'ಅಡಕೆ ನಿಷೇಧ' ಕ್ಯಾಂಪ್ಕೋ, ಬಿಜೆಪಿ ಅಪಪ್ರಚಾರ: ಸೊರಕೆ
ಪುತ್ತೂರು: ಅಡಕೆಯನ್ನು ಯಾವುದೇ ಕಾರಣಕ್ಕೂ ನಿಷೇಧ ಮಾಡುವ ಪ್ರಶ್ನೆಯಿಲ್ಲ ಎಂದು ಕೆಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆದರೂ, ಬಿಜೆಪಿ ಮತ್ತು ಬಿಜೆಪಿ ಪ್ರಾಯೋಜಿತ ಕ್ಯಾಂಪ್ಕೋ ಸಂಸ್ಥೆ ಅಡಕೆ ನಿಷೇಧವಾಗುತ್ತದೆ ಎಂದು ಅಪಪ್ರಚಾರ ಮಾಡುವ ಮೂಲಕ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದ್ದಾರೆ.
ಪುತ್ತೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕೆಲವೊಂದು ವಿಚಾರದಲ್ಲಿ ಬಿಜೆಪಿ ಸುಳ್ಳು ಪ್ರಚಾರ ನಡೆಸಿ ಸೋತು ಹೋಗಿದೆ. ಅಡಕೆ ನಿಷೇಧ ವಿಚಾರವೇ ಸರ್ಕಾರದ ಮುಂದಿಲ್ಲ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರು ಸ್ಪಷ್ಟ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಕ್ಯಾಂಪ್ಕೋ ರೈತ ಪರ ಸಂಸ್ಥೆಯಲ್ಲ. ಅದು ಬಿಜೆಪಿಯ ಒಂದು ಕಂಪನಿ ಎಂದು ಆರೋಪಿಸಿದ ಸಚಿವರು, ಬಿಜೆಪಿಗೆ ರಾಜಕೀಯ ಲಾಭ ತಂದು ಕೊಡುವುದೇ ಅದರ ಕೆಲಸ ಎಂದು ಆರೋಪಿಸಿದರು. 94/ಸಿ ತಿದ್ದುಪಡಿ ಮಸೂದೆಗೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮತ್ತು ಬಿಜೆಪಿ ವಿರೋಧ ಮಾಡುತ್ತಿದ್ದಾರೆ. ಈ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿದವರಿಗೆ ಹಕ್ಕುಪತ್ರ ನೀಡಲು ಸರ್ಕಾರ ಮುಂದಾಗಿದ್ದು, ಈ ಮಸೂದೆಗೆ ವಿಧಾನ ಸಭೆಯಲ್ಲಿ ಅಂಗೀಕಾರ ದೊರೆತಿದೆ. ವಿಧಾನ ಪರಿಷತ್ನಲ್ಲಿ ಬಿಜೆಪಿ ಮಸೂದೆಗೆ ವಿರೋಧ ಮಾಡಿರುವ ಕಾರಣ ಅದನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದರು. ಶಾಸಕಿ ಶಕುಂತಳಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ನಿಕಟ ಪೂರ್ವಾಧ್ಯಕ್ಷ ಎನ್. ಸುಧಾಕರ ಶೆಟ್ಟಿ, ಪುರಸಭಾ ಮಾಜಿ ಸದಸ್ಯ ಇಸಾಖ್ ಸಾಲ್ಮರ, ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿ' ಸೋಜಾ ಇದ್ದರು.