21ರಿಂದ ಬೆಂಗಳೂರಲ್ಲಿ ಕಾಫಿ ಉತ್ಸವ
ಮಡಿಕೇರಿ: ಕಾಫಿ ಮಂಡಳಿ ವತಿಯಿಂದ ಜ.21ರಿಂದ 25ರವರೆಗೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕಾಫಿ ಉತ್ಸವ ನಡೆಯಲಿದ್ದು, ಕಾಫಿ ಉದ್ಯಮದ ವಿವಿಧ ವಿಚಾರಗಳ ಬಗ್ಗೆ 5 ದಿನಗಳ ಉತ್ಸವದಲ್ಲಿ ಚರ್ಚಿಸಲಾಗುತ್ತದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಜಾವೇದ್ ಅಖ್ತರ್ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೆಂಗಳೂರಿನ ಲಲಿತ್ ಅಶೋಕ್ನಲ್ಲಿ ಜ.21 ರಿಂದ 25 ರವರೆಗೆ ನಡೆಯಲಿರುವ 5 ನೇ ವರ್ಷದ ಅಂತಾರಾಷ್ಟ್ರೀಯ ಕಾಫಿ ಉತ್ಸವದಲ್ಲಿ ಜಗತ್ತಿನ ವಿವಿಧ ಕಾಫಿ ಉದ್ಯಮಿಗಳು, ಕಾಫಿ ತಜ್ಞರು, ಬೆಳೆಗಾರರು, ರಫ್ತುದಾರರು ಸೇರಿದಂತೆ 1 ಸಾವಿರದಷ್ಟು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಕಾಫಿ ಉದ್ಯಮದ ನೂತನ ತಂತ್ರಜ್ಞಾನದ ಬಗ್ಗೆಯೂ ಕಾಫಿ ಉತ್ಸವ ಸಮಗ್ರ ಮಾಹಿತಿ ನೀಡಲಿದೆ. ಈ ಬಾರಿ 'ಬದಲಾಗುತ್ತಿರುವ ಕಾಫಿ ಉದ್ಯಮದ ಮುಖಗಳು' ಕುರಿತು ಉತ್ಸವ ಮುಖ್ಯ ವಿಷಯವಾಗಿರಿಸಿಕೊಂಡಿದೆ. ಕಾಫಿ ಉದ್ಯಮ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ಸಾಕಷ್ಟು ತೀವ್ರಗತಿಯಲ್ಲಿ ಬದಲಾಗುತ್ತಿದ್ದು, ಅರೇಬಿಕಾ ತಳಿಯಿಂದ ರೋಬಸ್ಟಾ ತಳಿಗೆ ಬೆಳೆಗಾರರು ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ. ಇಂಥ ವಿಚಾರಗಳ ಬಗ್ಗೆ 5 ದಿನಗಳ ಗೋಷ್ಠಿಗಳಲ್ಲಿ ಚರ್ಚೆ ನಡೆಯಲಿದೆ ಎಂದೂ ತಿಳಿಸಿದರು.
ಕಾಫಿಶಾಸ್ತ್ರ ತರಬೇತಿ: 2012 ರಲ್ಲಿ ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಕಾಫಿ ಉತ್ಸವ ಈಗಾಗಲೇ 3 ಬಾರಿ ಬೆಂಗಳೂರಿನಲ್ಲಿ ಜರುಗಿದ್ದು, ಮತ್ತೆ 5ನೇ ಉತ್ಸವ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ತಿಳಿಸಿದ ಜಾವೇದ್ ಅಖ್ತರ್, ಕಾಫಿ ಮಂಡಳಿ ಈಗಾಗಲೇ ಕಾಫಿರಂಗದ ಬಗ್ಗೆ ಯುವಜನತೆಯಲ್ಲಿ ಅಭಿರುಚಿ ಹೆಚ್ಚಿಸುವ ಪ್ರಯತ್ನವಾಗಿ ಕಾಫಿ ಶಾಸ್ತ್ರ ಎಂಬ 1 ವಾರದ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾಫಿಶಾಸ್ತ್ರದ ಮೂಲಕ ಕಾಫಿ ತಯಾರಿಕೆ, ಕಾಫಿ ಗುಣಮಟ್ಟ ಕಾಯ್ದುಕೊಳ್ಳುವಿಕೆ, ಮಾರುಕಟ್ಟೆ ತಿಳಿವಳಿಕೆ ಮುಂತಾದ ವಿಚಾರಗಳ ಬಗ್ಗೆ ಆಸಕ್ತರಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ. ಅಂತೆಯೇ 1ತಿಂಗಳ ಡಿಪ್ಲೋಮ ತರಬೇತಿ ಕಾರ್ಯಕ್ರಮವೂ ಮಂಡಳಿ ವತಿಯಿಂದ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಹೊಸ ಉತ್ಪನ್ನಗಳ ಪರಿಚಯ: ಅಂತಾರಾಷ್ಟ್ರೀಯ ಕಾಫಿ ಉತ್ಸವ ಸಮಿತಿಯ ಅಧ್ಯಕ್ಷ ಅನಿಲ್ ಭಂಡಾರಿ ಮಾಹಿತಿ ನೀಡಿ, ಈ ಬಾರಿಯ ಕಾಫಿ ಉತ್ಸವ ಸಾಕಷ್ಟು ಹೊಸ ಉತ್ಪನ್ನಗಳ ಪರಿಚಯಕ್ಕೆ ನಾಂದಿ ಹಾಡಲಿದ್ದು, ಕಾಫಿ ಕುರಿತು ರಸಪ್ರಶ್ನೆ, ಕಾಫಿ ತಯಾರಿಕೆಯ ಸ್ಪರ್ಧೆ ಮತ್ತಿತರ ವಿಭಿನ್ನ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ ಎಂದು ತಿಳಿಸಿದರು. ದೇಶದ ಕಾಫಿ ಮಾರುಕಟ್ಟೆಗೆ ಶೇ.75 ರಷ್ಟು ಕೊಡುಗೆ ನೀಡುತ್ತಿರುವ ಕರ್ನಾಟಕದ ರಾಜಧಾನಿ ಬೆಂಗಳೂರು ಕಾಫಿ ರಾಜಧಾನಿ ಕೂಡ ಆಗಿದ್ದು ಈ ಹಿನ್ನೆಲೆಯಲ್ಲಿಯೇ ಕಾಫಿ ಉತ್ಸವವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ ಎಂದು ಹೇಳಿದ ಅನಿಲ್ ಭಂಡಾರಿ, ಯುವಜನಾಂಗಕ್ಕೆ ಕಾಫಿ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಉತ್ಸವ ಸಹಕಾರಿಯಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಇಂಧನ, ಪರಿಸರ ಖಾತೆ ಸಚಿವ ಎಂ. ವೀರಪ್ಪ ಮೊಯ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದು, ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಕಾಫಿ ಉತ್ಸವ ಭಾರತೀಯ ಕಾಫಿ ರಂಗದ ಬಗ್ಗೆ ಸಮಗ್ರ ಪರಿಚಯದೊಂದಿಗೆ ಭಾರತೀಯ ಕಾಫಿ ಉದ್ಯಮಕ್ಕೆ ಕಾಯಕಲ್ಪ ನೀಡುವಲ್ಲಿಯೂ ಮಹತ್ವದ ಪಾತ್ರ ವಹಿಸಲಿದೆ ಎಂದು ಅನಿಲ್ ಭಂಡಾರಿ ಭರವಸೆ ವ್ಯಕ್ತಪಡಿಸಿದರು.
ಮಾಹಿತಿ ಕಾರ್ಯಾಗಾರ: ಜ. 26ರಂದು ಕೊಡಗು ಜಿಲ್ಲೆಯ ಪಾಲಿಬೆಟ್ಟದಲ್ಲಿ ಕೊಡಗಿನ ಆಯ್ದ 250ರಷ್ಟು ಕಾಫಿ ಬೆಳೆಗಾರರಿಗೆ ಕಾಫಿ ಉದ್ಯಮದ ಕುರಿತಾಗಿ ಅಂತಾರಾಷ್ಟ್ರೀಯ ಕಾಫಿ ತಜ್ಞರಿಂದ ಮಾಹಿತಿ ಕಾರ್ಯಾಗಾರ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಅನಿಲ್ ಭಂಡಾರಿ ತಿಳಿಸಿದರು. ಕಳೆದ 10 ವರ್ಷಗಳಲ್ಲಿ ಕಾಫಿ ಉದ್ಯಮ ಗಣನೀಯ ಬದಲಾವಣೆ ಕಂಡಿದ್ದು, ಕಾಫಿ ಕುಡಿಯುವವರ ಸಂಖ್ಯೆ ಅತ್ಯಂತ ಹೆಚ್ಚಾಗಿದೆ. ಕಾಫಿ ಕೆಫೆಗಳು ಏರಿಕೆಯಾಗುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಭಂಡಾರಿ ಹೇಳಿದರು.
ಶೇ.10.4ರಷ್ಟು ಕಾಫಿ ಉತ್ಪಾದನೆ ಕುಂಠಿತ
ಈ ಬಾರಿ ಭಾರತೀಯ ಕಾಫಿ ಉತ್ಪಾದನೆಯಲ್ಲಿ ನಿರೀಕ್ಷೆಗಿಂತ ಶೇ. 10.4 ರಷ್ಟು ಇಳಿಕೆ ಕಂಡಿದೆ. ಕಾಫಿ ಹೂ ಅರಳುವ ಮುನ್ನ ಅಂದಾಜಿಸಲಾಗಿದ್ದ ವಾರ್ಷಿಕ 3.47 ಟನ್ ಕಾಫಿ ಉತ್ಪಾದನೆ ಬದಲಿಗೆ ಅಧಿಕ ಮಳೆಯಿಂದಾಗಿ 3.11 ಟನ್ ಕಾಫಿ ಉತ್ಪಾದನೆಯನ್ನು ಈ ಸಾಲಿನಲ್ಲಿ ಅಂದಾಜು ಮಾಡಲಾಗಿದ್ದು, ನಿರೀಕ್ಷೆಗಿಂತ ಶೇ. 10.4ರಷ್ಟು ಇಳಿಕೆ ಕಂಡಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಜಾವೇದ್ ಅಕ್ತರ್ ಮಾಹಿತಿ ನೀಡಿದರು.