ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪತ್ನಿ ದೂರವಾದ ಚಿಂತೆ: ಪತಿ ನೇಣಿಗೆ

Lingaraj Badiger
Updated On : 3 Jan 2014, 12:52 pm

ಪುತ್ತೂರು: ಪತ್ನಿ ದೂರವಾದ ಹಿನ್ನೆಲೆಯಲ್ಲಿ ಬೇಸತ್ತು ವ್ಯಕ್ತಿಯೊಬ್ಬರು ತನ್ನ ಮನೆಯಲ್ಲೇ ನೇಣಿಗೆ ಶರಣಾದ ಘಟನೆ ಪುತ್ತೂರು ನಗರ ಹೊರವಲಯದ ಬನ್ನೂರು ಚರ್ಚ್ ಸಮೀಪದ ನೀರ್ಪಾಜೆ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ಮೂಲತಃ ಆಂಧ್ರಪ್ರದೇಶದವರಾಗಿದ್ದು, ಪ್ರಸ್ತುತ ನೀರ್ಪಾಜೆಯಲ್ಲಿ ನೆಲೆಸಿರುವ ಪ್ರವೀಣ್ (36) ಮೃತರು. ಪ್ರವೀಣ್ ಅವರ ತಂದೆ ಸುಂದರ್‌ರಾಜ್ ರೈಲ್ವೇ ಇಲಾಖೆಯ ನಿವೃತ್ತ ನೌಕರರಾಗಿದ್ದು, ನಿವೃತ್ತಿ ಬಳಿಕ ಇಲ್ಲಿ ಮನೆ ಮಾಡಿದ್ದರು. ಇದೇ ಮನೆಯಲ್ಲಿ ವಾಸವಾಗಿದ್ದ ಪ್ರವೀಣ್‌ಗೆ ಮೂರು ವರ್ಷಗಳ ಹಿಂದೆ ವಿವಾಹವಾಗಿತ್ತು. ವಿವಾಹದ ಬಳಿಕ ಪತ್ನಿ ಆಂಧ್ರಪ್ರದೇಶದಲ್ಲೇ ಉಳಿದುಕೊಂಡಿದ್ದರು. ಪತ್ನಿ ದೂರವಾಗಿರುವ ಕಾರಣದಿಂದ ಮಾನಸಿಕವಾಗಿ ನೊಂದಿದ್ದ ಪ್ರವೀಣ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಪುತ್ತೂರು ನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮನೆಗೆ ನುಗ್ಗಿ 2 ಲಕ್ಷ ಚಿನ್ನಾಭರಣ ಕಳವು
ಮಂಗಳೂರು: ಪಡುಪೆರಾರ ಅಂಬಿಕಾನಗರದ ಮನೆಗೆ ಗುರುವಾರ ಬೆಳಗ್ಗೆ ನುಗ್ಗಿದ ಕಳ್ಳರು 2 ಲಕ್ಷಕ್ಕೂ ಹೆಚ್ಚು  ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.
