ಕೋವಿ ಸಂಗ್ರಹ: ಆರೋಪಿಗಳಿಗೆ ಜಾಮೀನು
ಸುಳ್ಯ: ಕೋವಿ ಅಕ್ರಮವಾಗಿ ಹೊಂದಿದ್ದ ಆರೋಪಿಗಳಿಗೆ ಇಲ್ಲಿನ ನ್ಯಾಯಾಲಯ ಜಾಮೀನು ನೀಡಿದೆ. ಸುಳ್ಯ ಪೊಲೀಸರು ಗುತ್ತಿಗಾರು ಎಂಬಲ್ಲಿ ಅಂಗಡಿಯೊಂದಕ್ಕೆ ದಾಳಿ ಮಾಡಿದಾಗ ಗುತ್ತಿಗಾರಿನ ದಿವಾಕರ ಆಚಾರಿ, ಸುರೇಶ ಮತ್ತು ನಾಗೇಶ ಪಾರೆಪ್ಪಾಡಿ ಜೊತೆಗಿದ್ದು, ಈ ಪೈಕಿ ದಿವಾಕರ ಆಚಾರಿ ಕೈಯಲ್ಲಿದ್ದ ಚೀಲದಲ್ಲಿ ನಾಡ ಕೋವಿಯ ಮರದ ಪಾತಿ ಮತ್ತು ನಳಿಗೆ ಇದ್ದು, ಇದನ್ನು ಆರೋಪಿಗಳೆಲ್ಲರೂ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಿ ಮೂವರ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಮೂವರಿಗೂ ನ್ಯಾಯಂಗ ಬಂಧನವನ್ನು ವಿಧಿಸಿತ್ತು. ಆದರೆ, ಮೂರನೇ ಆರೋಪಿ ನಾಗೇಶ್ಗೆ ಅಸೌಖ್ಯದ ಕಾರಣದ ನಿಮಿತ್ತ ಸೂಕ್ತ ಚಿಕಿತ್ಸೆಗಾಗಿ ವೈದ್ಯಾಧಿಕಾರಿಗೆ ತೋರಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿತ್ತು. ಇದೀಗ ಜಾಮೀನು ಅರ್ಜಿಯ ವಿಚಾರಣೆ ನಡೆದು ಆರೋಪಿಗಳಾದ ಸುರೇಶ ಮತ್ತು ನಾಗೇಶ್ ಪಾರೆಪ್ಪಾಡಿಯನ್ನು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸುಳ್ಯ ನ್ಯಾಯಾಲಯದ ನ್ಯಾಯಾಧೀಶ ಸಿ.ಕೆ. ಬಸವರಾಜು ಆದೇಶ ಮಾಡಿದ್ದಾರೆ. ಆರೋಪಿಗಳ ಪರ ಎಂ. ವೆಂಕಪ್ಪ ಗೌಡ ಮತ್ತು ಚಂಪಾ ವಿ. ಗೌಡ ವಾದಿಸಿದ್ದರು.