ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕ್ರಿಮಿನಲ್‌ಗಳ ಮಟ್ಟ ಹಾಕಿ, ಗಸ್ತು ಹೆಚ್ಚಿಸಿ

Rashmi Kasaragodu
Updated On : 5 Jan 2014, 2:02 am

ಮಂಗಳೂರು: ಶಿಕ್ಷಣ ಸಂಸ್ಥೆ ಮುಖ್ಯಸ್ಥರು ವಿದ್ಯಾರ್ಥಿಗಳ ರಕ್ಷಣೆ, ಪೊಲೀಸರ ಗಸ್ತು, ನಗರದಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸುವಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಎಚ್ಚರಿಸಿದ್ದಾರೆ.
ದೇರಳಕಟ್ಟೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ಸಹಿತ ಸರಣಿ ಘಟನೆಗಳ ಬಳಿಕ ಆರೋಗ್ಯ ಸಚಿವ ಯು.ಟಿ.ಖಾದರ್, ಸರ್ಕ್ಯೂಟ್ ಹೌಸ್‌ನಲ್ಲಿ ಪೊಲೀಸ್ ಕಮಿಷನರ್ ಮತ್ತು ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರ ಸಭೆ ಕರೆದು ಚರ್ಚಿಸಿದರು.
 ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಖಾದರ್, ಮಂಗಳೂರಲ್ಲಿ ಹಿಂಸಾ ಪ್ರಿಯ ಶಕ್ತಿಗಳು ವಿಜೃಂಬಿಸತೊಡಗಿವೆ. ಅಪರಾಧ ನಡೆಸಿ, ಜೈಲಿಗೆ ಹೋದರು ಜಾಮೀನು ಪಡೆದು ಹೊರಗೆ ಬರಬಹುದು ಎಂಬುದು ಕ್ರಿಮಿನಲ್‌ಗಳು ಭಾವಿಸಿದ್ದಾರೆ. ಇಂಥ ಶಕ್ತಿಗಳನ್ನು ಮಟ್ಟ ಹಾಕಲು ತಕ್ಷಣ ಕಾರ್ಯಪ್ರವೃತ್ತವಾಗಬೇಕಿದೆ. ಆಯ್ದ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಸಲಾಗುವುದು. ಪ್ರಮುಖ ಒಳರಸ್ತೆಗಳಲ್ಲಿ ಪೊಲೀಸ್ ಭದ್ರತೆ ಏರ್ಪಡಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.
 ಮಂಗಳೂರಿಗೆ ವಿದ್ಯಾರ್ಜನೆಗೆ ದೇಶದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಇತ್ತೀಚಿನ ಕೆಲವು ಅಹಿತಕರ ಘಟನೆಗಳಿಂದಾಗಿ ದೂರದ ವಿದ್ಯಾರ್ಥಿಗಳು ಬರಲು ಹಿಂದೇಟು ಹಾಕುವಂತಾಗಿದೆ. ಆದ್ದರಿಂದ ಕಾನೂನು ಸುವ್ಯವಸ್ಥೆ ಬಲಗೊಳಿಸಲು ಆದ್ಯತೆ ನೀಡಲಾಗಿದೆ. ಅಲ್ಲದೆ ಆಯಾ ಶಿಕ್ಷಣ ಸಂಸ್ಥೆ ಮುಖ್ಯಸ್ಥರು ತಮ್ಮಲ್ಲಿ ಬರುವ ವಿದ್ಯಾರ್ಥಿಗಳ ರಕ್ಷಣೆ ಕುರಿತು ಮುಂಜಾಗರೂಕತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಭದ್ರತೆ ಸರಿ ಇಲ್ಲ. ವಯೋ ವೃದ್ಧರೇ ಭದ್ರತೆ ಸಿಬ್ಬಂದಿಯಾಗಿದ್ದಾರೆ. ಒಳ್ಳೆ ಭದ್ರತೆಯನ್ನು ಶಿಕ್ಷಣ ಸಂಸ್ಥೆಗಳು ಒದಗಿಸಬೇಕು ಎಂದರು.
