'ತುಳುನಾಡ್ದ ಜಾತ್ರೆ'ಯಲ್ಲಿ ಪ್ರತ್ಯೇಕ ತುಳು ರಾಜ್ಯ ಕೂಗು
ಮಂಗಳೂರು: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸಬೇಕು, ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಇತ್ಯಾದಿ ಪ್ರಮುಖ ಬೇಡಿಕೆಗಳ ಹಕ್ಕೊತ್ತಾಯ ನಡುವೆಯೇ ಪಂಚದ್ರಾವಿಡ ಭಾಷೆಗಳಿಗೆ ಪ್ರತ್ಯೇಕ ರಾಜ್ಯವಿರುವಾಗ ತುಳುವಿಗೂ ಪ್ರತ್ಯೇಕ ರಾಜ್ಯ ಯಾಕೆ ಸಾಧ್ಯವಿಲ್ಲ ಎಂಬ ಕೂಗು ಎದ್ದಿದೆ.
ಒಡಿಯೂರಿನ ಶ್ರೀಗುರುದೇವದತ್ತ ಸಂಸ್ಥಾನಮ್ನಲ್ಲಿ ಫೆ.7ರಿಂದ ನಡೆಯುವ ವಿಜಯ ರಜತ ಸಂಭ್ರಮ ಸಲುವಾಗಿ ಭಾನುವಾರ ನಗರದ ನೆಹರೂ ಮೈದಾನದಲ್ಲಿ ನಡೆದ 'ತುಳುನಾಡ್ದ ಜಾತ್ರೆ' ಕಾರ್ಯಕ್ರಮದಲ್ಲಿ ಈ ಆಗ್ರಹ ವ್ಯಕ್ತಗೊಂಡಿದೆ.
ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಕೊಂಕಣಿ ಭಾಷಿಗರಿಗೆ ಪ್ರತ್ಯೇಕ ರಾಜ್ಯವಿದೆ. ಆದರೆ ತುಳು ಭಾಷಿಗರಿಗೆ ಪ್ರತ್ಯೇಕ ರಾಜ್ಯ ಎಂಬುದಿಲ್ಲ. ಜಗತ್ತಿನ ಎಲ್ಲ ಕಡೆಗಳಲ್ಲಿ ತುಳುವರಿದ್ದು, ಒಂದು ಕೋಟಿಯಷ್ಟು ತುಳುವರಿದ್ದಾರೆ. ದೇಶದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತುಳುವರು ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ. ತುಳು ಸಾಹಿತ್ಯವೂ ವಿಫುಲವಾಗಿದೆ. ತುಳು ಸಂಶೋಧಕ ದಿ.ಎಸ್.ವಿ.ಪಣಿಯಾಡಿ ಅವರು ತುಳುವರ ಅಸ್ತಿತ್ವಕ್ಕೆ, ತುಳು ಸಂಸ್ಕೃತಿ ಉಳಿವಿಗೆ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಬಹಳ ಹಿಂದೆಯೇ ಇಟ್ಟಿದ್ದರು. ಹೀಗಿರುವಾಗ ಪ್ರತ್ಯೇಕ ತುಳು ರಾಜ್ಯ ಈಡೇರಿಸಲು ಅಸಾಧ್ಯವಾದ ಬೇಡಿಕೆಯಲ್ಲ. ತುಳುವರ ವಿವಿಧ 25 ಬೇಡಿಕೆಯನ್ನು ಒಳಗೊಂಡ ಮನವಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು ಎಂದು ನಿರ್ಣಯ ಮಂಡಿಸಿದ ಸಂಶೋಧಕ ತುಕಾರಾಮ ಪೂಜಾರಿ ಹೇಳಿದರು. ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ, ಈಗ 'ಕನ್ನಡ ಜನನಿಯ ಸಹಜಾತೆ, ಜಯಹೇ ನಮ್ಮಯ ತುಳು ಮಾತೆ' ಎನ್ನುವಂತಾಗಿದೆ. ಕನ್ನಡ ರಾಜ್ಯಭಾಷೆಯಾಗಿದ್ದು, ತುಳು ತಾಯಿ ಭಾಷೆಯಾಗಿದೆ. ಭಾಷೆ ಇದ್ದರೆ ಮಾತ್ರ ಸಂಸ್ಕೃತಿ ಉಳಿಯಬಹುದು. ತುಳುವಿಗೆ ಸೂಕ್ತ ಸ್ಥಾನಮಾನ ನೀಡುವಲ್ಲಿ ರಾಜಕಾರಣಿಗಳು ಶ್ರಮಿಸಬೇಕು ಎಂದು ಆಶಿಸಿದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾತನಾಡಿ, ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು. ಈ ಬಗ್ಗೆ ಮತ್ತೊಮ್ಮೆ ಸ್ವಾಮೀಜಿಗಳ ಸಹಿತ ದೆಹಲಿಗೆ ತೆರಳಿ ಕೇಂದ್ರವನ್ನು ಒತ್ತಾಯಿಸಬೇಕು ಎಂದರು.