ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಡಕೆ ಮರದಿಂದ ಬಿದ್ದು ಯುವಕ ಸಾವು

Lingaraj Badiger
Updated On : 7 Jan 2014, 1:06 am

ಉಪ್ಪಿನಂಗಡಿ: ಅಡಕೆ ಮರದಿಂದ ಕಾಳುಮೆಣಸು ಕೀಳುತ್ತಿದ್ದ ವೇಳೆ ಯುವಕನೋರ್ವ ಕಾಲು ಜಾರಿ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸೋಮವಾರ ಬೆಳಗ್ಗೆ ಕಡಬ ಠಾಣೆ ವ್ಯಾಪ್ತಿಯ ಆಲಂಕಾರು ಎಂಬಲ್ಲಿ ನಡೆದಿದೆ.
 ಆಲಂಕಾರು ಗ್ರಾಮದ ಕೇಪುಳು ದಿ. ಸೇಸಪ್ಪ ಪೂಜಾರಿ ಎಂಬವರ ಪುತ್ರ ದಾಮೋದರ ಪೂಜಾರಿ (30) ಮೃತರು. ಕಾಲು ಜಾರಿ ಮರದಿಂದ ಬಿದ್ದಾಗ ದಾಮೋದರ ಕುತ್ತಿಗೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತಾಯಿ ತಂದ ಚಹಾ ಕುಡಿಯುವ ಮೊದಲೇ ನಿರ್ಗಮನ: ಯುವ ಕೃಷಿಕನಾಗಿ ಮನೆ ಮಂದಿಯ ಅಚ್ಚುಮೆಚ್ಚಿನ ಮಗನಾಗಿದ್ದ ದಾಮೋದರ ತೋಟದಲ್ಲಿ ಕರ್ತವ್ಯದಲ್ಲಿದ್ದಾಗ ಆತನ ತಾಯಿಯೂ ಆತನೊಂದಿಗೆ ಸಹಕರಿಸುತ್ತಿದ್ದರು. ಮಗನಿಗೆ ಮನೆಯಿಂದ ಚಹಾ, ತಿಂಡಿ ತರುತ್ತೇನೆಂದು ತೋಟದಿಂದ ಮನೆಯತ್ತ ತಾಯಿ ಲೀಲಾವತಿ ಹೋಗುತ್ತಿದ್ದಂತೆ ಇತ್ತ ಮಗ ಮರದಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾನೆ. ಚಹಾ, ತಿಂಡಿಯೊಂದಿಗೆ ತೋಟಕ್ಕೆ ಬಂದ ತಾಯಿಗೆ ಈ ದೃಶ್ಯ ಕಂಡು ಭೂಮಿಯೇ ಬಿರಿದಂತಾಯಿತು. ತಾಯಿ ತಂದ ಚಹಾ ಸೇವಿಸುವ ಮುನ್ನವೇ ಮಗ ಮರಳಿಬಾರದ ಲೋಕಕ್ಕೆ ಹೋಗಿಯಾಗಿತ್ತು.
ತಂದೆಯೂ ಇದೇ ರೀತಿ ಅಂತ್ಯ ಕಂಡಿದ್ದರು: ಮೃತ ದಾಮೋದರ ಅವರ ತಂದೆಯೂ ಕಳೆದ 2 ವರ್ಷಗಳ ಹಿಂದೆ ಇದೇ ತೋಟದಲ್ಲಿ ತಾಳೆ ಮರದಿಂದ ಮೂರ್ತೆಗಾರಿಕೆ ಮಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದರು. ಇದೀಗ ಇದೇ ತೋಟದಲ್ಲಿ ಮಗನೂ ಮರದಿಂದ ಬಿದ್ದು ಸಾವನ್ನಪ್ಪುವ ದುಃಸ್ಥಿತಿ ಎದುರಾಗಿರುವುದು ಮನೆ ಮಂದಿಗೆ ಬರಸಿಡಿಲು ಎರಗಿದಂತಾಗಿದೆ.
 ಮೃತರು ಅವಿವಾಹಿತರಾಗಿದ್ದು, ತಾಯಿ, ನಾಲ್ವರು ಸಹೋದರರು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಊರ ಗಣ್ಯರನೇಕರು ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement