ವಿವಾಹಕ್ಕೆಂದು ಕಾರು ನೀಡಿದ ಸ್ನೇಹಿತನನ್ನೇ ದೋಚಿದರು!
ಕ.ಪ್ರ.ವಾರ್ತೆ ಗೋಣಿಕೊಪ್ಪಲು ಜ.2
ತನ್ನನ್ನು ನಂಬಿದ ಗೆಳೆಯನಿಗೇ ವಿಶ್ವಾಸದ್ರೋಹವೆಸಗಿದ ಆರೋಪಿ, ಹಣ- ಚಿನ್ನಾಭರಣ ದೋಚಿ ಇದೀಗ ನ್ಯಾಯಾಂಗ ಬಂಧನಕ್ಕೊಳಗಾದ ಘಟನೆ ಗೋಣಿಕೊಪ್ಪಲಿನಲ್ಲಿ ನಡೆದಿದೆ.
ಘಟನೆಗೆ ಸ್ಕೆಚ್ ಹಾಕಿದ್ದು ಬೆಂಗಳೂರಿನಲ್ಲಿ. ದರೋಡೆ ಮಾದರಿಯಲ್ಲಿ ಹಣ- ಚಿನ್ನ ಲಪಟಾಯಿಸಿದ್ದು ಗೋಣಿಕೊಪ್ಪಲಿನಲ್ಲಿ. ಇದೀಗ ಗೋಣಿಕೊಪ್ಪಲು ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬೆಂಗಳೂರಿನ ನಾಗೇನಹಳ್ಳಿ (ಹೆಬ್ಬಾಳ) ಹೂವಿನ ವ್ಯಾಪಾರಿ ವಿನಯ್ ಕುಮಾರ್ ಅಲಿಯಾಸ್ ವಿನಯ್ ಪ್ರಿನ್ಸ್ (28), ಕೊಡಗಿನ ಹಾಲೇರಿ ಗ್ರಾಮ (ಕೆದಕಲ್ ಅಂಚೆ) ಬೋಯಿಕೇರಿ ನಿವಾಸಿ, ಬೆಂಗಳೂರಿನ 'ಸತ್ಯಸಾಧ್ಯ' ವಾರಪತ್ರಿಕೆಯ ಪತ್ರಕರ್ತ ಎಂದು ಹೇಳಿಕೊಂಡಿರುವ ಬಿ.ಕವನ್ ಕುಮಾರ್ (26) ಹಾಗೂ ಸುಂಟಿಕೊಪ್ಪದಲ್ಲಿ ಪೇಂಟಿಂಗ್ ವೃತ್ತಿ ಮಾಡುತ್ತಿದ್ದ ಜೀವಿತ್ ಕೆ. ಸಾಲ್ಯಾನ್ (20) ಬಂಧಿತರು. ಬೆಂಗಳೂರು ಬಾಬಾ ಸಾಹೇಬ್ ಪಾಳ್ಯ (ಕಲ್ಯಾಣ ನಗರ) ನಿವಾಸಿ, ಇಲನ್ ಚೆರಿಯನ್ ಎಂಬುವವರು ಮೋಸಕ್ಕೆ ಒಳಗಾದವರು.
ಘಟನೆ ವಿವರ: ಇಲನ್ ಅವರು ತಮ್ಮ ಸ್ನೇಹಿತ ವಿನಯ್ ಕುಮಾರ್ ವಿವಾಹಕ್ಕೆಂದು ಸ್ಯಾಂಟ್ರೋ ಕಾರನ್ನು ಡಿ.12ರಂದು 2 ದಿನಗಳಿಗಾಗಿ ನೀಡಿದ್ದರು. ಡಿ.29ರವರೆಗೂ ಅದನ್ನು ಹಿಂದಿರುಗಿಸಿರಲಿಲ್ಲ. ಈ ಸಂದರ್ಭದಲ್ಲಿ ವಿನಯ್ ಕುಮಾರ್ ತಮ್ಮ ಸ್ನೇಹಿತರಾದ ಬೆಂಗಳೂರಿನ ಕೆ.ಆರ್.ಪುರಂನಲ್ಲಿರುವ ಕೊಡಗಿನ ಬಿ.ಕವನ್ ಕುಮಾರ್ ಹಾಗೂ ಸುಂಟಿಕೊಪ್ಪ ನಿವಾಸಿ ಜೀವಿತ್ ಸಾಲ್ಯಾನ್ ಎಂಬವರೊಂದಿಗೆ ಕಾರಿನಲ್ಲಿ ಸುತ್ತಾಟ, ಮೋಜು ಮಾಡುತ್ತಿದ್ದರು ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಬಯಲು ಮಾಡಿದ್ದಾರೆ.
ದರೋಡೆ ತಂತ್ರ: ಗೋಣಿಕೊಪ್ಪಲಿನ ಪಾಲಿಬೆಟ್ಟ ರಸ್ತೆಯ ಕೊಪ್ಪ ಎಂಬ ಪ್ರದೇಶಕ್ಕೆ ರಾತ್ರಿ 10 ಗಂಟೆ ಸುಮಾರಿಗೆ ಇಲನ್ ಹಾಗೂ ಅವರ ಸ್ನೇಹಿತ ನರಸಿಂಹ ಕಾರಿನಲ್ಲಿ ಬಂದಿದ್ದರು. ಆಗ ಡಿ.29ರ ರಾತ್ರಿ 11 ಗಂಟೆ ಸುಮಾರಿಗೆ ಜೀಪೊಂದರಲ್ಲಿ ಐವರು ಕಾರನ್ನು ಅಡ್ಡಗಟ್ಟಿ ಜೀಪ್ ಜಖಂ ಮಾಡಿರುವುದಾಗಿ ಬೆದರಿಸಿ ಇಲನ್ ಅವರ ಬಳಿಯಿದ್ದ 24 ಗ್ರಾಂ. ಚಿನ್ನದ ಚೈನ್, 4 ಗ್ರಾಂ. ಉಂಗುರ ಹಾಗೂ ಹಣವಿಲ್ಲ ಎಂದಾಗ ಗೋಣಿಕೊಪ್ಪಲು ಎಸ್ಬಿಐ ಎಟಿಎಂಗೆ ಕರೆತಂದು 15,000 ನಗದು ಪಡೆದು ಪರಾರಿಯಾಗಿದ್ದರು. ನರಸಿಂಹ ಎಂಬವರಲ್ಲಿದ್ದ ಮೊಬೈಲ್ ಅನ್ನೂ ಕಿತ್ತುಕೊಂಡಿದ್ದರು.
ಸಿಕ್ಕಿಬಿದ್ದ ಸ್ನೇಹಿತರು: ಗೋಣಿಕೊಪ್ಪಲು ಪೊಲೀಸರು ತಂಡ ರಚಿಸಿ ಜ.1ರಂದು ಬೆಳಗ್ಗೆ ಸುಂಟಿಕೊಪ್ಪದ ಮದುರಮ್ಮ ಬಡಾವಣೆಯಲ್ಲಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 11,400 ನಗದು, ಚಿನ್ನದ ಚೈನ್ ಹಾಗೂ ಚಿನ್ನದ ಉಂಗುರವನ್ನು ವಶಪಡಿಸಿಕೊಳ್ಳಲಾಗಿದೆ.