 ಜನಪ್ರತಿನಿಧಿಗಳು, ಪೊಲೀಸ್ ಇಲಾಖೆ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ತಮ್ಮ ಜವಾಬ್ದಾರಿ ಸರಿಯಾಗಿ ನಿರ್ವಹಿಸಿದರೆ ಸಮಸ್ಯೆಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದರು.
ಪೊಲೀಸ್ ಔಟ್‌ಪೋಸ್ಟ್: ಜಿಲ್ಲೆಯಲ್ಲಿ ಶಾಂತಿಯುತ ವಾತಾವರಣ ನಿರ್ಮಾಣವೇ ಮುಖ್ಯ. ಶಿಕ್ಷಣ ಸಂಸ್ಥೆ ಸುತ್ತಣ ಗೂಡಂಗಡಿ, ಜ್ಯೂಸ್ ಅಂಗಡಿಗಳ ಮೇಲೆ ನಿಗಾ ಇಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಮಾದಕ ದ್ರವ್ಯ ಮಾರಾಟ ಜಾಲವನ್ನು ಕೂಡಾ ಪತ್ತೆ ಹಚ್ಚುವಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು  
 ದೇರಳಕಟ್ಟೆ ವಿದ್ಯಾರ್ಥಿನಿ ಮೇಲಿನ ದೌರ್ಜನ್ಯ ಪ್ರಕರಣ ಕುರಿತು ಆಗತ್ಯ ಕಾನೂನು ಕ್ರಮವನ್ನು ಪೊಲೀಸರು ಕೈಗೊಳ್ಳಲಿದ್ದಾರೆ. ಅಪರಾಧಿಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಅವರಿಗೆ ಕಠಿಣ ಶಿಕ್ಷೆಯಾಗಬೇಕು.
 ಆರೋಪಿಗಳ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿಲ್ಲ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಕುರಿತು ಪೊಲೀಸರು ಗಮನ ಹರಿಸುವರು ಎಂದರು.
ಗಸ್ತು ಹೆಚ್ಚಿಸಿ: ಸತತ ಅಪರಾಧಿ ಕೃತ್ಯ ನಡೆಸುವವರ ಮೇಲೆ ಕಣ್ಣಿಡಬೇಕು. ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದನ್ನೆಲ್ಲ ನಿಲ್ಲಿಸಲು ಪೊಲೀಸರು ರಾತ್ರಿ ಗಸ್ತು ಹೆಚ್ಚಿಸಬೇಕು ಎಂದು ಪೊಲೀಸ್ ಕಮಿಷನರ್  ಆರ್. ಹಿತೇಂದ್ರ ಅವರಿಗೆ ಸೂಚಿಸಿದರು. ಶಿಕ್ಷಣ ಸಂಸ್ಥೆಗಳು ಕ್ಯಾಂಪಸ್ ಮತ್ತು ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಭದ್ರತೆ ಒದಗಿಸುವಂತೆ ಸೂಚಿಸಿದರು. ಪೊಲೀಸ್ ಕಮಿಷನರ್, ಕೆಎಂಸಿ, ಯೇನೆಪೋಯ, ದೇರಳಕಟ್ಟೆ ನಿಟ್ಟೆ, ಪಿ.ಎ. ಎಂಜಿನಿಯರಿಂಗ್ ಕಾಲೇಜ್ ಪ್ರತಿನಿಧಿಗಳು ಸಭೆಯಲ್ಲಿ ಇದ್ದರು.


ಎಚ್ಚರಿಸಿದ್ದ ಕನ್ನಡಪ್ರಭ
ದೇರಳಕಟ್ಟೆ ಸಹಿತ ಮಂಗಳೂರಲ್ಲಿ ನಡೆಯುತ್ತಿರುವ ದೌರ್ಜನ್ಯ ಸರಣಿಗಳ ಕುರಿತು ಕನ್ನಡಪ್ರಭದಲ್ಲಿ ವರದಿ ಪ್ರಕಟವಾಗಿತ್ತು. ಮಂಗಳೂರು ಶಾಸಕರೂ ಆದ ಸಚಿವ ಯು.ಟಿ.ಖಾದರ್ ತಮ್ಮ ಖದರ್ ತೋರಿಸದೆ ನಿರ್ಲಿಪ್ತರಾಗಿದ್ದ ಕುರಿತು ಲೇಖನದಲ್ಲಿ ಪ್ರಶ್ನಿಸಲಾಗಿತ್ತು. ಇದೀಗ ಖಾದರ್ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿಶೇಷ ಸಭೆ ನಡೆಸಿ ಸೂಚನೆ ನೀಡಿದ್ದಾರೆ.


ಇಂದಿನ ಅಟೋ ಮುಷ್ಕರ ರದ್ದು
ಮಂಗಳೂರು: ಎಲ್‌ಪಿಜಿ ದರ ಏರಿಕೆ ಹಿನ್ನೆಲೆಯಲ್ಲಿ ಅಟೋರಿಕ್ಷಾ ಮೀಟರ್ ದರ ಪರಿಷ್ಕರಣೆಗೆ ಒತ್ತಾಯಿಸಿ ಜಿಲ್ಲಾ ಅಟೋರಿಕ್ಷಾ ಚಾಲಕರ ಸಂಘಟನೆಗಳ ಸಮನ್ವಯ ಸಮಿತಿ ಜ.5 ಮಧ್ಯರಾತ್ರಿಯಂದ 6ರ ಮಧ್ಯರಾತ್ರಿ ವರೆಗೆ ನೀಡಿದ ರಿಕ್ಷಾ ಬಂದ್ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಜ.7ರಂದು ಮಧ್ಯಾಹ್ನ 12ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಟೋಪ್ರಯಾಣ ದರ ಪರಿಷ್ಕರಣೆಗೆ ಸಂಬಂಧಿಸಿ ಸಭೆ ಕರೆದಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮಿತಿ ಕಾರ್ಯದರ್ಶಿ ವಿಷ್ಣುಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀಡಿ ಗುತ್ತಿಗೆದಾರರ ಮುಷ್ಕರ ಅಂತ್ಯ
ಮಂಗಳೂರು: ಮೆ.ಟೆಲಿಫೋನ್ ಬೀಡಿ ಸಂಸ್ಥೆಯಲ್ಲಿ ಬೀಡಿ ಗುತ್ತಿಗೆದಾರರು ಹೂಡಿದ್ದ ಮುಷ್ಕರಕ್ಕೆ ತೆರೆಬಿದ್ದಿದೆ. ಪ್ರತಿ ಲಕ್ಷ ಬೀಡಿ ತಯಾರಿಕೆಗೆ 57 ಕಿಲೊ ಬೀಡಿ ಎಲೆ ನೀಡಬೇಕು ಎಂದು ಒತ್ತಾಯಿಸಿ ಮೆ.ಟೆಲಿಫೋನ್ ಬೀಡಿ ಸಂಸ್ಥೆಯಲ್ಲಿ ಗುತ್ತಿಗೆದಾರರು ಡಿ.27ರಿಂದ ಮುಷ್ಕರ ಹೂಡಿದ್ದರು. ಇದರಿಂದ ಸಂಸ್ಥೆಯ 3,200 ಬೀಡಿಕಾರ್ಮಿಕರು ಕೆಲಸ ಇಲ್ಲದೆ ಕಂಗಾಲಾಗಿದ್ದರು. ಎಐಟಿಯುಸಿ ನೇತೃತ್ವದ ಎಸ್.ಕೆ.ಬೀಡಿ ವರ್ಕರ್ಸ್ ಫೆಡರೇಶನ್  ಕಾರ್ಮಿಕ ಆಯುಕ್ತ ಜಿ.ಡಿ.ನಾಗೇಶ್‌ಗೆ ಮನವಿ ಸಲ್ಲಿಸಿತ್ತು. ಡಿ.28ರಂದು ಒಂದು ಸುತ್ತಿನ ಮಾತುಕತೆ ನಡೆದಿದ್ದು,ಜ.4ಕ್ಕೆ ಮುಂದೂಡಲಾಗಿತ್ತು. ಶನಿವಾರ ನಡೆದ ಸಂಧಾನ ಮಾತುಕತೆ ಫಲಪ್ರದವಾಯಿತು. ಇದರಂತೆ ಪ್ರತಿ ಕಿಲೋ ಎಲೆಗೆ 1923 ಬೀಡಿ ತಯಾರಿಸಿ ಗುತ್ತಿಗೆದಾರರು ಸಂಸ್ಥೆಗೆ ನೀಡಬೇಕಾಗಿದೆ.
ಇಂದು, ನಾಳೆ ಕಿರುಷಷ್ಠಿ ಉತ್ಸವ
ಮೂಲ್ಕಿ: ಹಳೆಯಂಗಡಿ ಸಮೀಪದ ತೋಕೂರಿನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಮಹೋತ್ಸವವು 5 ಮತ್ತು 6ರಂದು ಜರಗಲಿದೆ. 5 ರಂದು ಪಂಚಮಿ ಉತ್ಸವ, ತುಲಾಭಾರ ಸೇವೆ, ರಾತ್ರಿ ಪಂಚಮಿ ಉತ್ಸವ ಬಲಿ ಮತ್ತು 6ರಂದು ಕಿರು ಷಷ್ಠಿ ಉತ್ಸವ, ಬೆಳಗ್ಗೆ ಚಂಡಿಕಾ ಯಾಗ, ರಾತ್ರಿ ಬಲಿ ಉತ್ಸವ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.


ಇಂದಿನಿಂದ ಪ್ರವಚನ
ಮಂಗಳೂರು: ಕುಡ್ತೇರಿ ಶ್ರೀಮಹಾಮ್ಮಾಯ ದೇವಸ್ಥಾನದಲ್ಲಿ ಜ.5ರಿಂದ 26ರ ವರೆಗೆ 22 ದಿನಗಳ ಕಾಲ ಮಹಾಭಾರತದ ಆದಿಪರ್ವ ಹಾಗೂ ಸಭಾ ಪರ್ವ ಧಾರ್ಮಿಕ ಪ್ರವಚನ ನಡೆಯಲಿದೆ. ಮುಂಬೈನ ಭಾವನಾ ಭಾಸ್ಕರ ಪ್ರಭು ಪ್ರತಿದಿನ ಸಂಜೆ 5ರಿಂದ 7.30ರ ವರೆಗೆ ಕೊಂಕಣಿ ಭಾಷೆಯಲ್ಲಿ ಪ್ರವಚನ ನಡೆಸಿಕೊಡುವರು.
ಇಂದು ಪ್ರತಿಭಟನೆ
ಮಂಗಳೂರು: ಭಾರತಕ್ಕೆ ಬಂದಿರುವ ಎಲ್ಲ ಹಿಂದೂ ನಿರಾಶ್ರಿತರಿಗೆ ತಕ್ಷಣ ಭಾರತದ ನಾಗರಿಕತ್ವ ನೀಡಬೇಕು ಮತ್ತು ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ದೇಶಾದ್ಯಂತ ಜ.5ರಂದು ಪ್ರತಿಭಟನೆ ನಡೆಸಲಿದೆ. ಅದರಂತೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಗ್ಗೆ 11.30ಕ್ಕೆ ಪ್ರತಿಭಟನೆ ನಡೆಯಲಿದ್ದು, ದೇರಳಕಟ್ಟೆ ವಿದ್ಯಾರ್ಥಿನಿ ಅಪಹರಣ, ಅತ್ಯಾಚಾರ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯವೂ ನಡೆಯಲಿದೆ ಎಂದು ಸಮಿತಿ ಸಮನ್ವಯಕಾರ ಪ್ರಸನ್ನ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement