ವಧು ಪತ್ತೆಗೆ ವರ ಕೋರ್ಟ್ಗೆ ಮೊರೆ: ಸರ್ಚ್ ವಾರಂಟ್ ಜಾರಿ!
ಮಂಗಳೂರು: ವಧುವನ್ನು ಪತ್ತೆ ಮಾಡಿಕೊಡುವಂತೆ ವರನೇ ಕೋರ್ಟ್ ಮೊರೆ ಹೋದ ಪ್ರಸಂಗ ಇದು...! ಮನ ಕರಗುವ ಪ್ರಕರಣ ಕೇಳಿ ವಧುವಿನ ಪತ್ತೆಗೆ ಜೆಎಂಎಫ್ಸಿ ಸರ್ಚ್ವಾರಂಟ್ ಹೊರಡಿಸಿದೆ! ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ದೇವಗಡ ತಾಲೂಕಿನ ವಾಣಿವಾಡ ಸುಧಾಕರ ಎಂಬವರ ಮಗಳು ಪದ್ಮ ಭಾಪಟ್ ವಿವಾಹ ನಿಶ್ಚಿತಾರ್ಥ ಹಿರಿಯರ ಸಮಕ್ಷಮದಲ್ಲಿ ಮಂಗಳೂರಿನ ಶ್ರೀರಾಮ್ ಎಂಬ ವರನ ಜತೆ ನ.27ರಂದು ನಡೆದಿತ್ತು. ವಧುವಿನ ಭಾವಂದಿರಾದ ಪ್ರಶಾಂತ್ ಗೋಡ್ಸೆ ಮತ್ತು ಪ್ರಮೋದ್ ಖೇಳ್ಕರ್ 6.5 ಲಕ್ಷ ಪುಸಲಾಯಿಸಿ ಪಡೆದಿದ್ದಾರೆ. ಈ ಹಣವನ್ನು ಬ್ಯಾಂಕ್ ಖಾತೆಗೆ ವರ ಹಾಕಿದ್ದರು. ವಧು ಮದುವೆಯಾಗಬೇಕಿದ್ದ ವರನ ಮೊಬೈಲ್ಗೆ ನಿರಂತರವಾಗಿ ಪ್ರೇಮ ಸಂದೇಶ ಕಳುಹಿಸಿ ನೀನೆ ನನ್ನ ಚಿನ್ನ, ರನ್ನ ಎಂದು ಹೇಳಿ ಮದುವೆ ಆಗುವುದಾಗಿ ಹೇಳಿದ್ದಳು. ಆಕೆಯ ಭಾವಂದಿರು ಮಂಗಳೂರಿನ ಬಲ್ಲಾಳ್ಬಾಗ್ನಲ್ಲಿರುವ ವರನ ಮನೆಗೆ ಬಂದು ತಂಗಿದ್ದರು. ಇನ್ನು 20 ಲಕ್ಷ ಹಣ ನೀಡಬೇಕು ಎಂದು ವಧುವಿನ ಭಾವಂದಿರು ವರನಿಗೆ ಬೆದರಿಕೆ ಹಾಗಿದ್ದಾರೆ. ಇದಕ್ಕೆ ಒಪ್ಪದೆ ಇದ್ದ ಕಾರಣ ವಧುವನ್ನು ಆಕೆಯ ಭಾವಂದಿರು ಬಲಾತ್ಕಾರವಾಗಿ ಅಪಹರಿಸಿ, ಗುಪ್ತ ಸ್ಥಳದಲ್ಲಿ ಆಡಗಿಸಿಟ್ಟಿದ್ದಾರೆ. ಬ್ರಾಹ್ಮಣ ಸಮುದಾಯದಲ್ಲಿ ವಧು ಕೊರತೆ ಇರುವ ಕಾಣ ಒಂದೇ ವಧುವನ್ನು ಅನೇಕ ಮಂದಿಗೆ ತೋರಿಸಿ ಅವರಿಂದ ಹಣ ಪಡೆಯುವ ದಂಧೆ ಉತ್ತರ ಭಾರತದಲ್ಲಿ ಹೆಚ್ಚಾಗಿದೆ. ವಧುವಿನ ಭಾವಂದಿರು ಎಂದು ಹೇಳಿಕೊಂಡಿರುವ ಪ್ರಶಾಂತ್ ಗೋಡ್ಸೆ ಮತ್ತು ಪ್ರಮೋದ್ ಖೇಳ್ಕರ್ ಹಣ ಪಡೆದು ಬೇರೆ, ಬೇರೆ ಹುಡುಗರಿಗೆ ವಧುವನ್ನು ತೋರಿಸುತ್ತಾರೆ. ಈ ಮೂಲಕ ವರನಿಗೆ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.