ಆತ್ಮಹತ್ಯೆ ಬೆದರಿಕೆ: ಅನಾಮಿಕ ಯುವತಿಯಿಂದ ಪೊಲೀಸರಿಗೆ ಹುಸಿ ಕರೆ
ಪುತ್ತೂರು: ತಾನು ಪ್ರೀತಿಸುತ್ತಿದ್ದ ಯುವಕ ತನಗೆ ಕೈಕೊಟ್ಟಿದ್ದಾನೆ. ಇಲ್ಲಿನ ಜವುಳಿ ಅಂಗಡಿಯೊಳಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಯುವತಿಯೊಬ್ಬಳು ಐಜಿಪಿಗೆ ದೂರವಾಣಿ ಕರೆ ಮಾಡಿ ಪೊಲೀಸರನ್ನು ಪೇಚಿಗೆ ಸಿಲುಕಿಸಿದ ಘಟನೆ ಬುಧವಾರ ರಾತ್ರಿ ಪುತ್ತೂರಿನಲ್ಲಿ ನಡೆದಿದೆ.
ಅನಾಮಿಕ ಯುವತಿಯೊಬ್ಬಳು ಪಶ್ಚಿಮ ವಲಯ ಐಜಿಪಿಗೆ ಮತ್ತು ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ತಾನು ಪ್ರೀತಿಸುತ್ತಿದ್ದ ಯುವಕ ತನಗೆ ಕೈಕೊಟ್ಟಿದ್ದಾನೆ. ತಾನು ಇಲ್ಲಿನ ಜವುಳಿ ಅಂಗಡಿಯೊಂದರ ಒಳಗೆ ಅವಿತುಕೊಂಡಿದ್ದು, ರಾತ್ರಿ ಇಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಳು.
ಯುವತಿಯ ಪ್ರಾಣ ರಕ್ಷಣೆಯ ದೃಷ್ಟಿಯಿಂದ ತಕ್ಷಣವೇ ಸ್ಪಂದಿಸಿದ ಐಜಿಪಿ, ಯುವತಿಯನ್ನು ರಕ್ಷಿಸುವಂತೆ ಪುತ್ತೂರು ವಿಭಾಗದ ಡಿವೈಎಸ್ಪಿ ಎಚ್.ಡಿ. ಮೆಂಡೋನ್ಸಾ ಅವರಿಗೆ ಸೂಚಿಸಿದ್ದರು.
ಐಜಿಪಿ ಸೂಚನೆಯಂತೆ ಡಿವೈಎಸ್ಪಿ ಮೆಂಡೋನ್ಸಾ ನಗರ ಠಾಣೆಯ ಅಪರಾಧ ವಿಭಾಗದ ಎಸ್‌ಐ ಐತ್ತಪ್ಪ ಮತ್ತು ಜಯಶ್ರೀ ಶ್ಯಾನ್‌ಬೋಗ್ ಹಾಗೂ ಸಿಬ್ಬಂದಿ ಜವುಳಿ ಅಂಗಡಿಗೆ ತೆರಳಿ ಬಂದ್ ಮಾಡಲಾಗಿದ್ದ ಜವುಳಿ ಅಂಗಡಿಯ ಬಾಗಿಲು ತೆರೆಸಿ, ಅಂಗಡಿ ಮಾಲೀಕರ ಸಮಕ್ಷಮದಲಿ ಪರಿಶೀಲನೆ ನಡೆಸಿದರು. ಆದರೆ, ಅಂಗಡಿಯೊಳಗೆ ಯುವತಿ ಇರಲಿಲ್ಲ.