ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಜಿಲ್ಲಾದ್ಯಂತ ಕೋ.ಚ. ವಿರುದ್ಧ ತೀವ್ರ ಆಕ್ರೋಶ

Rashmi Kasaragodu
Updated On : 5 Jan 2014, 2:02 am

ಮಡಿಕೇರಿ: ಮಡಿಕೇರಿ ಸೇರಿದಂತೆ ಕೊಡಗು ಜಿಲ್ಲೆಯ ಪ್ರಮುಖ ಊರುಗಳಲ್ಲಿ ಸಾಹಿತಿ ಕೋ. ಚನ್ನಬಸಪ್ಪ ವಿರುದ್ಧ ಟಿಪ್ಪು ವೈಭವೀಕರಣ ವಿರೋಧಿ ಸಮಿತಿ ವತಿಯಿಂದ ರಸ್ತೆ ತಡೆ ಹಾಗೂ ಪರ ಮತ್ತು ವಿರೋಧ ಪ್ರತಿಭಟನೆಗಳು ಜರುಗಿದವು.  
 ಜಿಲ್ಲೆಯಾದ್ಯಂತ ರಸ್ತೆ ತಡೆ ನಡೆಸಲು ಕರೆ ನೀಡಿದ್ದ ಹಿನ್ನೆಲೆ ಬಿಜೆಪಿ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಕೊಡವ ಸಮಾಜ, ಕೊಡವ ಮಕ್ಕಡ ಕೂಟ, ಹಿಂದೂ ಜಾಗರಣಾ ವೇದಿಕೆಯ ಬೆಂಬಲದೊಂದಿಗೆ   ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಶನಿವಾರ ಬೆಳಗ್ಗೆ 10 ರಿಂದ 11 ಗಂಟೆವರೆಗೆ ರಸ್ತೆ ತಡೆ ನಡೆಸಲಾಯಿತು.
ಈ ಸಂದರ್ಭ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಸಂಚಾಲಕ ಉಲ್ಲಾಸ್, ಕೊಡವರನ್ನು ಅಪಮಾನವೆಸಗಿರುವ ಕೋ. ಚನ್ನಬಸಪ್ಪ ಕ್ಷಮೆಯಾಚಿಸುವಂತೆ ಆಗ್ರಹಿಸಿ 3 ಹಂತಗಳಲ್ಲಿ ಹೋರಾಟ ನಡೆಸಿದ್ದಲ್ಲದೆ, ಜಿಲ್ಲಾಡಳಿತಕ್ಕೆ ಮನವಿ ಕೂಡಾ ಸಲ್ಲಿಸಲಾಗಿದೆ. ಆದರೆ, ಈ ವರೆಗೂ ಚನ್ನಬಸಪ್ಪ ಕೊಡಗಿನ ಜನರ ಕ್ಷಮೆಯಾಚಿಸಿಲ್ಲ, ಜಿಲ್ಲಾಡಳಿತವೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಟೀಕಿಸಿದರು.
ಜಿಲ್ಲಾಡಳಿತವೇ ನಿರ್ಬಂಧ ಹೇರಲಿ: ಕೋ. ಚನ್ನಬಸಪ್ಪ ಜಿಲ್ಲೆಯ ಜನರ ಕ್ಷಮೆಯಾಚಿಸದೆ ಇದ್ದಲ್ಲಿ ಜಿಲ್ಲಾಡಳಿತವೇ ಜಿಲ್ಲೆಗೆ ಬರಲು ಚನ್ನಬಸಪ್ಪನವರಿಗೆ ನಿರ್ಬಂಧ ಹೇರಬೇಕು ಎಂದು ಉಲ್ಲಾಸ್ ಒತ್ತಾಯಿಸಿದರು.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಶಂಭು ಸುಬ್ಬಯ್ಯ ಮಾತನಾಡಿ, ಚನ್ನಬಸಪ್ಪ ವಿರುದ್ಧ ಜಿಲ್ಲೆಯ ಎಲ್ಲಾ ಜನತೆ ಒಟ್ಟಾಗಿ ಹೋರಾಟ ನಡೆಸಬೇಕು. ಜಿಲ್ಲೆಯ ಜನರ ಪರವಾಗಿ ಟಿಪ್ಪು ವೈಭವೀಕರಣ ವಿರೋಧಿ ಸಮಿತಿ ನಡೆಸುತ್ತಿರುವ ಈ ಹೋರಾಟಕ್ಕೆ ಇತರ ಸಂಘಟನೆಗಳೂ ಬೆಂಬಲ ನೀಡಬೇಕು ಎಂದು ಶಂಭು ಅಯ್ಯಪ್ಪ ಮನವಿ ಮಾಡಿದರು.
ಟಿಪ್ಪು ವೈಭವೀಕರಣ ವಿರೋಧಿ ಸಮಿತಿ ಸಂಚಾಲಕ ಧನಂಜಯ್ ಮಾತನಾಡಿ, ರಾಜಕೀಯ ಕುತಂತ್ರದಿಂದ ಚನ್ನಬಸಪ್ಪ ಟಿಪ್ಪು ವೈಭವೀಕರಣ ಮಾಡುತ್ತಿದ್ದಾರೆ. ಟಿಪ್ಪು ಇಲ್ಲಿನ ಕೊಡವರನ್ನು ಮತಾಂತರ ಮಾಡಿರುವುದಕ್ಕೆ  ಅನೇಕ ಜೀವಂತ ಆಧಾರಗಳಿದ್ದು, ಅಂತಹ ವ್ಯಕ್ತಿಯ ವೈಭವೀಕರಣವನ್ನು ಜಿಲ್ಲೆಯ ಜನತೆ ಸಹಿಸಲು ಸಾಧ್ಯವೇ ಇಲ್ಲ. ಯಾವುದೇ ಕಾರಣಕ್ಕೂ ಚನ್ನಬಸಪ್ಪ ಕ್ಷಮೆಯಾಚಿಸದೇ ಮಂಗಳವಾರದಿಂದ ಆರಂಭವಾಗುವ ಸಾಹಿತ್ಯ ಸಮ್ಮೇಳನಕ್ಕೆ ಬರಬಾರದು. ಬಂದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಉಷಾ ದೇವಮ್ಮ, ಬೀನಾ ಬೊಳ್ಳಮ್ಮ, ಆರ್‌ಎಸ್‌ಎಸ್ ಮುಖಂಡ ಅರುಣ್ ಕುಮಾರ್, ವಿಹಿಂಪ ಮತ್ತು ಬಜರಂಗದಳದ ಕಾರ್ಯಕರ್ತರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸಂಪಾಜೆಯಲ್ಲಿ ಪ್ರತಿಭಟನೆ: ಕೋ.ಚ. ವಿರುದ್ಧ ಸಂಪಾಜೆ ಗಡಿ ಪ್ರದೇಶದಲ್ಲಿ ಬಿಜೆಪಿ ವತಿಯಿಂದ ಸಂಪಾಜೆ ಗೇಟನ್ನು ಒಂದು ಗಂಟೆಗಳ ಕಾಲ ಬಂದ್ ಮಾಡಲಾಯಿತು. ಸಭೆಯನ್ನು ಉದ್ದೇಶಿಸಿ ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷ  ಕಿಶೋರ್ ಕುಮಾರ್ ಮಾತಾನಾಡಿದರು. ಬಿಜೆಪಿ ಪ್ರಮುಖರಾದ ಬಾಲಚಂದ್ರ ಕಳಗಿ, ಸುಬ್ರಹ್ಮಣ್ಯ ಉಪಾಧ್ಯಾಯ, ಚೆದ್ಕಾರ್ ಕುಮಾರ್, ಯಶೋಧರ, ಪುರುಷೋತ್ತಮ ಬಿ.ಬಿ., ವಿಜಯ ಕೆ.ಎ., ಜಯರಾಜ್, ಶಶಿಧರ ಬಿ.ಟಿ. ನೇತೃತ್ವ ವಹಿಸಿದ್ದರು.
ಚೆಟ್ಟಳ್ಳಿಯಲ್ಲಿ ಪ್ರತಿಭಟನೆ: ಕೊಡವರನ್ನು ಅವಮಾನಿಸಿರುವ ಲೇಖಕ ಕೋ. ಚನ್ನಬಸಪ್ಪ ವಿರುದ್ಧ ಚೆಟ್ಟಳ್ಳಿಯಲ್ಲಿಯೂ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಗ್ರಾ.ಪಂ. ಅಧ್ಯಕ್ಷ ಮುಳ್ಳಂಡ ಸನ್ನಿ ಅಯ್ಯಪ್ಪ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಮುಳ್ಳಂಡ ದೇವಯ್ಯ, ಕೊಂಗೇಟೀರ ಹರೀಶ್ ಅಪ್ಪಣ್ಣ, ಪುತ್ತೇರೀರ ಪಪ್ಪು ತಿಮ್ಮಯ್ಯ, ಪಳಂಗಂಡ ಸುಬ್ರಹ್ಮಣಿ, ಆಟೋ ಚಾಲಕ, ಮಾಲೀಕರ ಸಂಘದ ಸದಸ್ಯರು ಹಾಜರಿದ್ದರು.
ನಾಪೋಕ್ಲಿನಲ್ಲಿ ಪ್ರತಿಭಟನೆ: ನಾಪೋಕ್ಲು ಬಸ್ ನಿಲ್ದಾಣದಲ್ಲಿ ಹಿಂದೂ ಸಂಘಟನೆಗಳ ಪ್ರತಿಭಟನೆ ನಡೆಸಿ, ಕೋ. ಚನ್ನಬಸಪ್ಪ ಪ್ರತಿಕೃತಿ ದಹಿಸಿದರು. ಈ ಸಂದರ್ಭ ನಾಪೋಕ್ಲು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮದ್ದಯ್ಯ ಮತ್ತು ಹಿಂದೂ ಸಂಘಟನೆಗಳ ಪ್ರಮುಖ ಕಂಗಂಡ ಜಾಲಿ ಪೂವಪ್ಪ ಮಾತನಾಡಿದರು.
ಕೊಡವ ಸಮಾಜದ ಅಧ್ಯಕ್ಷ ಮಣವಟ್ಟೀರ ಮಾಚಯ್ಯ, ವಿಎಸ್‌ಎಸ್‌ಎನ್‌ನ ಅಧ್ಯಕ್ಷ ಕೇಟೋಳೀರ ಹರೀಶ್ ಪೂವಯ್ಯ, ಮಾಜಿ ಅಧ್ಯಕ್ಷ ನೂರಂಬಾಡ ಉದಯಶಂಕರ್, ಶಿವಚಳಿಯಂಡ ಜಗದೀಶ್, ಶಿವಚಳಿಯಂಡ  ಅಂಬಿಕಾರ್ಯಪ್ಪ, ಪಾಡಿಯಮ್ಮನ ಮನುಮಹೇಶ್, ಕೇಟೋಳೀರ ಡಾಲಿ ಅಪ್ಪಚ್ಚ ಪಾಲ್ಗೊಂಡಿದ್ದರು.
ರಸ್ತೆ ತಡೆ:  ನಾಪೋಕ್ಲು - ಬಲ್ಲಮಾವಟಿ ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕರು ಬಲ್ಲಮಾವಟಿಯ ಕೂಡುರಸ್ತೆಯಲ್ಲಿ 1 ಗಂಟೆಗಳ ಕಾಲ ರಸ್ತೆ, ಚನ್ನಬಸಪ್ಪ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಕರವಂಡ ಲವಾ ನಾಣಯ್ಯ, ಮಂಡೀರ ಮನುಪೊನ್ನಣ್ಣ, ಮಚ್ಚುರ ರವೀಂದ್ರ, ಬಾಬಿ ಭೀಮಯ್ಯ, ಸುಧನ್ ಸುಬ್ಬಯ್ಯ, ಸಿ.ಆರ್. ಮಿಥುನ್, ಚಂಗೇಟೀರ ಕುಮಾರ, ಮಣವಟ್ಟೀರ ದಯಾ ಕುಟ್ಟಪ್ಪ, ಬದಂಜೆಟ್ಟೀರ ದೇವಯ್ಯ, ಕರವಂಡ ಬೆಲ್ಲು ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement