ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಧಿಕಾರಿಗಳೇ, ವಸತಿ ನಿಲಯಮಕ್ಕಳೊಂದಿಗೆ ಊಟ ಮಾಡಿ

Lingaraj Badiger
Updated On : 7 Jan 2014, 1:07 am

ಮಂಗಳೂರು: ಸಮಾಜ ಕಲ್ಯಾಣ ಇಲಾಖೆ ಜಿಲ್ಲಾಮಟ್ಟ ಅಧಿಕಾರಿಗಳು ವಸತಿ ನಿಲಯಕ್ಕೆ ಪ್ರತಿದಿನ ಭೇಟಿ ಮಾಡಿ, ಮಧ್ಯಾಹ್ನ ಊಟವನ್ನು ಮಾಡುವ ಮೂಲಕ ಆಹಾರದ ಬಗ್ಗೆ ನಿಗಾ ವಹಿಸಿ ಎಂದು ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭರತ್ಲಾಲ್ ಮೀನಾ ಆದೇಶಿಸಿದರು.
 ಸೋಮವಾರ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಸತಿ ನಿಲಯಗಳಿಗೆ ಭೇಟಿ ಮಾತ್ರ ನೀಡದೆ, ಅಲ್ಲಿನ ಆಹಾರ ವ್ಯವಸ್ಥೆಯ ಕುರಿತು ಗಮನಹರಿಸಿ. ಮಕ್ಕಳೊಂದಿಗೆ ಕುಳಿತು ಊಟ ಮಾಡಿದಾಗ ಮಕ್ಕಳಿಗೂ ಅಧಿಕಾರಿಗಳ ಬಗ್ಗೆ ಗೌರವವಿರುತ್ತದೆ.
 ಅಲ್ಲದೆ ಅವ್ಯವಸ್ಥೆಯನ್ನು ನಿಯಂತ್ರಿಸಲು ಸಾಧ್ಯವಿದೆ ಎಂದರು.  ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 22 ವಸತಿನಿಲಯಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಂಗಳೂರು ನಗರದಲ್ಲಿ ಜಾಗದ ಕೊರತೆಯಿಂದಾಗಿ ಉಳಿದ 17 ನಿವೇಶನಗಳು ಬಾಕಿಯುಳಿದಿದ್ದು, ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ಹೇಳಿದರು.
ಅಡಕೆ ಪರಿಹಾರಕ್ಕೆ ಹೆಚ್ಚುವರಿ ರು. 10 ಕೋಟಿ ಅಗತ್ಯ: ದ.ಕ. ಜಿಲ್ಲೆಗೆ ಅಡಕೆ ಕೊಳೆರೋಗದ ಹಾನಿಗೆ ಸರ್ಕಾರ ರು. 20 ಕೋಟಿ ಪರಿಹಾರ ಬಿಡುಗಡೆಗೊಳಿಸಿತ್ತು. ಅರ್ಜಿಗಳು ಹೆಚ್ಚು ಬಂದಿರುವ ಕಾರಣ ರು. 10.41 ಕೋಟಿ ಪರಿಹಾರ ಮೊತ್ತದ ಅಗತ್ಯವಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಉಸ್ತುವಾರಿ ಕಾರ್ಯದರ್ಶಿಗಳ ಗಮನಕ್ಕೆ ತಂದರು. ಪಂಪುವೆಲ್ ಬಳಿಯ 7 ಎಕರೆ ಜಾಗದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿರುವ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಇನ್ನೂ ಕಾರ್ಯಗತವಾಗಿಲ್ಲ. ಹಣಕಾಸು ಯೋಜನೆಯಲ್ಲಿ ಇದಕ್ಕಾಗಿ ರು. 100 ಕೋಟಿ ಹಣ ಮೀಸಲಿಡಲಾಗಿದೆ. ಸಚಿವರು ಇದಕ್ಕೆ 20 ಎಕರೆ ಜಾಗ ನಿರೀಕ್ಷಿಸುತ್ತಿದ್ದು, ಪರಿಶೀಲನೆ ಹಂತದಲ್ಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಅಧೀಕ್ಷಕ ಎಂಜಿನಿಯರ್ ಹೇಳಿದರು.
 ಮುಖ್ಯಮಂತ್ರಿಗಳ ವಿಶೇಷ ಯೋಜನೆಯಡಿ ಪ್ರಥಮ ರು. 100 ಕೋಟಿಯಲ್ಲಿ ಪ್ರಮುಖ ರಸ್ತೆಗಳ ಕಾಂಕ್ರೀಟಿಕರಣಕ್ಕಾಗಿ 95.03 ಕೋಟಿ ಖರ್ಚಾಗಿದ್ದು, ದ್ವಿತೀಯ ಹಂತದ ರು. 100 ಕೋಟಿಯಲ್ಲಿ ರು. 21.58 ಕೋಟಿ ಬಿಡುಗಡೆಯಾಗಿ ಖರ್ಚಾಗಿದೆ. ಉಳಿದ ಕಾಮಗಾರಿಗಳು ಟೆಂಡರ್ ಹಂತದಲ್ಲಿದೆ ಎಂದರು.
 ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯದರ್ಶಿಯವರು, ಯಾವುದೇ ಕಾರಣಕ್ಕೂ ಅಭಿವೃದ್ಧಿ ಅನುದಾನವನ್ನು ಬ್ಯಾಂಕಿನಲ್ಲಿರಿಸಬೇಡಿ. 1 ವರ್ಷದ ಕಾಮಗಾರಿ ಕುರಿತಂತೆ 6 ತಿಂಗಳ ಮೊದಲೇ ಯೋಜನೆ ರೂಪಿಸಿ ಕಾಮಗಾರಿ ನಡೆಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.  ಪ್ರಮುಖ ರಸ್ತೆಗಳ ಕಾಂಕ್ರೀಕರಣ ಸಂದರ್ಭ ಒಳ ರಸ್ತೆಗಳ ಕಾಮಗಾರಿಯನ್ನು ಮಾಡುವ ಮೂಲಕ ಪ್ರಮುಖ ರಸ್ತೆಗೆ ಸಂಪರ್ಕ ಹೊಂದುವಂತಾಗಬೇಕು. ಪ್ರಮುಖವಾಗಿ ಮಹಾಕಾಳಿಪಡ್ಪು, ಪಾಂಡೇಶ್ವರ ರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ಸೂಚಿಸಿದರು.
 ಪುತ್ತೂರು ಮತ್ತು ಬೆಳ್ತಂಗಡಿ ಪ್ರದೇಶಗಳಲ್ಲಿ ಹಾಗೂ ವಲಸೆ ಕಾರ್ಮಿಕರ ಮಕ್ಕಳಲ್ಲಿ ಕಡಿಮೆ ತೂಕದ ಸಮಸ್ಯೆ ಕಾಣುತ್ತಿದೆ ಎಂದು ಅಧಿಕಾರಿ ತಿಳಿಸಿದ ಹಿನ್ನಲೆಯಲ್ಲಿ ಈ ಬಗ್ಗೆ ಹೆಚ್ಚಿನ ಗಮನಕೊಡುವಂತೆ ಉಸ್ತುವಾರಿ ಕಾರ್ಯದರ್ಶಿಗಳು ಹೇಳಿದರು.
ಅಲಂಗಾರುವಿನಲ್ಲಿ ಶಾಶ್ವತ ಎಂಡೋ ನಿವೇಶನ: 2012ರಲ್ಲಿ ಎಂಡೋಸಲ್ಪಾನ್ ಸಂತ್ರಸ್ತರ ಸಮೀಕ್ಷೆ ನಡೆಸಿದ್ದು, ಒಟ್ಟು 2479 ಸಂತ್ರಸ್ತರನ್ನು ಗುರುತಿಸಲಾಗಿದೆ. ಇದರಲ್ಲಿ 1562 ಮಂದಿ ವಿಕಲಚೇತನರಿಗೆ ವಿಕಲಚೇತನ ಪ್ರಮಾಣ ಪತ್ರ ವಿತರಿಸಲಾಗಿದೆ. 130 ಮಂದಿ ಸಂಪೂರ್ಣ ಹಾಸಿಗೆ ಹಿಡಿದವರಾಗಿದ್ದು, ಇವರಿಗಾಗಿ 2 ವೈದ್ಯಕೀಯ ಘಟಕ ಕಾರ್ಯಚರಿಸುತ್ತಿದೆ. ಶೇ. 75 ಅಧಿಕ ಅಂಗ ವೈಕಲ್ಯ ಹೊಂದಿರುವವರು 376 ಹಾಗೂ ಶೇ. 40 ಅಧಿಕ ಅಂಗ ವೈಕಲ್ಯ ಹೊಂದಿರುವವರು  1056 ಮಂದಿ ಇದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದರು.
 ಅಲಂಗಾರುವಿನಲ್ಲಿ ಎಂಡೋಪೀಡಿತರಿಗಾಗಿ ಶಾಶ್ವತ ಕೇಂದ್ರವನ್ನು ಸ್ಥಾಪಿಸಲು 5 ಎಕರೆ ನಿವೇಶನ ಗುರುತಿಸಲಾಗಿದೆ. ಪ್ರಸ್ತುತ ಸಂತ್ರಸ್ತರಿಗೆ ಕೊಕ್ಕಡ ಮತ್ತು ಕೈಲ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಹಯೋಗದಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ. ಸಂತ್ರಸ್ತರಿಗೆ ಮಾಶಾಸನವನ್ನು ರು. 3,500ಕ್ಕೆ ಏರಿಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಇಬ್ರಾಹಿಂ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ತುಳಸಿ ಮದ್ದಿನೇನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement