ಟಿಪ್ಪು ಸುಲ್ತಾನ್ ಹೋರಾಟ ಸಮಿತಿ ಪ್ರತಿಭಟನೆ
ಮಡಿಕೇರಿ: ಟಿಪ್ಪು ಸುಲ್ತಾನ್ ವಿರುದ್ಧ ಟಿಪ್ಪು ವೈಭವೀಕರಣ ವಿರೋಧಿ ಸಮಿತಿಯ ಪ್ರಮುಖರು ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಕೊಡಗಿನಲ್ಲಿ ಕೋಮು ಸಾಮರಸ್ಯ ಕದಡಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಟಿಪ್ಪು ಸುಲ್ತಾನ್ ಹೋರಾಟ ಸಮಿತಿ ಇಂಥವರ ವಿರುದ್ಧ ಜಿಲ್ಲಾಡಳಿತ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಬೃಹತ್ ಪ್ರತಿಭಟನೆ ನಡೆಸಿತು.
ಮಡಿಕೇರಿ ನಗರದ ಎ.ವಿ. ಶಾಲೆ ಬಳಿಯಿಂದ ಟಿಪ್ಪು ಸುಲ್ತಾನ್, ಕೋ. ಚನ್ನಬಸಪ್ಪ ಪರ ಹಾಗೂ ಅಡ್ಡಂಡ ಕಾರ್ಯಪ್ಪ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನೂರಾರು ಮಂದಿ ಮೆರವಣಿಗೆಯಲ್ಲಿ ತೆರಳಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಪಿ.ಎಂ. ಖಾಸಿಂ, ಪ್ರಮುಖರಾದ ಅಮೀನ್ ಮೊಹ್ಸೀನ್, ಮನ್ಸೂರ್ ಆಲಿ, ಟಿ.ಎಚ್. ಅಬೂಬಕ್ಕರ್, ಕುಂಞ ಅಬ್ದುಲ್ಲಾ ಹಾಗೂ ದಲಿತ ಮುಖಂಡ ಪ್ರೇಮ್ ಕುಮಾರ್ ಅವರು ಹಿರಿಯ ಸಾಹಿತಿ ಕೋ. ಚನ್ನಬಸಪ್ಪ ವಿರುದ್ಧ ಪ್ರತಿಭಟನೆ ಕೈಗೊಂಡ ಸಂಘ ಪರಿವಾರದವರ ವಿರುದ್ಧ ಕಿಡಿಕಾರಿದರು. ಜಿಲ್ಲೆಯಲ್ಲಿ ಟಿಪ್ಪುವಿನ ವಿರುದ್ಧ ಮುಂದಿನ ದಿನಗಳಲ್ಲಿ ಯಾರೂ ಚಕಾರ ಎತ್ತಬಾರದು ಎಂದು ಒತ್ತಾಯಿಸಿದ ಪ್ರತಿಭಟನೆಯ ಪ್ರಮುಖರು ಒಂದುವೇಳೆ ಅಂತಹ ಪ್ರಯತ್ನಕ್ಕೆ ಮುಂದಾದಲ್ಲಿ ತಕ್ಕ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದು ಕೇವಲ ಸಾಂಕೇತಿಕ ಪ್ರತಿಭಟನೆಯಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.