ಗೋಡೆ ಧ್ವಂಸ ಪ್ರಕರಣ: ಇತ್ತಂಡಗಳಿಂದ ದೂರು
ಉಪ್ಪಿನಂಗಡಿ: ಇಲ್ಲಿನ ವಿವಾದಕ್ಕೆ ತುತ್ತಾಗಿರುವ ವಾಣಿಜ್ಯ ಸಂಕೀರ್ಣ ಬಳಿಯ ಗೋಡೆಯೊಂದನ್ನು ಕೆಡವಿದ ಬಗ್ಗೆ ಉಭಯ ಬಣಗಳಿಂದ ಉಪ್ಪಿನಂಗಡಿ ಪೊಲೀಸರಿಗೆ ದೂರು ಸಲ್ಲಿಕೆಯಾಗಿದೆ.
ರತ್ನ ಎಂಬವರು ಶಾಶ್ವತ ಮೂಲಗೇಣಿ ಆಧಾರಿತವಾಗಿ ಅನುಭವಿಸಿಕೊಂಡು ಬರುತ್ತಿರುವ ಭೂಮಿಯಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲಾಗಿದ್ದು, ಇದಕ್ಕೆ ಶ್ರೀಲಕ್ಷ್ಮೀ ವೆಂಕಟರಮಣ ದೇವಾಲಯದ ಆಡಳಿತ ಮಂಡಳಿಯು ಹಲವು ಬಾರಿ ತಡೆಯಾಜ್ಞೆ ತಂದಿತ್ತಾದರೂ ಬಳಿಕ ಅದೆಲ್ಲವೂ ತೆರವುಗೊಂಡಿತ್ತು. ಈ ಮಧ್ಯೆ ಸಂಕೀರ್ಣದ ಬಳಿ ಇದ್ದ ಕಂಪೌಂಡ್ ಗೋಡೆಯ ಒಂದು ಭಾಗವನ್ನು ಬುಧವಾರ ಸಂಜೆ ಕೆಡವಲಾಗಿತ್ತು. ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಉಪೇಂದ್ರ ಪೈ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ರೋಹಿತಾಕ್ಷ, ತಿಮ್ಮಪ್ಪ, ಗೋಪಾಲ ಹೆಗ್ಡೆ, ಯು. ರಾಮ, ಯತೀಶ್ ಶೆಟ್ಟಿ, ಸಂದೀಪ್ ಶೆಟ್ಟಿ ಮತ್ತಿತರರು ಗೋಡೆ ಕೆಡವಿದ್ದಾರೆಂದೂ, ದಾರಿಯಲ್ಲಿ ಬಂದ ಇಬ್ಬರು ಯುವಕರಿಗೆ ಜೀವ ಬೆದರಿಕೆಯೊಡ್ಡಿದ್ದಾರೆಂದೂ, ಗೋಡೆ ಕೆಡವಿ ರು. 8 ಸಾವಿರ ನಷ್ಟ ಸಂಭವಿಸಿದೆ ಎಂದೂ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಬುಧವಾರ ರಾತ್ರಿ 10.30ರ ಸುಮಾರಿಗೆ ಒಂದು ಗುಂಪು ವಿವಾದಿತ ಕಟ್ಟಡದಲ್ಲಿ ಜಮಾಯಿಸಿ ದಾಂದಲೆ ನಡೆಸಿದೆ ಎನ್ನಲಾಗಿದ್ದು, ಈ ಬಗ್ಗೆ ಕಟ್ಟಡದ ಮಾಲಕಿ ರತ್ನ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಅಧೀನದ ಗೋಡೆಯನ್ನು ಕೆಡವಿದ ಕಾರಣವನ್ನು ಮುಂದಿರಿಸಿ ಕಾರ್ತಿಕ್, ಗಣೇಶ್ ಭಟ್, ಪ್ರಕಾಶ್ ಭಟ್, ಪ್ರಶಾಂತ್ ಪೈ, ರವಳನಾಥ ಪ್ರಭು, ಸಂದೀಪ್ ಕಾಮತ್ ಮತ್ತಿತರ 35 ಮಂದಿ ತನ್ನ ಕಟ್ಟಡಕ್ಕೆ ಅಕ್ರಮ ಪ್ರವೇಶ ಮಾಡಿದ್ದಲ್ಲದೆ, ಒಳಗಿದ್ದ ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಸಲಕರಣೆಗಳನ್ನು ಅಪಹರಿಸಿದ್ದಾರೆ. ರು. 25 ಸಾವಿರ ನಷ್ಟವಾಗಿದೆ ಎಂದು ದೂರಿದ್ದಾರೆ. ಬುಧವಾರ ರಾತ್ರಿ ಸಂಘರ್ಷಕ್ಕೆ ಕಾರಣವಾದ ಗೋಡೆಯನ್ನು ಗುರುವಾರ ಸಂಪೂರ್ಣ ಕೆಡವಲಾಗಿದೆ. ಉಪ್ಪಿನಂಗಡಿ ಪೊಲೀಸರು ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.