ವಿಮಾನ ನಿಲ್ದಾಣದಲ್ಲಿ ಶ್ವಾನದಳ ಕರ್ತವ್ಯ ಶುರು
ಮಂಗಳೂರು: ಬಜಪೆ ವಿಮಾನ ನಿಲ್ದಾಣದಲ್ಲಿ ಶ್ವಾನದಳ ಭದ್ರತೆ ಆರಂಭವಾಗಿದೆ. ನಾಲ್ಕು ನಾಯಿಗಳಿದ್ದು, ಗ್ವಾಲಿಯರ್‌ನಲ್ಲಿ ತರಬೇತಿ ನೀಡಲಾಗಿದೆ. ನಾಯಿಗಳ ಜತೆ ತರಬೇತಿ ಪಡೆದ ಸಿಐಎಸ್‌ಎಫ್‌ನ ಆರು ಮಂದಿ ಗಾರ್ಡ್‌ಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಎರಡು ವಾರದ ಹಿಂದೆ ಆಗಮಿಸಿದ್ದ ಶ್ವಾನದಳ ರಜೆ ಬಳಿಕ ಹೊಸ ವರ್ಷ ಆರಂಭದಿಂದ ಕರ್ತವ್ಯ ಆರಂಭಿಸಿವೆ. ನಾಲ್ಕು ನಾಯಿಗಳು 4 ಶಿಪ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಲಿದೆ. ವಿಮಾನ ನಿಲ್ದಾಣ ಒಳಗೆ, ಹೊರಗೆ, ವಾಹನ ತಪಾಸಣೆ, ಬಾಂಬ್ ಪತ್ತೆ ಹಚ್ಚುವ ಕೆಲಸ ಕೂಡಾ ಮಾಡುತ್ತದೆ. ಆದರೆ ಬಾಂಬ್ ನಿಷ್ಕ್ರಿಯಗೊಳಿಸಲು ಬೆಂಗಳೂರಿನಿಂದ ತಜ್ಞರು ಬರಬೇಕು.
ನಾಲ್ಕು ನಾಯಿಗಳ ಬೆಲೆ 5 ಲಕ್ಷ. ನಾಯಿಗಳಿಗಾಗಿ 40 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲಾಗಿದೆ. ಗಾರ್ಡ್‌ಗಳ ಸಹಿತ ಶ್ವಾನದಳ ಪ್ರತಿ ತಿಂಗಳ ನಿರ್ವಹಣೆ ವೆಚ್ಚ 5 ಲಕ್ಷ.
ಪುತ್ತೂರು-ಉಪ್ಪಿನಂಗಡಿ ರಸ್ತೆ ದುರಸ್ತಿ ಆಗ್ರಹಿಸಿ ಪ್ರತಿಭಟನೆ
ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆ ದುರಸ್ತಿ ಆಗ್ರಹಿಸಿ 13ರಿಂದ ಕೇಪುಳು ಸರ್ಕಲ್ ಬಳಿ ಅನಿರ್ದಿಷ್ಟಾವಧಿ ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೆಮ್ಮಾಯಿ ಚಿಗುರು ಗೆಳೆಯರ ಬಳಗದ ಅಧ್ಯಕ್ಷ ರತ್ನಾಕರ ಪ್ರಭು ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು-ಉಪ್ಪಿನಂಗಡಿ ರಸ್ತೆ ಗುತ್ತಿಗೆ ಪಡೆದು ಕರ್ತವ್ಯಲೋಪ ಎಸಗುವುದರೊಂದಿಗೆ ಸಾರ್ವಜನಿಕರ ಜೀವನದಲ್ಲಿ ಚೆಲ್ಲಾಟವಾಡಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಭ್ರಷ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು, 10 ದಿನಗಳ ಒಳಗಾಗಿ ರಸ್ತೆ ದುರಸ್ತಿ ಮಾಡಿಸುವುದಾಗಿ ಭರವಸೆ ಕೊಟ್ಟು ಬಳಿಕ ಕರ್ತವ್ಯ ಮರೆತ ಶಾಸಕಿ ಮತ್ತು ಪುತ್ತೂರಿನ ದುರಂತ ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಬಿ.ಎಂ.ಎಸ್. ರಿಕ್ಷಾ ಮಾಲೀಕ ಚಾಲಕರ ಸಂಘದ ಮಾಜಿ ಅಧ್ಯಕ್ಷ ದೇವಪ್ಪ ಗೌಡ, ಪುತ್ತೂರು ನಮೋ ಭಾರತ ಸಂಘಟನೆಯ ಅಜಿತ್, ಟ್ಯಾಕ್ಸಿ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ರಾಘವ ಮತ್ತು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ನಾಗೇಶ ಕೆಮ್ಮಾಯಿ ಇದ್ದರು.