ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಧಿವೇಶನಕ್ಕೆ ಅಡಕೆ ನಿಷೇಧ ಕರಿನೆರಳು

Lingaraj Badiger
Updated On : 3 Jan 2014, 12:57 pm

ಮಂಗಳೂರು: ಅಡಕೆ ಬೆಳೆಗಾರರ ಪರ ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳದಿದ್ದರೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ತೀವ್ರ ಹೋರಾಟ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
 ಅಡಕೆ ನಿಷೇಧ ವಿರುದ್ಧ ದ.ಕ.ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
 ಕೇಂದ್ರ ಆರೋಗ್ಯ ಇಲಾಖೆ ಅಡಕೆ ಹಾನಿಕಾರಕ, ಅದನ್ನು ನಿಷೇಧಿಸುವಂತೆ ಸುಪ್ರೀಂ ಕೋರ್ಟ್‌ಗೆ ಅಫಿದವಿತ್ ಸಲ್ಲಿಸಿತ್ತು. ಇದರ ವಿರುದ್ಧ ರಾಜ್ಯದಿಂದ ವಾದ ಮಂಡನೆಗೆ ವಕೀಲರನ್ನು ಬಿಜೆಪಿ ಸರ್ಕಾರ ನೇಮಿಸಿತ್ತು. ಆದರೆ ಈಗಿನ ಸರ್ಕಾರ ವಕೀಲರನ್ನು ಹಿಂದಕ್ಕೆ ಪಡೆದಿದೆ. ಇದರಿಂದ ರಾಜ್ಯ ಪರ ಸುಪ್ರೀಂನಲ್ಲಿ ವಾದ ಮಾಡುವವರು ಇಲ್ಲದಂತಾಗಿದೆ. ಇದು ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಅಡಕೆ ಬೆಳೆಗಾರರ ಪರ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.
 ಶೇ.95 ತಂಬಾಕಿನಿಂದ ಕ್ಯಾನ್ಸರ್ ಬರುತ್ತದೆ ಎಂದು ಗೊತ್ತಿದ್ದೂ ತಂಬಾಕು, ಸಿಗರೇಟು ನಿಷೇಧಿಸಲು ಸರ್ಕಾರ ಯಾಕೆ ಆಗ್ರಹಿಸುತ್ತಿಲ್ಲ ಎಂದು ಪ್ರಶ್ನಿಸಿದ ಡೀವಿ, ಜ.6ರಂದು ಸುಪ್ರೀಂನಲ್ಲಿ ಅಡಕೆ ನಿಷೇಧ ವಿಚಾರ ವಿಚಾರಣೆಗೆ ಬರಲಿದೆ. ಅಷ್ಟರಲ್ಲಿ ರಾಜ್ಯ ಬೆಳೆಗಾರರ ಪರ ನಿಲವು ತೆಗೆದುಕೊಳ್ಳದಿದ್ದರೆ ವಿಧಾನಸಭಾಧಿವೇಶನ ನಡೆಯಲು ಬಿಜೆಪಿ ಬಿಡುವುದಿಲ್ಲ ಎಂದರು.
ಕಾಂಗ್ರೆಸಿಗರೇ ಯಾಕೆ ಮೌನ?: ಅಡಕೆ ನಿಷೇಧ ವಿಚಾರ ಕಳೆದ ಮೂರೂವರೆ ವರ್ಷದಿಂದ ಪ್ರಚಾರದಲ್ಲಿದೆ. ಆಗ ಬೆಳೆಗಾರರ ಪರ ಮಾತನಾಡದ ಕಾಂಗ್ರೆಸ್ ಮುಖಂಡರಾದ ವೀರಪ್ಪ ಮೊಯ್ಲಿ, ಆಸ್ಕರ್, ಜನಾರ್ದನ ಪೂಜಾರಿ, ಜಯಪ್ರಕಾಶ್ ಹೆಗ್ಡೆ ಈಗ ಯಾಕೆ ಎಚ್ಚೆತ್ತುಕೊಂಡಿದ್ದಾರೆ. ಸುಪ್ರೀಂಗೆ ಕೇಂದ್ರ ಅಫಿದವಿತ್ ಸಲ್ಲಿಸುವಾಗ ಇವರ್ಯಾರೂ ವಿರೋಧಿಸಿಲ್ಲ, ಅಥವಾ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇಂದ್ರಕ್ಕೆ ಯಾಕೆ ಸಮಜಾಯಿಸಿ ನೀಡಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
 ಕೊಳೆರೋಗದಿಂದ ಕರಾವಳಿಯಲ್ಲಿ ಶೇ.70ರಷ್ಟು ಫಸಲು ನಷ್ಟವಾಗಿದೆ. ರು. 628 ಕೋಟಿ ರಾಜ್ಯಕ್ಕೆ ನಷ್ಟ ಅಂದಾಜಿಸಲಾಗಿದೆ. ಆದರೂ ಇದಕ್ಕೆ ರಾಜ್ಯ ಪ್ರಕಟಿಸಿದ ಪರಿಹಾರ ಮೊತ್ತ ಕೇವಲ ರು. 25 ಕೋಟಿ. ಅದನ್ನೂ ತೋಟಗಾರಿಕೆ ಇಲಾಖೆ ಮುಖೇನ ನೀಡಿದೆ. ಬಿಜೆಪಿ ಅವಧಿಯಲ್ಲಿ ಶೂನ್ಯ ಬಡ್ಡಿಗೆ ಸಾಲ, ಸಾಲ ಮನ್ನಾ ಮಾಡಿ ರೈತರ ಕಣ್ಣೀರು ಒರೆಸುವ ಕೆಲಸ ಆಗಿದೆ. ಅಡಕೆ ನಿಷೇಧ ಹಿಂದೆ ಲಾಬಿ ಇದ್ದು, ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ಸರ್ವ ಪಕ್ಷ ನಿಯೋಗ- ಅರಗ: ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಅರಗ ಜ್ಞಾನೇಂದ್ರ ಮಾತನಾಡಿ, ಅಡಕೆ ಬೆಳೆಗಾರರ ಹಿತಾಸಕ್ತಿ ಇದ್ದರೆ ಮುಖ್ಯಮಂತ್ರಿಗಳು ಕೂಡಲೇ ಸರ್ವಪಕ್ಷ ನಿಯೋಗವನ್ನು ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕು. ಕೇವಲ ಕೇಂದ್ರ ಆರೋಗ್ಯ ಸಚಿವರ ಭೇಟಿ ಮಾತ್ರಕ್ಕೆ ಅಡಕೆ ನಿಷೇಧ ಇಲ್ಲ ಎನ್ನುವುದು ಸರಿಯಲ್ಲ. ಇದನ್ನು ಲಿಖಿತವಾಗಿ ಕೇಂದ್ರ ತಿಳಿಸುವಲ್ಲಿ ವರೆಗೆ ಹೋರಾಟ ಮುಂದುವರಿಯಲಿದೆ ಎಂದು ನುಡಿದರು.
 1996ರಿಂದ ಅಡಕೆಗೆ ಶನಿಕಾಟ ಶುರುವಾಯಿತು ಎಂದ ಅರಗ, ಅಡಕೆ ನಿಷೇಧ ಸಾಧ್ಯವೇ ಇಲ್ಲ ಎನ್ನುವ ಕಾಂಗ್ರೆಸಿಗರು ಮೊದಲು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಕೇಂದ್ರಕ್ಕೆ ಮನವರಿಕೆ ಮಾಡಲಿ ಎಂದು ಸವಾಲು ಹಾಕಿದರು. ಐಟಿಸಿ ಸಿಗರೇಟ್ ಕಂಪನಿ ಅಡಕೆ ನಿಷೇಧ ಹಿಂದಿನ ಲಾಬಿ ಎಂದು ಆರೋಪಿಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅಡಕೆ ಬೆಳೆಗಾರರ ಬಗ್ಗೆ ನೈಜ ಕಾಳಜಿ ಇಲ್ಲ ಎಂದು ದೂರಿದರು. ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್‌ಸಿಂಹ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಮೋನಪ್ಪ ಭಂಡಾರಿ, ಗಣೇಶ್ ಕಾರ್ಣಿಕ್, ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್, ಮಾಜಿ ಸಚಿವರಾದ ನಾಗರಾಜ ಶೆಟ್ಟಿ, ಕೃಷ್ಣಪಾಲೇಮಾರ್, ಮಾಜಿ ಉಪಸಭಾಪತಿ ಯೋಗೀಶ್ ಭಟ್, ಮಾಜಿ ಶಾಸಕರಾದ ಮಲ್ಲಿಕಾ ಪ್ರಸಾದ್, ಬಾಲಕೃಷ್ಣ ಭಟ್, ಜಯರಾಮ ಶೆಟ್ಟಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊರಗಪ್ಪ, ಉಪಾಧ್ಯಕ್ಷ ರಿತೀಶ್ ಹಾಜರಿದ್ದರು. ಇದಕ್ಕೂ ಮೊದಲು ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಯಿತು. ಬಳಿಕ ಜಿಲ್ಲಾಧಿಕಾರಿ ಮುಖೇನ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement