ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೈಕಂಬದಲ್ಲಿ ರೇವ್ ಪಾರ್ಟಿ ಶಂಕೆ: ಸ್ಥಳೀಯರ ಆಕ್ರೋಶ

Lingaraj Badiger
Updated On : 2 Jan 2014, 12:57 pm

ಬಂಟ್ವಾಳ: ಬಿ.ಸಿ.ರೋಡ್ ಕೈಕಂಬ ಬಳಿ ಸರ್ಕಾರದ ಜವಳಿ ಮತ್ತು ಕೈಮಗ್ಗ ಇಲಾಖೆ ವತಿಯಿಂದ ಕಾರ್ಯಾಚರಿಸುತ್ತಿರುವ ಗ್ಲೋರಿಯಾ ಸಂಸ್ಥೆಯಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ಯುವಕ, ಯುವತಿಯರು ನೃತ್ಯ ಮಾಡುತ್ತಿದ್ದು, ರೇವ್ ಪಾರ್ಟಿ ನಡೆಯುತ್ತಿದೆ ಎಂಬ ಸುದ್ದಿ ಹಬ್ಬಿ ಪರಿಸರದಲ್ಲಿ ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣಗೊಂಡಿತ್ತು.  ಹೊಸ ವರ್ಷಾಚರಣೆ ಪ್ರಯುಕ್ತ ಸಂಸ್ಥೆಯಲ್ಲಿ ಡಿಜೆ, ಕೇಕ್ ಕತ್ತರಿಸುವುದು ಇತ್ಯಾದಿ ಕಾರ್ಯಕ್ರಮವನ್ನು ಮಧ್ಯಾಹ್ನ ಆಯೋಜಿಸಲಾಗಿತ್ತು. ಸಂಜೆವರೆಗೂ ಡಿಜೆ ಮುಂದುವರಿದ ಪರಿಣಾಮ ಸ್ಥಳೀಯರು ಸಂಸ್ಥೆಗೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದ್ದು, ಪಾರ್ಟಿ ರದ್ದುಗೊಳಿಸುವಂತೆ ಸೂಚಿಸಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.
ರೇವ್ ಪಾರ್ಟಿ ಅಲ್ಲ- ಸ್ಪಷ್ಟನೆ: ಹೊಸ ವರ್ಷದ ಪ್ರಯುಕ್ತ ಪಾರ್ಟಿ ಆಯೋಜಿಸಿದ್ದೆವು. ಈ ಸಂಭ್ರಮದಲ್ಲಿ ಡಿಜೆ, ಕೇಕ್ ಕತ್ತರಿಸಿದ್ದೆವು. ಆದರೆ ಇದು ರೇವ್ ಪಾರ್ಟಿಯಲ್ಲ ಎಂದು ಸಂಸ್ಥೆಯ ಸಿಬ್ಬಂದಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಅಪಘಾತ: ಇಬ್ಬರಿಗೆ ಗಾಯ
ಮೂಲ್ಕಿ: ಹಳೆಯಂಗಡಿ ಜಂಕ್ಷನ್ ಬಳಿ ಮಂಗಳೂರಿನಿಂದ ಬರುತ್ತಿದ್ದ ಬೈಕ್ ಮತ್ತು ಮೂಲ್ಕಿ ಕಡೆಯಿಂದ ಬರುತ್ತಿದ್ದ ಪಿಕಅಪ್ ವಾಹನದ ನಡುವೆ ಬುಧವಾರ ಬೆಳಗ್ಗೆ ಡಿಕ್ಕಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ತಿರುವು ಪಡೆಯುತ್ತಿದ್ದಾಗ ಅತೀ ವೇಗವಾಗಿ ಬಂದ ಪಿಕಅಪ್ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರರಾದ ಬಶೀರ್, ಸಹಸವಾರ ಮಹಮ್ಮದ್ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ-ಬೈಕ್ ಡಿಕ್ಕಿ; ಸವಾರ ಸಾವು
ಬೆಳ್ತಂಗಡಿ: ನಗರದ ಮೂರು ಮಾರ್ಗ ಜಂಕ್ಷನ್ ಬಳಿ ಮಂಗಳವಾರ ಮಧ್ಯರಾತ್ರಿ ಲಾರಿ-ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಬೆಳ್ತಂಗಡಿ ಲೈಲದ ರಾಘವೇಂದ್ರ ನಗರ ನಿವಾಸಿ ಮಹಮ್ಮದ್ ಶಬೀರ್ (22) ಮೃತರು. ಮಂಗಳವಾರ ರಾತ್ರಿ ಸುಮಾರು 2 ಗಂಟೆಯ ವೇಳೆ ಉಜಿರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಲಾರಿ ಬೆಳ್ತಂಗಡಿ ಸಂತೆಕಟ್ಟೆಯಿಂದ ಮನೆಗೆ ತೆರಳುತ್ತಿದ್ದ ಶಬೀರ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಏಟು ಬಿದ್ದಿದ್ದರಿಂದ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಶಬೀರ್ ಮೂರು ಮಾರ್ಗದ ಬಳಿ ಇರುವ ಮೋಟಾರ್ ಡ್ರೈವಿಂಗ್ ಸ್ಕೂಲ್ನಲ್ಲಿ ಚಾಲಕನಾಗಿ ದುಡಿಯುತ್ತಿದ್ದರು. ಅವರು ತಾಯಿ, ಓರ್ವ ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಕೂಟರ್ ಕಳವು ಆರೋಪಿ ನಿರ್ದೋಷಿ
ಪುತ್ತೂರು: ವ್ಯಕ್ತಿಯೊಬ್ಬರ ಮನೆಯಂಗಳದಿಂದ ಸ್ಕೂಟರ್ ಕಳವುಗೈದ ಆರೋಪಿಯನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಬನ್ನೂರು ಮೇಲ್ಮಜಲು ನಿವಾಸಿ ಪ್ರವೀಣ ಪಿ. ಎಂಬವರ ಬೈಕ್ 2008 ಮೇ 3ರಂದು ಕಳವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಪೊಲೀಸರು, ಚಿಕ್ಕಮಗಳೂರು ಜಿಲ್ಲೆಯ ಉಪ್ಪಳ್ಳಿ ನಿವಾಸಿ ಅಬೂಬಕ್ಕರ್ ಎಂಬಾತನನ್ನು ಬಂಧಿಸಿ ಸ್ಕೂಟರ್ ವಶಪಡಿಸಿದ್ದರು. ಬಳಿಕ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯನ್ನು ದೋಷಮುಕ್ತಗೊಳಿಸಿ ತೀರ್ಪು  ನೀಡಿದೆ. ಆರೋಪಿ ಪರವಾಗಿ ನ್ಯಾಯವಾದಿಗಳಾದ ಸಂತೋಷ್ ಕುಮಾರ್ ಉಪ್ಪಿನಂಗಡಿ ಮತ್ತು ಕವನ್ ನಾಯ್ಕ್ ವಾದಿಸಿದ್ದರು.
ಅಪಘಾತ; ಬೈಕ್ ಸವಾರ ಮೃತ
ಕೋಟ: ಟಾಟಾ ವೆಂಚರ್ ವಾಹನ ಬೈಕಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಇಲ್ಲಿನ ತೆಕ್ಕಟ್ಟೆ ಗ್ರಾಮದ ಮಕ್ಕಿಬೆಟ್ಟು ಎಂಬಲ್ಲಿ ಮಂಗಳವಾರ ನಡೆದಿದೆ. ಮೃತರು ಪ್ರಭಾಕರ ಭಂಡಾರಿ. ಇವರು ತಂಗಿಯ ಮಗ ಯಶಸ್ನೊಂದಿಗೆ ಬೈಕಿನಲ್ಲಿ ತೆಕ್ಕಟ್ಟೆ ಕಡೆಗೆ ಹೋಗುವಾಗ ತೆಕ್ಕಟ್ಟೆ ಗ್ರಾಮದ ಮಕ್ಕಿಬೆಟ್ಟು ಎಂಬಲ್ಲಿ ಟಾಟಾ ವೆಂಚರ್ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡು ಬಂದ ಚಾಲಕ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಪ್ರಭಾಕರ ಭಂಡಾರಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾದಚಾರಿಗೆ ಬೈದ ಬೈಕ್
ಸವಾರನಿಗೆ ತಂಡ ಹಲ್ಲೆ
ಮಂಗಳೂರು: ರಸ್ತೆಗೆ ಅಡ್ಡಬಂದ ಪಾದಚಾರಿಯನ್ನು ಬೈದದ್ದಕ್ಕೆ ಹಿಂದಿನಿಂದ ಕಾರಿನಲ್ಲಿ ಬಂದ ನಾಲ್ವರು ಬೈಕ್ ಸವಾರನಿಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಘಟನೆ ಬುಧವಾರ ಸಂಭವಿಸಿದೆ. ಸ್ಟೇಟ್ಬ್ಯಾಂಕ್ನಲ್ಲಿ ಚಾವಿ ಅಂಗಡಿ ಹೊಂದಿರುವ ಮಹಮ್ಮದ್ ಇಸಾಕ್ ಬೆಳಗ್ಗೆ ಬೈಕ್ನಲ್ಲಿ ಬರುತ್ತಿದ್ದರು. ಮಂಗಳಾ ಕ್ರೀಡಾಂಗಣ ಬಳಿ ಬರುತ್ತಿದ್ದಾಗ ಪಾದಚಾರಿಯೊಬ್ಬರು ಅಡ್ಡಬಂದರು. ಬೈಕ್ ನಿಲ್ಲಿಸಿ ಇಸಾಕ್ ಜೋರು ಮಾಡಿ ಮುಂದಕ್ಕೆ ಹೊರಟರು. ಅಷ್ಟರಲ್ಲಿ ಹಿಂದಿನಿಂದ ಕಾರಿನಲ್ಲಿ ಬಂದ ತಂಡ ಬೈಕ್ ಅಡ್ಡಗಟ್ಟಿ ಇಸಾಕ್ರನ್ನು ಪ್ರಶ್ನಿಸಿತು. ಪಾದಚಾರಿಗೆ ಬೈದದ್ದನ್ನು ಪ್ರಶ್ನಿಸಿ ಇಸಾಕ್ ಮೇಲೆ ನಾಲ್ವರು ಹಲ್ಲೆ ನಡೆಸಿದರು. ಇಸಾಕ್ನ್ನು ರಕ್ಷಿಸಲು ಬಂದ ಸಹಸವಾರನಿಗೂ ಹಲ್ಲೆ ನಡೆಸಿದರು. ಹಲ್ಲೆ ನಡೆಸಿದವರ ಪೈಕಿ ಒಬ್ಬಾತನ ಹೆಸರು ಚೋನು ಎಂದು ಇಸಾಕ್ ಪೊಲೀಸರಿಗೆ ದೂರು ನೀಡಿದ್ದಾರೆ. ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾರು- ಲಾರಿ ಡಿಕ್ಕಿ: ಚಾಲಕ ಗಂಭೀರ
ಉಪ್ಪಿನಂಗಡಿ: ಇಲ್ಲಿನ ಮಠ ಎಂಬಲ್ಲಿ ರಾ.ಹೆ. 75ರಲ್ಲಿ ಟೊಯೊಟಾ ಕಾರು ಮತ್ತು ಕಲ್ಲಿದ್ದಲು ಹೇರಿಕೊಂಡು ಹೋಗುತ್ತಿದ್ದ ಲಾರಿ ಪರಸ್ಪರ ಡಿಕ್ಕಿ ಹೊಡೆದು ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ. ಲಾರಿ ಚಾಲಕ ಬೆಂಗಳೂರಿನ ಯಶವಂತಪುರ ನಿವಾಸಿ ದಿನೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿನಿಂದ ಬಳ್ಳಾರಿಯತ್ತ ಸಾಗುತ್ತಿದ್ದ ಲಾರಿ ಹಾಗೂ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಟೊಯೆಟಾ ಕಾರು ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ಲಾರಿ ಹೆದ್ದಾರಿ ಬದಿಯ ಕಮರಿಗೆ ಬಿದ್ದು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಪುತ್ತೂರು ಟ್ರಾಫಿಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜೀಪ್ ಚಾಲಕಗೆ ತಂಡ ಹಲ್ಲೆ
ಪುತ್ತೂರು: ಜೀಪ್ ಚಾಲಕನ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಮಂಗಳವಾರ ಕೋಡಿಂಬಾಡಿ ಸಮೀಪ ನಡೆದಿದೆ. ಕೋಡಿಂಬಾಡಿ ನಿವಾಸಿ ವೀರಪ್ಪ ಎಂಬವರ ಪುತ್ರ ರುಭೀಶ (29) ಅವರಿಗೆ ನಾಲ್ಕು ಬೈಕ್ಗಳಲ್ಲಿ ಬಂದ ತಂಡ ರಾತ್ರಿ ವೇಳೆ ಜೀಪ್ ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಉಪ್ಪಿನಂಗಡಿ- ಪುತ್ತೂರು ರಸ್ತೆ ತೀರ ಹದಗೆಟ್ಟಿದ್ದು, ಮುಂದೆ ಚಲಿಸುತ್ತಿದ್ದ ಜೀಪ್ನಿಂದಾಗಿ ಧೂಳು ಎದ್ದು, ಬೈಕ್ ಸವಾರಿಗೆ ತೊಂದರೆಯಾಗಿದೆ ಎಂದು ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಾಳು ಜೀಪ್ ಚಾಲಕ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮದ್ಯ ದಾಸ್ತಾನು: ಆರೋಪಿಗೆ ಜಾಮೀನು
ಪುತ್ತೂರು: ಮದ್ಯ ಅಕ್ರಮ ದಾಸ್ತಾನು ಇರಿಸಿದ ಆರೋಪಿಗೆ ನ್ಯಾಯಲಯವು ಜಾಮೀನು ನೀಡಿದೆ. ಪೆರ್ಲಂಪಾಡಿ ಪಾಂಬಾರು ಎಂಬಲ್ಲಿ ದಾಳಿ ನಡೆಸಿದ ಸಂಪ್ಯ ಎಸ್ಐ ಜಗದೀಶ್ ರೆಡ್ಡಿ ನೇತೃತ್ವದ ತಂಡ, ಪೆರ್ಲಂಪಾಡಿ ನಿವಾಸಿ ಧನಂಜಯ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಲಯವು ಆರೋಪಿಗೆ ನ್ಯಾಯಂಗ ಬಂಧನ ವಿಧಿಸಿತ್ತು. ಇದೀಗ ನ್ಯಾಯಲಯವು ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.
ವಾಚ್ಮೆನ್ ನಾಪತ್ತೆ
ಮಂಗಳೂರು: ಅನಾರೋಗ್ಯ ನಿಮಿತ್ತ ಸುರತ್ಕಲ್ ಆಸ್ಪತ್ರೆಗೆ ದಾಖಲಾಗಿದ್ದ ಯತೀಶ್(45)ಡಿ.28ರಿಂದ ನಾಪತ್ತೆಯಾದ ಘಟನೆ ವರದಿಯಾಗಿದೆ. ಅತ್ತಾವರ ನಿವಾಸಿಯಾದ ಈತ ನಗರದಲ್ಲಿ ವಾಚ್ಮೆನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಪಸ್ಮಾರ ಕಾಯಿಲೆಯಿಂದ ಬಳಸುತ್ತಿದ್ದ ಯತೀಶ್ ಡಿ.26ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನದಲ್ಲಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ಜಯಲಲಿತಾ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಾರೆ.  
ವ್ಯಕ್ತಿ ನಾಪತ್ತೆ; ದೂರು
ಬೆಳ್ತಂಗಡಿ: ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದ ಹಂತುವಾನಿ ಎಡತ್ತಾನಲಿ ನಿವಾಸಿ ಇ.ಎ.ಸಾಜು (43) ಎಂಬವರು ಚಾರ್ಮಾಡಿ ಸಮೀಪದ ಕಕ್ಕಿಂಜೆಯಲ್ಲಿ ತನ್ನ ಪತ್ನಿಯ ಮನೆಗೆ ಬಂದವರು ನಾಪತ್ತೆಯಾಗಿದ್ದಾರೆ. ಸಾಜು ಕಕ್ಕಿಂಜೆಯಲ್ಲಿರುವ ತನ್ನ ಪತ್ನಿಯ ಮನೆಗೆ ಡಿ.18ರಂದು ಬಂದಿದ್ದರು. ಮರುದಿನ ಬೆಳಗ್ಗೆ 8 ಗಂಟೆಯ ನಂತರ ನಾಪತ್ತೆಯಾಗಿದ್ದಾರೆ ಎಂದು ಸಾಜು ಅವರ ಭಾವ ಕಕ್ಕಿಮಜೆಯ ಅನೀಶ್ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement