ಶಾಂತಿ ಸಮಿತಿ ಸಭೆಗೆ ಜನಪ್ರತಿನಿಧಿಗಳೇ ಇಲ್ಲ!
ಮಂಗಳೂರು: ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆ ಹಾಗೂ ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಜಿಲ್ಲಾಡಳಿತ ಶುಕ್ರವಾರ ನಡೆಸಿದ ಶಾಂತಿ ಸಮಿತಿ ಸಭೆಗೆ ಸಚಿವರು, ಜಿಲ್ಲೆಯ ಶಾಸಕರು ಸಾಮೂಹಿಕ ಗೈರಾಗಿದ್ದರು. ಈ ಸಭೆಯಲ್ಲಿ ಜಿಲ್ಲೆಯಲ್ಲಿ ಅಳವಡಿಸಲಾಗಿರುವ ಬ್ಯಾನರ್, ಪೋಸ್ಟರ್, ಕಟೌಟ್‌ಗಳನ್ನು ತೆರವುಗೊಳಿಸಲು ನಿರ್ಧರಿಸಲಾಯಿತು.
ಚುನಾವಣೆ ವೇಳೆ ಯಾವುದೇ ಬ್ಯಾನರ್, ಕಟೌಟ್ ಅಳವಡಿಕೆಗೆ ಅವಕಾಶ ನೀಡದಿರುವ ಇಂಗಿತವನ್ನು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ವ್ಯಕ್ತಪಡಿಸಿದರು.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಚುನಾವಣೆ ನೀತಿ ಸಂಹಿತೆ ವೇಳೆ ಧಾರ್ಮಿಕ ಉತ್ಸವಗಳ ಬ್ಯಾನರ್‌ಗಳಿಗೆ ಅನುಮತಿ ನೀಡಬೇಕು. ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಕೌನ್ಸೆಲಿಂಗ್ ಕೊಡಬೇಕು. ಅಹಿತಕರ ಘಟನೆಗಳಲ್ಲಿ ಅನವಶ್ಯಕ ನಿರಪರಾಧಿಗಳನ್ನು ಬಂಧಿಸಬಾರದು, ಅನಧಿಕೃತ ಬ್ಯಾನರ್, ಕಟೌಟ್‌ಗಳನ್ನು ಮಹಾನಗರ ಪಾಲಿಕೆ ತೆರವುಗೊಳಿಸಬೇಕು. 15 ದಿನಕ್ಕೊಮ್ಮೆ ಇಂಥ ಶಾಂತಿ ಸಮಿತಿ ಸಭೆ ನಡೆಸಬೇಕು. ತಾಲೂಕು ಮಟ್ಟದಲ್ಲೂ ಸಭೆ ಜರುಗಿಸಬೇಕು ಎಂದು ಆಗ್ರಹಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯತೀಶ್ ಬೈಕಂಪಾಡಿ, ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲು, ಬಿಜೆಪಿ ಮೀನುಗಾರಿಕಾ ವಿಭಾಗ ಮುಖಂಡ ನಿತಿನ್ ಕುಮಾರ್, ಬದ್ರಿಯಾ ಕಾಲೇಜು ಪ್ರಾಂಶುಪಾಲ ಡಾ.ಎನ್.ಇಸ್ಮಾಯಿಲ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸದಾಶಿವ ಉಳ್ಳಾಲ್, ಕ್ರೈಡೈ ಅಧ್ಯಕ್ಷ ಪುಷ್ಪರಾಜ್ ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ್, ಸಹಾಯಕ ಕಮಿಷನರ್ ಡಾ.ಪ್ರಶಾಂತ್, ಎಸ್ಪಿ ಶಂತನು ಸಿನ್ಹ, ನಗರ ಡಿಸಿಪಿ ವಿಷ್ಣುವರ್ಧನ್ ಇದ್ದರು.
ಜನಪ್ರತಿನಿಧಿಗಳ ಸಾಮೂಹಿಕ ಗೈರು
ಜಿಲ್ಲಾ ಶಾಂತಿ ಸಮಿತಿ ಸಭೆಯಲ್ಲಿ ಜನಪ್ರತಿನಿಧಿಗಳಿಗೆ ಆಹ್ವಾನ ಇದ್ದರೂ ಎಲ್ಲರೂ ಗೈರಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಯಾರೂ ಸಭೆಗೆ ಹಾಜರಾಗಲಿಲ್ಲ. ಜನಪ್ರತಿನಿಧಿಗಳಿಗೆ ಶಾಂತಿ ಸಭೆಯ ಬಗ್ಗೆ ಇರುವ ಕಾಳಜಿಯನ್ನು ಇದು ಸಾಬೀತುಪಡಿಸಿತು.
ಬಂದ್: ಪರೀಕ್ಷೆಗಳಿಗೆ ಅಡ್ಡಿ ಸಲ್ಲದು
ಸೋಮವಾರ ಕರೆ ನೀಡಲಾಗಿರುವ ಜಿಲ್ಲಾ ಬಂದ್‌ಗೆ ಶಾಂತಿಯುತವಾಗಿ ಪ್ರತಿಕ್ರಿಯಿಸುವಂತೆ ಜಿಲ್ಲಾಡಳಿತ ಸಂಘಟನೆಗಳಿಗೆ ಕರೆ ನೀಡಿದೆ. ಆ ದಿನ ನಡೆಯುವ ವಿವಿಧ ಪರೀಕ್ಷೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಅಡ್ಡಿ ಉಂಟು ಮಾಡದೆ, ಸುಗಮವಾಗಿ ಪರೀಕ್ಷೆಗಳನ್ನು ನಡೆಸಲು ಅನುವು ಮಾಡಿಕೊಂಡುವಂತೆ ಸಂಘಟಕನ್ನು ಕೋರಿದ್ದಾಗಿ ಜಿಲ್ಲಾಧಿಕಾರಿ ಇಬ್ರಾಹಿಂ ಮಾಧ್ಯಮದವರಿಗೆ ತಿಳಿಸಿದ್ದಾರೆ.