ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನದಿ ತಿರುವು ವಿರುದ್ಧ 10ರಂದು ನಿರಶನ ಪ್ರತಿಭಟನೆ

Lingaraj Badiger
Updated On : 2 Jan 2014, 12:58 pm

ಮಂಗಳೂರು: ಎತ್ತಿನಹೊಳೆ ತಿರುವು ಯೋಜನೆ ಜಾರಿಗೊಳಿಸಿ ಜಿಲ್ಲೆಯ ಜನರ ಹಿತಾಸಕ್ತಿ ಬಲಿಕೊಡಲು ಮುಂದಾಗಿರುವುದನ್ನು ವಿರೋಧಿಸಿ ಸಹ್ಯಾದ್ರಿ ಸಂರಕ್ಷಣಾ ಸಂಚಯ ಕಾರ್ಯಕರ್ತರು ಜ.10ರಿಂದ ನಿರಶನ, ಪ್ರತಿಭಟನೆ, ಜನಜಾಗೃತಿಯಂಥ ಸರಣಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟಕ ದಿನೇಶ್ ಹೊಳ್ಳ, ಜ.10ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ನಿರಶನ, 24ರಂದು ಉಪ್ಪಿನಂಗಡಿಯಲ್ಲಿ ನೇತ್ರಾವತಿ ಸಂಗಮದಲ್ಲಿ ನೀರಿಗಿಳಿದು ಪ್ರತಿಭಟನೆ, ಫೆ.24ರಂದು ಉಳ್ಳಾಲದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈಗಾಗಲೇ ನಮ್ಮ ತಂಡ ಜಿಲ್ಲೆಯ ಹಲವಾರು ಕಡೆ ಜನಜಾಗೃತಿ ಕಾರ್ಯಕ್ರಮ ಮಾಡುತ್ತಿದೆ. ನೇತ್ರಾವತಿ ನದಿಮೂಲದ ಕಾಡು, ಕಣಿವೆ, ಗಿರಿಝರಿಗಳಲ್ಲಿ ಚಾರಣ ಮಾಡಿ ವೀಡಿಯೊ ಚಿತ್ರೀಕರಿಸಿ ನೇತ್ರಾವತಿ ನದಿ ತಿರುವು ಯೋಜನೆ ವಿರುದ್ಧವಾಗಿ 'ನೇತ್ರಾವತಿ ಉಳಿಸಿ' ಎಂಬ ಸಾಕ್ಷ್ಯಾಚಿತ್ರ ತಯಾರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸಾಕ್ಷ್ಯಚಿತ್ರದೊಂದಿಗೆ ಇನ್ನಷ್ಟು ಸಂಘ ಸಂಸ್ಥೆ, ಶಾಲಾ ಕಾಲೇಜು, ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
 ಜಿಲ್ಲೆಯಲ್ಲಿ ಧಾರ್ಮಿಕ ವಿಚಾರಗಳಿಗೆ ಒಟ್ಟಾಗುತ್ತಾರೆ, ಜೀವನದಿ ಸಂರಕ್ಷಣೆಗೆ ಹೋರಾಟಕ್ಕೆ ಯಾರೂ ಬರುತ್ತಿಲ್ಲ. ಆದರೂ ಪರಿಸರ ಹೋರಾಟಗಾರರ ಮೇಲೆ ಕೆಲವರು ಕೆಂಗಣ್ಣು ಬೀರುತ್ತಿದ್ದು, ನಾವ್ಯಾರೂ ವಿದೇಶದಿಂದ ಹಣ ಪಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಕಲಾವಿದರಾದ ಮಾಧವ ಉಳ್ಳಾಲ್, ಪ್ರವೀಣ್ ಕುಮಾರ್, ಸ್ವಪ್ನ ನರ್ಹೋನಾ, ಗಿರೀಶ್ ಕುಮಾರ್ ಹಾಜರಿದ್ದರು.
ಯುವತಿಗೆ ಹಲ್ಲೆ ಆರೋಪ 'ಸುಳ್ಳು': ಪ್ರಮಾಣಕ್ಕೆ ಬರಲು ಸವಾಲು
ಸುಳ್ಯ: ರಿಕ್ಷಾದಲ್ಲಿ ಮನೆಗೆ ಬರುತ್ತಿರುವಾಗ ರಿಕ್ಷಾ ತಡೆದು ಹಲ್ಲೆ ನಡೆಸಿದ್ದಾಗಿ ಯುವತಿಯೊಬ್ಬಳು ಸುಳ್ಯ ಪೊಲೀಸರಿಗೆ ದೂರು ನೀಡಿರುವುದು ಸತ್ಯಕ್ಕೆ ದೂರವಾಗಿದ್ದು, ಇದು ರಾಜಕೀಯ ಕುಮ್ಮಕ್ಕು ಎಂದು ಹೇಳಿರುವ ಆರೋಪಕ್ಕೆ ಒಳಗಾಗಿರುವ ಕೇಶವ ಕಕ್ಕೆಬೆಟ್ಟು, ಈ ವಿಚಾರವಾಗಿ ಜ. 12ರಂದು ಕೇವಳ ಕಂದ್ರಪ್ಪಾಡಿಯಲ್ಲಿ ಪ್ರಮಾಣಕ್ಕೆ ಬರಲಿ ಎಂದು ಸವಾಲು ಹಾಕಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಹನಕ್ಕೆ ಸೈಡ್ ಕೊಡುವ ವಿಚಾರದಲ್ಲಿ ಮಾತುಕತೆ ನಡೆದದ್ದು ನಿಜ. ಹಳೆಗೇಟು ಯುವತಿಗೆ ಹಲ್ಲೆ ಮಾಡಿದ್ದೇವೆ ಮತ್ತು ಅವಾಚ್ಯ ಶಬ್ದಗಳಿಂದ ಬೈದಿದ್ದೇವೆ ಎಂದು ಆರೋಪಿಸಿ ಪ್ರದೀಪ, ಪ್ರವೀಣ ಮತ್ತು ಕೇಶವ ಪ್ರಸಾದ್, ಜಯಪ್ರಕಾಶ್ ಎಂಬವರ ವಿರುದ್ಧ ಪೊಲೀಸ್ ದೂರು ನೀಡಿರುವುದು ರಾಜಕೀಯ ಪ್ರೇರಿತ ಮತ್ತು ಸತ್ಯಕ್ಕೆ ದೂರವಾದದ್ದಾಗಿದೆ. ಈ ವಿಚಾರದಲ್ಲಿ ಜ. 12ರಂದು ಸತ್ಯಪ್ರಮಾಣ ಮಾಡಲು ಸಚಿತ್ ರೈ ಮತ್ತು ದೂರು ನೀಡಿದ ಯುವತಿಗೆ ನೋಟಿಸ್ ಕಳುಹಿಸಲಾಗಿದೆ. ಅವರು ಬಂದು ಸತ್ಯಪ್ರಮಾಣ ಮಾಡಬೇಕು ಎಂದು ಸವಾಲು ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರವೀಣ್ ದುಗಲಡ್ಕ, ಪ್ರದೀಪ್ ಕಕ್ಕೆಬೆಟ್ಟು, ಪ್ರಸಾದ್ ಕಕ್ಕೆಬೆಟ್ಟು, ಜಯಪ್ರಕಾಶ್ ಇದ್ದರು.

ಅಪಘಾತದಲ್ಲಿ ಮೃತಪಟ್ಟ ಕೋತಿಗೆ ಅಂತ್ಯಸಂಸ್ಕಾರ
ಉಡುಪಿ: ಹಳೆ ವರ್ಷದ ಕೊನೆಯ ದಿನವಾದ ಮಂಗಳವಾರ ರಾ.ಹೆ. 66ರಲ್ಲಿ ಕಾರು ಡಿಕ್ಕಿಯಾಗಿ ಮೃತಪಟ್ಟ ಮಂಗವೊಂದಕ್ಕೆ ಪ್ರಾಣಿಪ್ರಿಯರು ಸೇರಿ ಧಾರ್ಮಿಕ ರೀತಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದ ಘಟನೆ ನಡೆದಿದೆ. ನಗರದ ಹೊರಭಾಗದಲ್ಲಿರುವ, ರಾ.ಹೆ. 66ರ ಬಲೈಪಾದೆಯ ರಂಜನ್ ಆಟೊಮೊಬೈಲ್ ಗ್ಯಾರೇಜ್ ಬಳಿ ರಸ್ತೆ ದಾಟುತ್ತಿದ್ದ ಮಂಗವೊಂದಕ್ಕೆ ಅತಿವೇಗದಿಂದ ಬಂದ ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿತು. ತಕ್ಷಣ ಅದನ್ನು ಆಸ್ಪತ್ರೆಗೆ ಸಾಗಿಸಿದ್ದು, ಪಶುವೈದ್ಯ ಡಾ. ಗೋಪಾಲಕೃಷ್ಣ ಭಟ್ ಚಿಕಿತ್ಸೆ ನಡೆಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೋತಿ ಸಾವನ್ನಪ್ಪಿತು. ನಂತರ ಅದನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಆದಿ ಉಡುಪಿಯಲ್ಲಿರುವ ಅರಣ್ಯ ಇಲಾಖೆ ಆವರಣದಲ್ಲಿ ಸಾಂಪ್ರದಾಯಕವಾಗಿ ಅಂತಸಂಸ್ಕಾರ ಮಾಡಲಾಯಿತು. ಉಪವಲಯ ಅರಣ್ಯ ಅಧಿಕಾರಿ ಸುರೇಶ್ ಗಾಣಿಗ, ಅರಣ್ಯ ರಕ್ಷಕ ಎಚ್. ದೇವರಾಜ ಪಾಣ, ಉದಯಕುಮಾರ್, ನಿತಿನ್, ಮನೋಜ್ ಹೆಗ್ಡೆ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement