ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

12 ರಿಂದ ಫೆ. 24ರವರೆಗೆ 'ಕರಾವಳಿ ಉತ್ಸವ'

Lingaraj Badiger
Updated On : 7 Jan 2014, 1:05 am

ಮಂಗಳೂರು: ಜಿಲ್ಲಾಡಳಿತ, ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜ. 12 ರಿಂದ ಫೆ. 24ರವರೆಗೆ ಕರಾವಳಿ ಮೈದಾನದಲ್ಲಿ 'ಕರಾವಳಿ ಉತ್ಸವ' ನಡೆಯಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ನಿರ್ಣಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಕಾರ್ಯಕ್ರಮವು ಕೇವಲ ವ್ಯಾಪಾರೀಕರಣವಾಗದೆ, ಕೈಗಾರಿಕೆಗಳ ಉತ್ಪನ್ನಗಳಿಗೆ, ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ವೇದಿಕೆಯಾಗಲಿ. ಕಾರ್ಯಕ್ರಮದಲ್ಲಿ ಜನರಿಗೆ ಕರಾವಳಿ ಸಂಸ್ಕೃತಿಯ ಬಗ್ಗೆ ಪರಿಚಯಿಸುವ ಕಾರ್ಯಕ್ರಮಗಳನ್ನು ರೂಪಿಸಿ ಎಂದು ಸೂಚಿಸಿದರು.
ಮುಂದಿನ ವರ್ಷದಲ್ಲಿ ಡಿ. 3ನೇ ಶುಕ್ರವಾರದಂದೇ ಕರಾವಳಿ ಉತ್ಸವ ಪ್ರಾರಂಭಿಸುವಂತೆ ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯಮಟ್ಟದ ಯುವಜನಮೇಳ: ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಫೆಬ್ರವರಿಯಲ್ಲಿ ವಿಟ್ಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಾಜ್ಯಮಟ್ಟದ ಯುವಜನ ಮೇಳ ನಡೆಯಲಿದೆ. ವಿಟ್ಲ ಯುವಕ ಮಂಡಲ ನೇತೃತ್ವದಲ್ಲಿ 3 ದಿನ ನಡೆಯುವ ಮೇಳದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ 800-900 ಕಲಾವಿದರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಕ್ರೀಡಾ ಇಲಾಖೆ ಉಪನಿರ್ದೇಶಕ ಪಾರ್ಶ್ವನಾಥ್ ಸಚಿವರಿಗೆ ತಿಳಿಸಿದರು.
35 ಲಕ್ಷ ವೆಚ್ಚದಲ್ಲಿ ಆಯೋಜಿಸಿರುವ ಮೇಳದಲ್ಲಿ ಸುಮಾರು 25 ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ. ಸ್ಪರ್ಧೆಯಲ್ಲಿ 18 ರಿಂದ 35 ವರ್ಷ ವಯೋವುತಿಯವರು ಪಾಲ್ಗೊಳ್ಳಬಹುದು. 3 ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಇದೇ ಸಂದರ್ಭ ಯುವಜನ ಮೇಳದ ಲಾಂಛನ ಬಿಡುಗಡೆಗೊಳಿಸಲಾಯಿತು. ಶೀಘ್ರದಲ್ಲಿ ದಿನ ನಿಗದಿಗೊಳಿಸಲಾಗುವುದು ಎಂದು ಸಚಿವರಿಗೆ ತಿಳಿಸಿದರು.
ಇದೇ ಸಂದರ್ಭ ಪಿಲಿಕುಳವನ್ನು ಜಾಗತಿಕವಾಗಿ ಮುಂದಿಡುವ ಉದ್ದೇಶದಿಂದ ಸ್ಟೀವನ್ ಡೇವಿಡ್ರವರು ಬರೆದ 'ಎನ್ವಿಶನಿಂಗ್ ಎ ಗ್ರೀನ್ ವರ್ಲ್ಡ್' ಪುಸ್ತಕವನ್ನು ಉಸ್ತುವಾರಿ ಸಚಿವ ರಮಾನಾಥ ರೈ ಅವರು ಬಿಡುಗಡೆಗೊಳಿಸಿದರು.
ಇದರಲ್ಲಿ ಪಿಲಿಕುಳ ಯೋಜನೆ ವಿವರ ಸೇರಿದಂತೆ ಸ್ಥಾಪನೆಯ ಹಿಂದಿನ ಕನಸು, ತಾಣಗಳ ದೃಶ್ಯ ವೈಭವ, ವಿವರಣೆ ಒಳಗೊಂಡಿದೆ.
ರಂಗ ಮಂದಿರ ಕಾಮಗಾರಿ ಪ್ರಾರಂಭಿಸಿ: ಈಗಾಗಲೇ ತೀರ್ಮಾನಿಸಿರುವ ರಂಗಮಂದಿರ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಿ. ಒಂದು ವಾರದಲ್ಲಿ ಕಾಮಗಾರಿ ಪ್ರಾರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಬೊಂದೆಲ್ನಲ್ಲಿ ಈಗಾಗಲೇ ಜಾಗ ಗುರುತಿಸಿದ್ದು, ಇನ್ನು ಜಾಗದ ಬಗ್ಗೆ ಚರ್ಚಿಸದೆ, ಕಾಮಗಾರಿ ಕೈಗೆತ್ತಿಕೊಳ್ಳುವಲ್ಲಿ ಕಾರ್ಯಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement