ಮಾರುಕಟ್ಟೆ-ಬೀದಿ ವ್ಯಾಪಾರಸ್ಥರ ಜಟಾಪಟಿ
ಮಂಗಳೂರು: ಬೀದಿಬದಿ ವ್ಯಾಪಾರಸ್ಥರು ಅನಧಿಕೃತವಾಗಿ ಕೇಂದ್ರ ಮಾರುಕಟ್ಟೆ ಪರಿಸರದಲ್ಲಿ ವ್ಯಾಪಾರ ಮಾಡುವುದನ್ನು ವಿರೋಧಿಸಿ ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಶನಿವಾರ ಪ್ರತಿಭಟನೆ ನಡೆಸಿತು. ಇದಕ್ಕೆ ಪ್ರತಿಯಾಗಿ ಬೀದಿಬದಿ ವ್ಯಾಪಾರಸ್ಥರ ಸಂಘಟನೆ ಪ್ರತಿನಿಧಿಗಳು ಧಿಕ್ಕಾರ ಘೋಷಣೆ ಹಾಕಿದಾಗ ಸ್ಥಳದಲ್ಲಿ ಬಿಗು ಪರಿಸ್ಥಿತಿ ನಿರ್ಮಾಣ ವಾಗಿ, ನಿಯಂತ್ರಿಸಲು ಪೊಲೀಸರು ಲಘುಲಾಠಿ ಪ್ರಹಾರ ನಡೆಸಿ ಘೋಷಣೆ ಕೂಗಿದವರನ್ನು ಬಂಧಿಸಿದರು.
ಕೇಂದ್ರ ಮಾರುಕಟ್ಟೆ ಸುತ್ತಮುತ್ತ ಬೀದಿಬದಿ ವ್ಯಾಪಾರಸ್ಥರು ನಿಯಮಬಾಹಿರವಾಗಿ ವ್ಯಾಪಾರ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು. ಸಂಘದ ಸ್ಥಾಪಕ ಕಾರ್ಯದರ್ಶಿ ಹಮೀದ್ ಕಂದಕ್, ಮುಖಂಡರಾದ ಜೆ.ಪಿ. ಸಾಲ್ಯಾನ್ ಮತ್ತಿತರರು ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ನಿಯಮ ಪ್ರಕಾರ ಕೇಂದ್ರ ಮಾರುಕಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಕ್ಕೆ ಅವಕಾಶವಿಲ್ಲ. ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರು ಮಹಾನಗರ ಪಾಲಿಕೆಯಿಂದ ಪರವಾನಗಿ ಪಡೆದು, ಎಪಿಎಂಸಿ ಶುಲ್ಕ ಪಾವತಿಸಿ ವ್ಯಾಪಾರ ಮಾಡುತ್ತಿದ್ದಾರೆ. ಆದರೆ ಎಲ್ಲೆಂದರಲ್ಲಿ ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿರುವುದರಿಂದ ನಮ್ಮ ವ್ಯಾಪಾರಕ್ಕೆ ತೊಂದರೆಯಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಾವು ಬೀದಿಬದಿ ವ್ಯಾಪಾರಸ್ಥರ ವಿರೋಧಿಯಲ್ಲ, ಆದರೆ ನಮ್ಮ ಕ್ರಮಬದ್ಧ ವ್ಯಾಪಾರಕ್ಕೆ ಅವಕಾಶ ನೀಡಬೇಕು. ನಮ್ಮ ಮನವಿಗೆ ಸ್ಪಂದಿಸದ ಕಾರಣ ಪ್ರತಿಭಟನೆ ನಡೆಸುತ್ತಿದ್ದು, ನ್ಯಾಯ ಸಿಗುವವರೆಗೆ ಇದನ್ನು ಮುಂದುವರಿಸುವುದಾಗಿ ಹಮೀದ್ ಕಂದಕ್ ಹೇಳಿದರು.
ಧಿಕ್ಕಾರ, ಲಾಠಿಪ್ರಹಾರ: ಅಷ್ಟರಲ್ಲಿ ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್, ಇಮ್ತಿಯಾಜ್, ರಝಾಕ್ ನೇತೃತ್ವದಲ್ಲಿ ಬೀದಿಬದಿ ವ್ಯಾಪಾರಸ್ಥರು, ಕಾರ್ಮಿಕರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಧಿಕ್ಕಾರ ಕೂಗಿದರು. ಇದರಿಂದ ಸ್ಥಳದಲ್ಲಿ ಬಿಗು ವಾತಾವರಣ ತಲೆದೋರಿತು.
ಬೀದಿಬದಿ ವ್ಯಾಪಾರಸ್ಥರು ನ್ಯಾಯಯುತ ವ್ಯಾಪಾರ ನಡೆಸುತ್ತಿದ್ದಾರೆ. ಅವರ ವಿರುದ್ಧ ಪ್ರತಿಭಟನೆ ನಡೆಸುವ ಔಚಿತ್ಯವನ್ನು ಪ್ರಶ್ನಿಸಿದರು. ದಿಢೀರನೆ ನಡೆದ ಈ ಬೆಳವಣಿಗೆಯಿಂದ ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರು ವಿಚಲಿತರಾದಂತಾದರು. ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಧಿಕ್ಕಾರ ಕೂಗುತ್ತಿದ್ದವರನ್ನು ಚದುರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು. ಬಳಿಕ 28ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ತೆಗೆದುಕೊಂಡು ಬಂಧಿಸಿ ಬಂದರು ಪೊಲೀಸ್ ಠಾಣೆಗೆ ಕರೆದೊಯ್ದರು. ಬಳಿಕ ಅಲ್ಲಿ ಬಿಡುಗಡೆ ಮಾಡಲಾಯಿತು.
ಮಾರುಕಟ್ಟೆಯಲ್ಲಿ ಕೆಲವು ವ್ಯಾಪಾರಿಗಳಿಗೆ ಮೂರ್ನಾಲ್ಕು ಅಂಗಡಿಗಳಿದ್ದು, ಇತರೆ ವ್ಯಾಪಾರಸ್ಥರಿಗೆ ತೊಂದರೆ ಕೊಡುತ್ತಿದ್ದಾರೆ. ಕಾರ್ಮಿಕರನ್ನು ಶೋಷಿಸುತ್ತಿದ್ದಾರೆ. ಬೀದಿಬದಿ ವ್ಯಾಪಾರಸ್ಥರ ಪರವಾಗಿ ಹೋರಾಟ ಮುಂದುವರಿಯಲಿದೆ ಎಂದು ಸುನೀಲ್ ಕುಮಾರ್ ಬಜಾಲ್ ಪ್ರತಿಕ್ರಿಯಿಸಿದ್ದಾರೆ