ಪಂಚಾಯಿತಿ ಸಿಬ್ಬಂದಿ ದ್ವಿಚಕ್ರ ವಾಹನಕ್ಕೆ ಬೆಂಕಿ
ಉಪ್ಪಿನಂಗಡಿ: ಪೆರಾಬೆ ಪಂಚಾಯಿತಿ ಸಿಬ್ಬಂದಿಯೊಬ್ಬರ ದ್ವಿಚಕ್ರ ವಾಹನಕ್ಕೆ ದುಷ್ಕರ್ಮಿಗಳು ಅಗ್ನಿ ಸ್ಪರ್ಶಗೈದ ಘಟನೆ ಗುರುವಾರ ನಡೆದಿದೆ.
ಪೆರಾಬೆ ಪಂಚಾಯಿತಿ ಬಿಲ್ ಕಲೆಕ್ಟರ್ ಪದ್ಮಾವತಿ .ಕೆ ಎಂಬವರಿಗೆ ಸೇರಿದ್ದ ದ್ವಿ ಚಕ್ರ ವಾಹನವನ್ನು ತಾನು ಕಾರ್ಯನಿರ್ವಹಿಸುತ್ತಿದ್ದ ಪಂಚಾಯಿತಿ ಕಚೇರಿ ಬಳಿ ನಿಲ್ಲಿಸಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ. ಸೀಮೆಎಣ್ಣೆ ಸುರಿದು ಅಗ್ನಿ ಸ್ಪರ್ಶಗೈದಿರುವುದಾಗಿ ದೂರಲಾಗಿದೆ.
ಪಂಚಾಯಿತಿ ಕಚೇರಿಗೆ ಶಿವರಾತ್ರಿಯ ನಿಮಿತ್ತ ರಜೆಯಿದ್ದರೂ ಲೆಕ್ಕ ಪತ್ರದ ಕೆಲಸದ ಒತ್ತಡವಿರುವ ಕಾರಣ ರಜಾ ದಿನದಲ್ಲೂ ಕೆಲಸ ನಿರ್ವಹಿಸಲು ಪಂಚಾಯಿತಿ ಸಿಬ್ಬಂದಿ ಕಚೇರಿಗೆ ಬಂದಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ವಾಹನವನ್ನು ಬೆಂಕಿಗಾಹುತಿಗೊಳಿಸುವ ಯತ್ನ ನಡೆದಿದೆ. ಕಿಡಿಗೇಡಿಗಳ ಯತ್ನದಿಂದಾಗಿ ವಾಹನದ ಹಿಂಭಾಗ ಸಂಪೂರ್ಣ ಸುಟ್ಟು ಹೋಗಿದೆ.
ದುರುದ್ದೇಶದಿಂದ ನನ್ನ ಮೇಲೆ ಕಿಡಿಗೇಡಿಗಳು ಕೆಲ ಸಮಯದಿಂದ ಕೀಟಲೆ ನೀಡುತ್ತಾ ಬಂದಿದ್ದು, ನನ್ನನ್ನು ಪಂಚಾಯಿತಿ ಕಚೇರಿಯಿಂದ ಕೆಲಸ ಬಿಡಿಸಿ ಹೋಗುವಂತೆ ಮಾಡುವ ಕೃತ್ಯ ಇದಾಗಿದೆ ಎಂದು ಪದ್ಮಾವತಿ ಆರೋಪಿಸಿದ್ದಾರೆ.
ಈ ಮಧ್ಯೆ ಪ್ರಕರಣದಲ್ಲಿ ಪಂಚಾಯಿತಿ ಸಹದ್ಯೋಗಿಗಳ ಪಾತ್ರದ ಬಗ್ಗೆಯೂ ಶಂಕೆ ಮೂಡಿದ್ದು, ಈ ಹಿನ್ನೆಲೆಯಲ್ಲಿ ಗುಮಾಸ್ತ ಗೋವಿಂದ ನಾಯ್ಕ, ಕಂಪ್ಯೂಟರ್ ಆಪರೇಟರ್ ಹರೀಶ್, ಜವಾನ ಉತ್ತೇಶ್ ಮೊದಲಾದವರನ್ನು ಉಪ್ಪಿನಂಗಡಿ ಪೊಲೀಸರು ಠಾಣೆಗೆ ಕರೆಯಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.