ಗೋಶಾಲೆ ದಶಮಾನೋತ್ಸವ
ನೀಲಾವರ: ಪೇಜಾವರ ಮಠದ ಗೋವರ್ಧನಗಿರಿ ಟ್ರಸ್ಟ್ ವತಿಯಿಂದ ನಡೆಸಲ್ಪಡುತ್ತಿರುವ ಇಲ್ಲಿನ ನೀಲಾವರ ಗೋಶಾಲೆಯ ದಶಮಾನೋತ್ಸವ, ನೂತನ ಸರೋವರ ಉದ್ಘಾಟನೆ ಹಾಗೂ ಶ್ರೀಕೃಷ್ಣ ವಿಗ್ರಹದ ಪ್ರತಿಷ್ಠಾಪನೆ ಕಾರ್ಯಕ್ರಮ ಜ.11ರಿಂದ 17ರವರೆಗೆ ನಡೆಯಲಿದೆ.
ಮಂಗಳವಾರ ಗೋಶಾಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥರು ಹಾಗೂ ಕಿರಿಯ ಯತಿ ಗೋಶಾಲೆಯನ್ನು ನಡೆಸುತ್ತಿರುವ ಶ್ರೀ ವಿಶ್ವಪ್ರಸನ್ನ ತೀರ್ಥ ಈ ಬಗ್ಗೆ ಮಾಹಿತಿ ನೀಡಿದರು.
11ರಂದು ದಶಮಾನೋತ್ಸವದ ಉದ್ಘಾಟನೆ, ತಿರುಮಲ- ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಏಕಾಹ ಭಜನೆ ಕಾರ್ಯಕ್ರಮ, 12ರಂದು ಏಕಾಹ ಭಜನಾ ಮಂಗಲ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ.
13ರಂದು ಪ್ರಾಯಶ್ಚಿತ ಹೋಮ, 14ರಂದು ಹೊರೆಕಾಣಿಕೆ (ಅನ್ನಸಂತರ್ಪಣೆ ಮತ್ತು ಗೋವುಗಳ ಮೇವು), ದೇಶದ ವಿವಿಧ ತೀರ್ಥ ಕ್ಷೇತ್ರಗಳಿಂದ ಬಂದ ತೀರ್ಥಗಳ ಮೆರವಣಿಗೆ ಕುಂಜಾಲು ರಾಮಭಜನಾ ಮಂದಿರದಿಂದ, ಸರೋವರದ ಉದ್ಘಾಟನೆ, ಸಭಾ ಕಾರ್ಯಕ್ರಮ ನಡೆಯುವುದು.
15ರಂದು ವಿವಿಧ ಹೋಮಗಳು, ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 16ರಂದು ಶ್ರೀ ಕಾಳಿಯ ಮರ್ಧನ ಕೃಷ್ಣ ವಿಗ್ರಹ ಪ್ರತಿಷ್ಠೆ, ಸುಮೇಧಾ ಬುದ್ಧಿಮಾಂದ್ಯರ ಶಾಲೆ ಉದ್ಘಾಟನೆ ಮತ್ತು 17ರಂದು ನಗರ ಸಂಕೀರ್ತನೆ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀಗಳು ಹೇಳಿದರು.