ಮನೆ ಮಾಲೀಕ ಪದ್ಮನಾಭ ಪೂಜಾರಿ ಬಜಪೆ ಪೊಲೀಸರಿಗೆ ದೂರು ನೀಡಿದ್ದಾರೆ. ಗುರುವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆ ಒಳಗೆ ಕಳ್ಳತನ ನಡೆದಿದೆ. ಕರಿಮಣಿ ಸರ, ವಜ್ರದ ನೆಕ್ಲೆಸ್, ಕಿವಿ ಒಲೆ ಕಳವಾಗಿದೆ. ಬಜಪೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಇಬ್ಬರು ದನಗಳ್ಳರ ಸೆರೆ
ಮಂಗಳೂರು: ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಇಬ್ಬರನ್ನು ಕಣ್ಣೂರು ಬಳಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಸಾದಿಕ್ (30) ಮತ್ತು ಬಂಟ್ವಾಳದ ಫೆಡ್ರಿಕ್ ಬಂಧಿತರು. ಗ್ರಾಮಾಂತರ ಪೊಲೀಸರಿಗೆ ಸಿಕ್ಕಿದ 'ಖಚಿತ ಮಾಹಿತಿ'ಯಂತೆ ಪಿಕಪ್ ಜೀಪ್‌ನಲ್ಲಿ 6 ಜಾನುವಾರುಗಳನ್ನು ಸಾಗಿಸುತ್ತಿದ್ದ ಆರೋಪಿಗಳು ಕಣ್ಣೂರಲ್ಲಿ ಸಿಕ್ಕಿ ಬಿದ್ದರು. ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿದ್ದು, ಜ.16ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಹಿರಿಯಡ್ಕ: ಇಲ್ಲಿನ ಕುದಿ ಗ್ರಾಮದ ಕುಂಜಾ ಎಂಬಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಮೃತರು ಸತೀಶ್ ಭಂಡಾರಿ (38), ಕೆಲವು ವರ್ಷಗಳಿಂದ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದರು, ಬುಧವಾರ ಕುದಿ ಗ್ರಾಮದ ಕಲ್ಲಬೆಟ್ಟು ಎಂಬಲ್ಲಿ ಕಾವೇರಿ ಎಂಬವರ ಹಳೆ ಮನೆಯ ಚಪ್ಪರದ ಮಾಡಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶ್ರೀನಿವಾಸ ಭಂಡಾರಿ ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವೃದ್ಧ ಆತ್ಮಹತ್ಯೆ
ಬ್ರಹ್ಮಾವರ: ಇಲ್ಲಿನ ಹಂದಾಡಿ ಗ್ರಾಮದ ಮಠದ ತೋಟ ಎಂಬಲ್ಲಿ ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಮೃತರು ಅಂತೋನಿ ರೋಚ್ (72), ಅವರು ಆರೋಗ್ಯ ಸರಿಯಿಲ್ಲದ ಚಿಂತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆ ಸಮೀಪದ ಮೋನಪ್ಪ ಶೇರಿಗಾರ್ ಎಂಬವರ ಬಾವಿಗೆ ಹಾರಿದ್ದರು. ತಕ್ಷಣ ಅವರನ್ನು ಮೇಲೆತ್ತಿ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಲ್ಸನ್ ರೋಚ್ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಳೆತ ಸ್ಥಿತಿಯಲ್ಲಿ ಹೊಳೆಯಲ್ಲಿ ಶವ ಪತ್ತೆ
ವಿಟ್ಲ: ತೋಟದ ಬದಿಯ ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಬುಧವಾರ ರಾತ್ರಿ ಪತ್ತೆಯಾಗಿದೆ. ಕಾಟುಕುಕ್ಕೆ ಗ್ರಾಮದ ಬಾಲಮೂಲೆ ನಿವಾಸಿ ಈಶ್ವರ ನಾಯ್ಕ(60) ಮೃತರು. ಕೇಪು ಗ್ರಾಮದ ಅಡ್ಯನಡ್ಕ ಸಮೀಪದ ಸರಾವು ಎಂಬಲ್ಲಿಯ ವಾರಣಾಸಿ ಫಾರ್ಮ್‌ಗೆ ಸೇರಿದ ತೋಟದ ಬದಿಯ ಹೊಳೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಅನಾಥ ಶವ ಪತ್ತೆಯಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವ ಕೊಳೆತ ಸ್ಥಿತಿಯಲ್ಲಿದ್ದು, ಮೂರ್ನಾಲ್ಕು ದಿನ ಹಿಂದೆಯೇ ಹೊಳೆಗೆ ಬಿದ್ದಿರಬಹುದೆಂದು ಊಹಿಸಲಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬೇಕು. ಅಥವಾ ಹೊಳೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದಿರಬಹುದೆಂದು ಹೇಳಲಾಗುತ್ತಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement