ಮೂರ್ನಾಡಿನಲ್ಲೂ ಪ್ರತಿಭಟನೆ
ಮೂರ್ನಾಡು: ಕೊಡವರನ್ನು ಅಪಮಾನಿಸಿರುವ ಕೋ. ಚೆನ್ನಬಸಪ್ಪ ಕೊಡವರ ಕ್ಷಮೆ ಯಾಚಿಸುವಂತೆ ಒತ್ತಾಯಿಸಿ ಶನಿವಾರ ಮೂರ್ನಾಡಿನಲ್ಲಿ ಸಂಘ ಪರಿವಾರಗಳು ರಸ್ತೆತಡೆ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಅರ್ಧ ಗಂಟೆ ಕಾಲ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದರು. ಮಡಿಕೇರಿ ತಾಲೂಕು ಆರ್ಎಂಸಿ ಅಧ್ಯಕ್ಷ ಬೆಲ್ಲು ಸೋಮಯ್ಯ ಮಾತನಾಡಿ, ಕೊಡವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಒಳಗೊಂಡ ಕೃತಿಯನ್ನು ಕೋ. ಚನ್ನಬಸಪ್ಪ ರಚಿಸಿದ್ದಾರೆ. ಅವರು ಕೊಡವರ ಕ್ಷಮೆ ಕೇಳುವವರೆಗೂ ಕೊಡಗಿಗೆ ಕಾಲಿಡಲು ಬಿಡುವುದಿಲ್ಲ. ಕ್ಷಮೆ ಯಾಚಿಸಿ ನಂತರ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿ ಎಂದರು. ಮೂರ್ನಾಡು ಕೊಡವ ಸಮಾಜ ಅಧ್ಯಕ್ಷ ವಾಂಚೀರ ಅಜೇಯ್ ಕಾವೇರಪ್ಪ, ಬಿಜೆಪಿ ಸ್ಥಾನೀಯ ಸಮಿತಿ ಮಾಜಿ ಅಧ್ಯಕ್ಷ ಮುಂಡಂಡ ಕುಟ್ಟಪ್ಪ ಮಾತನಾಡಿದರು. ಮೂರ್ನಾಡು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಬಿ.ಕೆ. ಪೂವಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪುದಿಯೊಕ್ಕಡ ಪೊನ್ನು ಮುತ್ತಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಳಂಗಂಡ ಕೆ.ಅಪ್ಪಣ್ಣ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸುರಾಜ್ ಹಾಗೂ ಇದ್ದರು.
ಕುಶಾಲನಗರ: ಬಿಜೆಪಿ ಪ್ರತಿಭಟನೆ
ಕುಶಾಲನಗರ: ಸುಳ್ಳು ಚರಿತ್ರೆ ಸೃಷ್ಟಿಸಿ ಕೊಡವರ ವಿರುದ್ಧ ಅವಹೇಳನಕಾರಿ ಬರವಣಿಗೆ ಪ್ರಕಟಿಸಿ ಕೊಡವರನ್ನು ಅವಹೇಳನ ಮಾಡಿರುವ ಸಾಹಿತಿ ಕೋ.ಚೆನ್ನಬಸಪ್ಪ ಅವರು ಕೊಡವರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಘಟಕ ಆಶ್ರಯದಲ್ಲಿ ಕುಶಾಲನಗರದಲ್ಲಿ ಪ್ರತಿಭಟನೆ, ರಸ್ತೆ ತಡೆ ನಡೆಯಿತು.
ಬಿಜೆಪಿ ನಗರಾಧ್ಯಕ್ಷ ವಿಜಯಕುಮಾರ್ ಹಾಗೂ ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ಜೆಮ್ಸಿ ಪೊನ್ನಪ್ಪ ನೇತೃತ್ವದಲ್ಲಿ ಇಲ್ಲಿನ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕೋ.ಚೆನ್ನಬಸಪ್ಪ ಪ್ರತಿಕೃತಿ ದಹಿಸಿ ಘೋಷಣೆ ಕೂಗಿದರು. ಚೆನ್ನಬಸಪ್ಪ ಕೊಡವರ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಮಡಿಕೇರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಅವರು ತೆರಳದಂತೆ ತಡೆಹಿಡಿಯಲಾಗುವುದು ಎಂದು ಎಚ್ಚರಿಸಿದರು. ಅಲ್ಲದೆ ಎ.ಕೆ. ಸುಬ್ಬಯ್ಯ ಅವರು ಕೊಡವರ ಬಗ್ಗೆ ತಳೆದಿರುವ ವಿರೋಧಿ ನೀತಿಯನ್ನು ಖಂಡಿಸಿ ಅವರ ವಿರುದ್ಧವೂ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ನೂರಾರು ಕಾರ್ಯಕರ್ತರು ಮಾನವ ಸರಪಳಿ ರಚಿಸಿ, ಒಂದು ಗಂಟೆ ಕಾಲ ರಸ್ತೆತಡೆ ನಡೆಸಿದರು. ನಂತರ ಕೋ.ಚೆನ್ನಬಸಪ್ಪ ಅವರ ಪ್ರತಿಕೃತಿಗೆ ಪಟಾಕಿ ಸರಮಾಲೆ ಅಳವಡಿಸಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಪ.ಪಂ. ಅಧ್ಯಕ್ಷ ಡಿ.ಕೆ. ತಿಮ್ಮಪ್ಪ, ಬಿಜೆಪಿ ಪ್ರಮುಖರಾದ ಜಿ.ಎಲ್. ನಾಗರಾಜ್, ಎಂ.ವಿ. ನಾರಾಯಣ್, ಶಿವಶಂಕರ್, ಮಂಜುನಾಥ್, ಅಮೃತ್ರಾಜ್, ವೈಶಾಖ್ ಪಾಲ್ಗೊಂಡಿದ್ದರು.