ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ತಮಿಳು ಪುನರ್ವಸತಿದಾರರಿಗೆ ಜಾತಿ ಪ್ರಮಾಣ ಪತ್ರ

Lingaraj Badiger
Updated On : 7 Jan 2014, 1:06 am

ಸುಳ್ಯ:   ಸುಳ್ಯ ಮತ್ತು ಪುತ್ತೂರು ತಾಲೂಕುಗಳಲ್ಲಿರುವ ತಮಿಳು ಪುನರ್ವಸತಿದಾರರಿಗೆ ಜಾತಿ ಪ್ರಮಾಣ ಪತ್ರ ನೀಡುವ ಸಂಬಂಧ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಗೃಹಕಚೇರಿಯಲ್ಲಿ ಸಭೆ ನಡೆದು 15 ದಿನಗಳಲ್ಲಿ ಈ ಸಂಬಂಧ ವರದಿ ಸಲ್ಲಿಸುವಂತೆ ದ.ಕ. ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದು, ಜಿಲ್ಲಾಧಿಕಾರಿ ಪ್ರಕ್ರಿಯೆ ಆರಂಭಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ದ.ಕ. ಜಿಲ್ಲಾ ಉಸ್ತುವಾರಿಯಾಗಿರುವ ಅರಣ್ಯ ಸಚಿವ ಬಿ. ರಮಾನಾಥ ರೈ, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ರಾಜ್ಯದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಕಂದಾಯ ಇಲಾಖೆಯ ಕಾರ್ಯದರ್ಶಿಗಳು, ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಕೇಂದ್ರ ನಾರು ಮಂಡಳಿ ಸದಸ್ಯ ಟಿ.ಎಂ.ಶಹೀದ್ ಭಾಗವಹಿಸಿದ್ದರು.
ಸುಳ್ಯ, ಪುತ್ತೂರಿನಿಂದ ಹೋಗಿದ್ದ ಡಾ. ರಘು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ತಮಿಳು ನಾಯಕರಾದ ಶಿವಕುಮಾರ್ ಕೌಡಿಚ್ಚಾರು ಮತ್ತು ಚಂದ್ರಲಿಂಗಂ, ಮುರುಗಯ್ಯ ಬಳ್ಪ, ಎಸ್. ಸಂಶು ದ್ದೀನ್, ಇಬ್ರಾಹಿಂ ಕೋಡಿಡಾಲ್ ಇದ್ದರು. ಸಭೆಯಲ್ಲಿ ಸಿಎಂ, ತಮಿಳು ಪುನರ್ವಸತಿದಾರರು ಯಾವ ಜಾತಿಗೆ ಸೇರಿದವರೋ ಆ ಜಾತಿಯ ಸರ್ಟಿಫಿಕೇಟ್ಗಳನ್ನು ಹಿಂದೆ 2002ರ ವರೆಗೆ ಕೊಡುತ್ತಿದ್ದ ರೀತಿಯಲ್ಲೆ ಕೊಡುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದರಲ್ಲದೆ 15 ದಿನಗಳಲ್ಲಿ  ಪುನರ್ವಸತಿದಾರರ ಮೂಲಜಾತಿ ಪತ್ತೆ ಮಾಡಿ ವರದಿ ಸಲ್ಲಿಸಲು ಡಿಸಿ ನೇತೃತ್ವದಲ್ಲಿ ಸಮಿತಿ ರಚಿಸಿದರು.
ಬಳಿಕ ಮಾತನಾಡಿದ ರಮಾನಾಥ ರೈ, ತಮಿಳುನಾಡಿನಿಂದ ಶ್ರೀಲಂಕಾಕ್ಕೆ ಕಾರ್ಮಿಕರಾಗಿ ತೆರಳಿದ್ದ ಇವರೆಲ್ಲರೂ ಮೂಲತಃ ಭಾರತೀಯರೇ ಆಗಿದ್ದಾರೆ. ಇವರನ್ನು ಭಾರತ-ಶ್ರೀಲಂಕಾ ಒಪ್ಪಂದದ  ಮೂಲಕ ಭಾರತಕ್ಕೆ ವಾಪಸ್ ಕರೆಸಿಕೊಂಡು ಅವರಿಗೆ ಸುಳ್ಯ-ಪುತ್ತೂರಿನಲ್ಲಿ ಪುನರ್ವಸತಿ ಕಲ್ಪಿಸ ಲಾಯಿತು. 2002ರವರೆಗೆ ಅವರಿಗೆ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿತ್ತು. ಆದರೆ ನಂತರ ಅವರನ್ನು ವಲಸಿಗರು ಎಂದು ಅಧಿಕಾರಿಗಳು ಪರಿಗಣಿಸಿದ್ದರಿಂದ ಒಂದು ದಶಕದಿಂದ ಈ ಕುಟುಂಬಗಳಿಗೆ ಜಾತಿ ಪ್ರಮಾಣ ಪತ್ರ ನೀಡುತ್ತಿರ ಲಿಲ್ಲ. ಇದರಿಂದಾಗಿ ಅವರು ಅನೇಕ ಅವಕಾಶ ಗಳಿಂದ ವಂಚಿತರಾಗಿದ್ದರು. ಒಟ್ಟಾರೆ ಸುಮಾರು 20 ಸಾವಿರ ಪುನರ್ವಸತಿದಾರರ ಪೈಕಿ ಶೇ.30 ರಷ್ಟು ಮಂದಿ ಪಲ್ಲನ್, ಪರೆಯನ್, ಚೆಕ್ಲಿಯನ್ ಎಂಬ ಪರಿಶಿಷ್ಟ ಜಾತಿಗಳಿಗೆ ಸೇರಿದವರು. ಇತರರು ಇತರ ಹಿಂದುಳಿದ ವರ್ಗಗಳಿಗೆ, ಕ್ರೈಸ್ತ ಧರ್ಮಕ್ಕೆ ಸೇರಿದವರು. ಇದೀಗ ಕರ್ನಾಟಕ ಸರ್ಕಾರ ಇವರ ಸಮಸ್ಯೆಗೆ ಸ್ಪಂದಿಸಿದ್ದು, ಇವರಿಗೆ ಸ್ಥಗಿತಗೊಂಡಿದ್ದ ಜಾತಿ ಪ್ರಮಾಣಪತ್ರ ಶೀಘ್ರದಲ್ಲೆ ವಿತರಣೆ ಮಾಡಲು ಆರಂಭಿಸುತ್ತದೆ. ಇದಕ್ಕಾಗಿ ದ.ಕ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. 15 ದಿನಗಳಲ್ಲಿ ಅವರ ಮೂಲ ಜಾತಿ ಪತ್ತೆ ಮಾಡಿ ವರದಿ ನೀಡುವಂತೆ ಸೂಚಿಸಲಾಗಿದೆ.
ಆ ವರದಿ ಆಧರಿಸಿ ಎಲ್ಲ ಕುಟುಂಬಗಳಿಗೆ ಹಿಂದಿನಂತೆ ಜಾತಿ ಪ್ರಮಾಣ ಪತ್ರ ವಿತರಿಸಲಾಗುವುದು  ಎಂದರು. ಜಾತಿ ಪ್ರಮಾಣ ಪತ್ರ ನೀಡಲು ನಿರ್ಧರಿಸಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಸ್ವಾಗತಿಸಿದೆ. ಈ ಸಾಧನೆ ಮಾಡಿದೆ. ಸಚಿವ ರೈಯನ್ನು ಕರೆಸಿ, ಅವರಿಗೆ ತಮಿಳರಿಂದ ಅಭಿನಂದನೆ ನಡೆಯುವ ಸಮಾರಂಭದಲ್ಲೇ ಜಾತಿ ಪ್ರಮಾಣಪತ್ರ ನೀಡುತ್ತೇವೆ ಎಂದು ವೆಂಕಪ್ಪ ಗೌಡ ಹೇಳಿದರು. ತಮಿಳು ಮುಖಂಡ ಚಂದ್ರಲಿಂಗಂ, ಸುಧೀರ್ ರೈ ಮೇನಾಲ, ಪಿ.ಎಸ್.ಗಂಗಾಧರ್, ಗೋಕುಲ್ದಾಸ್, ಸತ್ಯಕುಮಾರ್ ಆಡಿಂಜ, ಲಕ್ಷ್ಮಣ ಶೆಣೈ, ಶರೀಫ್ ಕಂಠಿ, ತೀರ್ಥರಾಮ ಜಾಲ್ಸೂರು, ಮುತ್ತುಸ್ವಾಮಿ, ನಾರಾಯಣ ಸ್ವಾಮಿ, ಬಾಲಚಂದ್ರ, ಲೋಕೇಶ್, ಸತ್ಯನಾರಾಯಣ, ಸೂರ್ಯ ಕುಮಾರ್, ಸೆಲ್ವ ಕುಮಾರ್, ಮೋಹನ್, ಸುಂದರಂ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement