ದಶಮಾನೋತ್ಸವ, ಅಶ್ವತ್ಥೋಪನಯನ ವರ್ಧಂತಿ
ಕಾರ್ಕಳ: ಹಳ್ಳಿ ಪ್ರದೇಶಗಳಲ್ಲಿ ಇಂದಿಗೂ ಉಳಿದಿರುವ ಭಜನಾ ಸಂಸ್ಕೃತಿ ಹಾಗೂ ಹಿರಿಯರಿಂದ ಪರಂಪರಾಗತವಾಗಿ ಬಂದ ಧಾರ್ಮಿಕ ಅನುಷ್ಠಾನಗಳಿಂದಾಗಿ ನಮ್ಮ ದೇಶದಲ್ಲಿ ಸಂಸ್ಕೃತಿ ಇನ್ನೂ ಜೀವಂತವಾಗಿದೆ. ನಿತ್ಯ ಭಜನೆಯಿಂದ ಮನ- ಮನೆಯ ವಾತಾವರಣ ಶುದ್ಧವಾಗುತ್ತದೆ, ಭಯಮುಕ್ತ ವಾತಾವರಣ ನಿರ್ಮಾಣವಾಗುತ್ತದೆ ಎಂದು ಖ್ಯಾತ ಹರಿದಾಸ ಬಿ.ಸಿ. ರಾವ್ ಶಿವಪುರ ಹೇಳಿದ್ದಾರೆ. ಅವರು ಇತ್ತೀಚೆಗೆ ಹಿರ್ಗಾನದ ಪೆಲತ್ತಿಜೆ ಶ್ರೀ ಗುರುರಾಘವೇಂದ್ರ ಭಜನಾ ಮಂದಿರದ ದಶಮಾನೋತ್ಸವ ಭಜನಾ ಮಂಗಲೋತ್ಸವ ಮತ್ತು ಅಶ್ವತ್ಥೋಪನಯನ ವರ್ಧಂತಿ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು. ಬಿ. ಪುಂಡಲೀಕ ಮರಾಠೆ, ಕೆ.ಎಸ್. ಹಿರ್ಗಾನ ಶುಭಾಶಂಸನೆಗೈದರು. ಹಿರ್ಗಾನ ಗ್ರಾಪಂ ಅಧ್ಯಕ್ಷೆ ರೇವತಿ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ಮೈನಾಕರ ಶೆಟ್ಟಿ, ಅರ್ಚಕ ಶ್ರೀಧರ ಕುಲಾಲ್, ಸುಕೇಶ ಕುಲಾಲ್, ಪ್ರವೀಣ್ ಪೂಜಾರಿ, ಬಾಲಕೃಷ್ಣ ಉಪಸ್ಥಿತರಿದ್ದರು. ಆಶಾಲತಾ ಸ್ವಾಗತಿಸಿದರು. ರಾಘವೇಂದ್ರ ಕೆ. ಅಮೀನ್, ಸುರೇಶ್ ಕುಲಾಲ್ ನಿರೂಪಿಸಿದರು. ಅಕ್ಷಯ ಕುಲಾಲ್ ವಂದಿಸಿದರು.