ಸುಲಿಗೆಕೋರರಿಂದ ರು. 15 ಲಕ್ಷ ಮೌಲ್ಯದ ಸೊತ್ತು ವಶ
ಮಂಗಳೂರು: ಒಂಟಿ ಮಹಿಳೆಯರ ಚಿನ್ನಾಭರಣ ಅಪಹರಿಸುವ ಅಂತರ್‌ಜಿಲ್ಲಾ ಚೋರರನ್ನು ಬಂಧಿಸಿ ಅವರಿಂದ 15 ಲಕ್ಷ ಮೌಲ್ಯದ ಸೊತ್ತು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ 23 ಪ್ರಕರಣಗಳು ದಾಖಲಾಗಿದ್ದು, ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಕಳೆದ ಒಂದು ವರ್ಷದಿಂದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕಾಸರಗೋಡು ಜಿಲ್ಲೆಗಳಲ್ಲಿ ಬೈಕ್‌ನಲ್ಲಿ ಬಂದು ಒಂಟಿ ಮಹಿಳೆಯರ ಚಿನ್ನಾಭರಣ ಅಪಹರಿಸುತ್ತಿದ್ದರು ಎಂದು ಪೊಲೀಸ್ ಕಮಿಷನರ್ ಆರ್. ಹಿತೇಂದ್ರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆರೋಪಿ ಸಯ್ಯದ್ ಸಾಹಿಲ್ ಮತ್ತು ಸಾದತ್ ಅಲಿ ಇತರರ ಜತೆ ಸೇರಿಕೊಂಡು ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಸರಹದ್ದಿನಲ್ಲಿ ನಡೆಸಿದ ದರೋಡೆ ನಡೆಸಿದ್ದಾರೆ. ಸಾದತ್ ಅಲಿ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ ದಾಖಲಾಗಿ, ಬಂಧಿತನಾಗಿದ್ದ. ಮಂಗಳೂರು ನಗರ, ಸುರತ್ಕಲ್ ಪರಿಸರದಲ್ಲಿ ಬೈಕ್ ಕಳವು ಮಾಡಿದ ಪ್ರಕರಣಗಳಿವೆ.
ಮಹಮ್ಮದ್ ರಫೀಕ್ ಮಂಗಳೂರು ನಗರ, ಸುರತ್ಕಲ್, ಗ್ರಾಮಾಂತರ, ಬಜಪೆ, ಪಾಂಡೇಶ್ವರ ಠಾಣೆಗಳ ವ್ಯಾಪ್ತಿಯಲ್ಲಿ ಸರ ಸುಲಿಗೆ ಪ್ರಕರಣದಲ್ಲಿ ಹಿಂದೆಯೂ ಬಂಧಿತನಾಗಿದ್ದ. ಸಯ್ಯದ್ ಸಾಹಿಲ್ ಪಾಂಡೇಶ್ವರ ಠಾಣೆ ವ್ಯಾಪ್ತಿಯಲ್ಲಿ ವಾಹನ ಕಳವು ಆರೋಪದಲ್ಲಿ ಹಿಂದೆಯೂ ಬಂಧಿತನಾಗಿದ್ದ. ತೌಸೀಫ್, ರಿಯಾಜ್ ಎಂಬವರು ತಲೆಮರೆಸಿಕೊಂಡಿದ್ದಾರೆ. ಚಿನ್ನಾಭರಣ ಒಯ್ದು ಫೈನಾನ್ಸ್‌ನಲ್ಲಿ ಅಡವಿಟ್ಟವರ ವಿರುದ್ಧ, ಫೈನಾನ್ಸ್ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಮಿಷನರ್ ಹಿತೇಂದ್ರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಜಗದೀಶ್ ಎಸಿಪಿ ಪವನ್ ನಿಜ್ಜೂರ್, ಇನ್‌ಸ್ಪೆಕ್ಟರ್ ದಿನಕರ ಶೆಟ್ಟಿ, ಸಬ್ ಇನ್‌ಸ್ಪೆಕ್ಟರ್ ಪೂವಪ್ಪ ಇದ್ದರು.