ಒಂಟಿ ಮಹಿಳೆಯರ ದೋಚುವ ಕಳ್ಳರ ಸೆರೆ
ಮಂಗಳೂರು: ಒಂಟಿ ಮಹಿಳೆಯರನ್ನು ಹೊಂಚು ಹಾಕಿ ಚಿನ್ನಾಭರಣ ಅಪಹರಿಸುತ್ತಿದ್ದ ಮೂವರು ನಟೋರಿಯಸ್ ಕಳ್ಳರನ್ನು ಪಾಂಡೇಶ್ವರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
23ಕ್ಕೂ ಹೆಚ್ಚು ಪ್ರಕರಣಗಳಿರುವ ಕುಖ್ಯಾತ ಉಪ್ಪಳ, ಪೈವಳಿಕೆ ಸಾಹಿಲ್, ಬಂಟ್ವಾಳ ಗೂಡಿನಬಳಿ ರಫೀಕ್, ಪುದು ಸಾದಕ್ ಅಲಿ ಬಂಧಿಸಿ 3 ದಿನ ಕಳೆದಿದೆ. ಕೃತ್ಯಕ್ಕೆ ಸಹಕರಿಸಿದವರ ಮೇಲೆ ಪ್ರಕರಣ ದಾಖಲಿಸಿಲ್ಲ. ಜತೆಗೆ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಪೊಲೀಸರಿಗೆ ಮೇಲಧಿಕಾರಿಗಳು, ರಾಜಕೀಯ ಶಕ್ತಿಗಳು ಒತ್ತಡ ಹಾಕಿರುವ ಮಾತು ಕೇಳಿ ಬಂದಿದೆ.
ಆರೋಪಿಗಳನ್ನು ಮಂಗಳವಾರ ಕೋರ್ಟ್ಗೆ ಹಾಜರುಪಡಿಸಿ 4 ದಿನ ಪೊಲೀಸ್ ಕಸ್ಟಡಿ ತೆಗೆದುಕೊಂಡಿದ್ದಾರೆ. ಪಾಂಡೇಶ್ವರದ ಎಂ.ಆರ್. ಭಟ್ ಅವರಿಂದ ದೋಚಿದ 12 ಪವನ್, ಬೋಳಾರದಲ್ಲಿ ಮಹಿಳೆ ಕುತ್ತಿಗೆಯಿಂದ ಕಸಿದ ಚಿನ್ನಾಭರಣ ಪ್ರಕರಣಗಳನ್ನು ವಿಚಾರಣೆ ವೇಳೆ ಚೋರರು ಒಪ್ಪಿಕೊಂಡಿದ್ದು, ಚಿನ್ನಾಭರಣ ವಶವಾಗಿದೆ. ಈ ಆರೋಪಿಗಳ ವಿರುದ್ಧ ಬಂಟ್ವಾಳ ಸಹಿತ ಜಿಲ್ಲೆಯಲ್ಲಿ 23ಕ್ಕೂ ಹೆಚ್ಚು ಪ್ರಕರಣಗಳಿವೆ.
ಚೋರ ಪತ್ನಿಯ ರಕ್ಷಣೆ: ಒಂಟಿ ಮಹಿಳೆಯರನ್ನೇ ದೋಚುವ ಈ ದುಷ್ಟರು ಒಟ್ಟು ಮಾಡಿದ ಕಳ್ಳತನದ ಮಾಲನ್ನು ಸಾಹಿಲ್ ಎಂಬಾತನ ಪತ್ನಿ ಫೈನಾನ್ಸ್ಗೆ ಹೋಗಿ ನೀಡುತ್ತಿದ್ದಳು. ಆದರೆ ಈಕೆಯ ಮೇಲೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಚಿನ್ನಾಭರಣ ಪಡೆದುಕೊಂಡಿರುವ ಫೈನಾನ್ಸ್ ಮೇಲೂ ಕೇಸ್ ದಾಖಲಾಗಿಲ್ಲ. 'ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಇನ್ನು ಹಲವು ಪ್ರಕರಣಗಳಲ್ಲಿ ರಿಕವರಿಯಾಗಬೇಕು. ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದು ಮುಂದಿನ ವಿಚಾರಣೆಯಿಂದ ತಿಳಿದುಬರಲಿದೆ' ಎಂದು ಎಸಿಪಿ ಪವನ್ ಹೇಳಿದ್ದಾರೆ.