಯದಿಂದ ಕರ್ನಾಟಕಕ್ಕೆ ಸೇರ್ಪಡೆ ಮಾಡುವಾಗ ಇಲ್ಲಿನ ಜಲ, ನೆಲ ರಕ್ಷಣೆಗೆ ನೀಡಿದ ಭರವಸೆ ಎಲ್ಲಿ ಹೋಯಿತು. ವಿಶ್ವ ತುಳು ಸಮ್ಮೇಳನದಲ್ಲಿ ನೇತ್ರಾವತಿ ತಿರುವು ಯೋಜನೆ ಮಾಡ ಕೂಡದು ಎಂದು ನಿರ್ಣಯ ಮಾಡಲಾಗಿತ್ತು. ಜಿಲ್ಲಾ ಪಂಚಾಯ್ತಿ, ಸ್ಥಳಿಯಾಡಳಿತದಲ್ಲಿಯೂ ನಿರ್ಣಯ ಆಗಿದೆ. ಆದರೆ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ. ಇದು ಇಲ್ಲಿನ ಜನರ ಬದುಕಿನ ಪ್ರಶ್ನೆ. ಜನ ಮಾತನಾಡದಿದ್ದರೆ ಮುಂದೆ ಬರ ಬಂದಾಗ ನಮ್ಮ ಮಕ್ಕಳು ನಮ್ಮನ್ನು ಪ್ರಶ್ನಿಸಬಹುದು ಎಂದರು. ಬಂದ್ ವೇಳೆ ಕಷ್ಟ ಆಗುತ್ತದೆ ಆದರೆ ಮುಂದೆ ಕುಡಿಯುವ ನೀರು ಸಿಗದಿದ್ದರೆ ಸಂಕಷ್ಟ ಎದುರಿಸಬೇಕಾಗುತ್ತದೆ. ಎಲ್ಲರು ಮನೆಯ ಸಮಸ್ಯೆ ಎಂದು ಹೋರಾಟಕ್ಕೆ ಬೆಂಬಲ ನೀಡಬೇಕು ಎಂದರು.
'ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ಬಿಸ್ಲೇರಿ ಬಾಯ್ ಆಗಿರಬಹುದು, ನಾವು ನೇತ್ರಾವತಿ ನೀರು ಕುಡಿದು ಬದುಕುವವರು. ನಮಗೆ ತಿರುವು ಯೋಜನೆಯಿಂದ ತೊಂದರೆ ಆಗುತ್ತದೆ' ಎಂದು ಎಂ.ಜಿ. ಹೆಗಡೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದಿನೇಶ್ ಹೊಳ್ಳ, ಉತ್ತಮ ಆಳ್ವ, ಡೆನಿಸ್ ಡಿಸಿಲ್ವ, ಶಶಿರಾಜ್ ಕೊಳಂಬೆ ಇದ್ದರು.