ಸುದ್ದಿ ಸಂಕ್ಷೇಪ
ನದಿ ತಿರುವು ವಿರುದ್ಧ 10ರಂದು ಪ್ರತಿಭಟನೆ
ಮಂಗಳೂರು: ಎತ್ತಿನಹೊಳೆ ತಿರುವು ಯೋಜನೆ ಜಾರಿಗೊಳಿಸಿ ಜಿಲ್ಲೆಯ ಜನರ ಹಿತಾಸಕ್ತಿ ಬಲಿಕೊಡಲು ಮುಂದಾಗಿರುವುದನ್ನು ವಿರೋಧಿಸಿ ಸಹ್ಯಾದ್ರಿ ಸಂರಕ್ಷಣಾ ಸಂಚಯ ಕಾರ್ಯಕರ್ತರು ಜ.10ರಿಂದ ನಿರಶನ, ಪ್ರತಿಭಟನೆ, ಜನಜಾಗೃತಿಯಂಥ ಸರಣಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟಕ ದಿನೇಶ್ ಹೊಳ್ಳ, ಜ.10ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ನಿರಶನ, 24ರಂದು ಉಪ್ಪಿನಂಗಡಿಯಲ್ಲಿ ನೇತ್ರಾವತಿ ಸಂಗಮದಲ್ಲಿ ನೀರಿಗಿಳಿದು ಪ್ರತಿಭಟನೆ, ಫೆ.24ರಂದು ಉಳ್ಳಾಲದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮುಕ್ತ ವಿವಿ ಪ್ರವೇಶಕ್ಕೆ 4 ಕೊನೆ ದಿನ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿಯ ವಿವಿಧ ಕೋರ್ಸ್ಗಳಿಗೆ ವಿದ್ಯಾರ್ಥಿಗಳು ಪ್ರವೇಶಾತಿ ಹೊಂದುವ ಕೊನೆಯ ದಿನಾಂಕವನ್ನು ಜ.4ರವರೆಗೆ 400 ದಂಡ ಶುಲ್ಕದೊಂದಿಗೆ ವಿಸ್ತರಿಸಲಾಗಿದೆ ಎಂದುಉಪಕುಲಸಚಿವ (ಪ್ರವೇಶಾತಿವಿಭಾಗ) ತಿಳಿಸಿದ್ದಾರೆ. ಈ ಅವಧಿಯಲ್ಲಿ ಬಿ.ಎ, ಬಿ.ಕಾಂ, ಎಂ.ಎ, ಎಂ.ಕಾಂ, ಎಂ.ಎಸ್ಸಿ, ಬಿಎಲ್ಐಎಸ್ಸಿ, ಎಂಎಲ್ಐಎಸ್ಸಿ, ಎಲ್ಎಲ್ಎಂ, ಡಿಪ್ಲೊಮಾ, ಸರ್ಟಿಫಿಕೇಟ್ ಈ ಎಲ್ಲ ಕೋರ್ಸ್ ವಿದ್ಯಾರ್ಥಿಗಳು ಜ.4ರೊಳಗೆ ನಿಗದಿತ ಪ್ರವೇಶಾತಿ ಶುಲ್ಕದೊಂದಿಗೆ ದಂಡಶುಲ್ಕ ಪಾವತಿಸಿ ಪ್ರವೇಶಾತಿ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.
ಸರ್ಕಾರದಿಂದ ಅಪರಾಧಿಗಳ ರಕ್ಷಣೆ
ಮಂಗಳೂರು: ಅಪರಾಧ ಮಾಡಿದವರ ಜಾತಿ, ಧರ್ಮ ನೋಡಿ ಕ್ರಮ ಕೈಗೊಳ್ಳುವುದಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಆ ಮೂಲಕ ಕೋಮು ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಸಿ.ಟಿ. ರವಿ ಆರೋಪಿಸಿದ್ದಾರೆ. ಕೊಣಾಜೆ ವೈದ್ಯಕೀಯ ವಿದ್ಯಾರ್ಥಿನಿ ಅಪಹರಣ, ಅತ್ಯಾಚಾರ ಬ್ಲ್ಯಾಕ್ಮೇಲ್ ಸಹಿತ ಸರಣಿ ಪ್ರಕರಣಗಳು ನಡೆದಿದ್ದು, ಸರ್ಕಾರ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಕೊಣಾಜೆ ವಿದ್ಯಾರ್ಥಿನಿಯ ಅತ್ಯಾಚಾರ ಮಾಡಿಸಿ, ಬ್ಲೂಫಿಲಂ ತೆಗೆದು, ಬ್ಲ್ಯಾಕ್ಮೇಲ್ ಮಾಡಿ ಬರ್ಬರ ಕೃತ್ಯ ನಡೆಸಿದ್ದರೂ ಕೂಡಾ ಅತ್ಯಾಚಾರ ಪ್ರಕರಣ ಐಪಿಸಿ ಸೆ.375, 376 ದಾಖಲಾಗಿಲ್ಲ. ವೈದ್ಯಕೀಯ ಪರೀಕ್ಷೆ ಮಾಡಿಲ್ಲ. ಈ ಕೆಲಸ ಮಾಡದಂತೆ ಪೊಲೀಸರನ್ನು ತಡೆಯಲು ಯಾರ ಕೈವಾಡ ಇದೆ? ಕರಾವಳಿಯಲ್ಲಿ 3 ಸಾವಿರ ಹೆಣ್ಣುಮಕ್ಕಳು ನಾಪತ್ತೆ ಪ್ರಕರಣಗಳಿಗೂ ಇದಕ್ಕೂ ಸಂಬಂಧ ಇದೆ. ಹೆಣ್ಣುಮಕ್ಕಳನ್ನು ಅಪಹರಿಸಿ ವೇಶ್ಯಾವಾಟಿಕೆ ತಳ್ಳುವ, ಲವ್ ಜಿಹಾದ್ ಮತಾಂತರ ಜಾಲ, ಡ್ರಗ್ ಮಾಫಿಯಾ ಇದೆ. ಕೊಣಾಜೆಯಲ್ಲಿ ಇನ್ನೊಂದು ಅತ್ಯಾಚಾರ, ಬಂಟ್ವಾಳದ ಜಯರಾಮ ಪೂಜಾರಿ ಮರ್ಮಾಂಗ ಕತ್ತರಿಸಿದ್ದು, ಗಣಿ ಮಾಫಿಯಾ ವಿರುದ್ಧ ಸಾಕ್ಷಿ ಹೇಳಿದ್ದಕ್ಕೆ ಉದ್ಯಮಿ ನಾಯ್ಕ್ ಹತ್ಯೆ ಹೀಗೆ ಕರಾವಳಿಯಲ್ಲಿ ಸರಣಿ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದರು.
ಮಹಾಲಸ ಚಿತ್ರಕಲಾ ಶಾಲೆಗೆ ಪ್ರಶಸ್ತಿ
ಮಂಗಳೂರು: ಮಧ್ಯಪ್ರದೇಶದ ಉಜ್ಜೈನಿಯ ಕಲಾವರ್ಟಿ ಚಿತ್ರಕಲೆ ಸ್ಪರ್ಧೆಯ ಪೇಂಟಿಂಗ್ ವಿಭಾಗದಲ್ಲಿ ಮಂಗಳೂರು ಮಹಾಲಸ ಚಿತ್ರಕಲಾ ಶಾಲೆಯ 7 ವಿದ್ಯಾರ್ಥಿಗಳು ಪ್ರಶಸ್ತಿ, ನಗದು ಬಹುಮಾನ, ಸ್ವರ್ಣ ಪದಕ ಪಡೆದಿದ್ದಾರೆ. ಚೇತನ್, ಜ್ಯೋತ್ಸ್ನಾ ಪರಮೇಶ್ವರಿ, ಕಿರಣ ಪತ್ತಾರ್, ಪ್ರೀತಿಕಾ, ನವೀನ್ ಕುಮಾರ್, ಶಿವಸುಬ್ರಹ್ಮಣ್ಯ, ಸುಮಿತ್ರ ಪ್ರಶಸ್ತಿ ಪಡೆದ ಶಾಲೆಯ ವಿದ್ಯಾರ್ಥಿಗಳು.