ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಒಂಭತ್ತು ವರ್ಷಗಳಲ್ಲಿ 20 ಸಾವಿರ ಜಾನುವಾರು ಕದ್ದ ಆರೋಪಿ ಸೆರೆ

Lingaraj Badiger
Updated On : 2 Jan 2014, 12:57 pm

ಮಂಗಳೂರು: ಜಿಲ್ಲೆಯಲ್ಲಿ ಅವ್ಯಾಹತ ಜಾನುವಾರು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಬಾಳ ಕಳವಾರು ಚರ್ಚ್ಗುಡ್ಡೆ ನಿವಾಸಿ ಹುಸೇನ್ ಕಬೀರ್ ಯಾನೆ ಕಬ್ಬಿ ಯಾನೆ ದೊಡ್ಡ ಕಬ್ಬಿ(35) ಮತ್ತು ಜಬ್ಬಾರ್ ಹುಸೇನ್ ಯಾನೆ ಜಬ್ಬಿ(26)ರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
 ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನೊಬ್ಬ ಆರೋಪಿ ತಲೆ ಮರೆಸಿದ್ದಾನೆ.
ಬಂಧಿತ ಆರೋಪಿಗಳು ಕಳೆದ 9 ವರ್ಷದಿಂದ 20 ಸಾವಿರಕ್ಕೂ ಅಧಿಕ ಜಾನುವಾರು ಹತ್ಯೆ ಮಾಡಿರುವುದನ್ನು ಪೊಲೀಸರಲ್ಲಿ ಒಪ್ಪಿಕೊಂಡಿದ್ದಾರೆ. ಹುಸೇನ್ ಕಬೀರ್ ಅಂತಾರಾಜ್ಯ ಕಳ್ಳನಾಗಿದ್ದು, ಕುಖ್ಯಾತ ಕೈದಿ ಕನ್ನರಡಿ ಹನೀಫ್ನ ಸಹಚರ. ಈತನ ವಿರುದ್ಧ ಚಿಕ್ಕಮಗಳೂರಿನ ನ್ಯಾಯಾಲಯ ಅನೇಕ ಬಾರಿ ವಾರಂಟ್ ಜಾರಿಗೊಳಿಸಿತ್ತು. ಆದರೆ ಆರೋಪಿ ತಲೆಮರೆಸಿದ್ದ. ಜಬ್ಬಾರ್ ಹುಸೇನ್ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡು ಸಭ್ಯತೆಯ ಸೋಗು ಹಾಕುತ್ತಿದ್ದ. ಈತನ ವಿರುದ್ಧವೂ ಜಿಲ್ಲೆಯ ಅನೇಕ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಜೈಲಿನಿಂದ ಬಿಡುಗಡೆಯಾದ ಕೂಡಲೇ ಯಾವುದಾದರೂ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳುವುದು ಈತನ ಖಯಾಲಿ.
ಕದ್ದ ಜಾನುವಾರನ್ನು ರು. 25ರಿಂದ ರು. 30 ಸಾವಿರಕ್ಕೆ ಮಾರಾಟ ಮಾಡಿ 300ರಿಂದ 400 ಕಿಲೋ ಮಾಂಸ ಮಾಡುತ್ತಿದ್ದರು. ಇದನ್ನು ಮಾರಾಟ ಮಾಡಿದಾಗ ಒಂದು ಲಕ್ಷ ವರೆಗೆ ಸಿಗುತ್ತಿತ್ತು. ಹೀಗೆ ದಿಢೀರ್ ಶ್ರೀಮಂತಿಕೆಯಲ್ಲಿ ವಿದೇಶಿ ಪ್ರವಾಸ ಮೋಜು, ಐಷಾರಾಮಿ ಜೀವನ ನಡೆಸುತ್ತಿದ್ದರು.
ಬಂಧಿತ ಆರೋಪಿಗಳು ಜುಲೈನಲ್ಲಿ ಕಾನ ಮುಖ್ಯರಸ್ತೆ ಹಳಿ ಮಹಾದೇವಿ ಎಂಬವರ ಮನೆಯಿಂದ ದನ ಮತ್ತು ಕರುವನ್ನು ಕದ್ದಿದ್ದರು. ಮನೆ ಮಂದಿ ಆಕ್ಷೇಪಿಸಿದಾಗ ಮಾರಕಾಯುಧ ತೋರಿಸಿ ಬೆದರಿಸಿ ಜಾನುವಾರನ್ನು ಕರೆದೊಯ್ದಿದ್ದರು. ಅದನ್ನು ಟಾಟಾ ಸುಮೋದಲ್ಲಿ ತುಂಬಿಸಿ ಕಾಲ್ಕಿತ್ತಿದ್ದರು. ಇದೇ ತಂಡ ಮುಕ್ಕದ ಜಗದೀಶ್ ಶೆಟ್ಟಿ ಎಂಬವ ಮನೆಯಿಂದಲೂ ದನ ಸಾಗಾಟ ಮಾಡಿತ್ತು.
ದ.ಕ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಿಂದ ಅವ್ಯಾಹತವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಈ ತಂಡ, ರಸ್ತೆ ಬದಿ ಜಾನುವಾರು ಸಿಗದೇ ಇದ್ದಾಗ ಹಟ್ಟಿಗೆ ತೆರಳಿ ಮನೆ ಮಂದಿಯನ್ನು ಬೆದರಿಸಿ ಜಾನುವಾರು ಕಳವು ಮಾಡುತ್ತಿತ್ತು. ಈ ಮೊದಲು ಸುರತ್ಕಲ್ ಪೊಲೀಸರು 5 ಮಂದಿ ಜಾನುವಾರು ಕಳ್ಳರನ್ನು ಬಂಧಿಸಿದ್ದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement