ಹಿಂದೂ ವಿರೋಧಿ ನೀತಿ ಜಾರಿಯಾದರೆ ಪ್ರತಿಭಟನೆ
ಮಂಗಳೂರು: ಕರ್ನಾಟಕ ಸರ್ಕಾರ ಮಠ, ಮಂದಿರಗಳ ಸ್ವಾಧೀನ ಪಡಿಸುವ ಬಗ್ಗೆ ಸೇರಿದಂತೆ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸುತ್ತಿರುವುದು ಹಿಂದೂ ವಿರೋಧಿ ನೀತಿಯಾಗಿದ್ದು, ಇದರ ವಿರುದ್ಧ ವಿಶ್ವ ಹಿಂದೂ ಪರಿಷತ್ ದೇಶಾದ್ಯಂತ ತೀವ್ರತರ ಪ್ರತಿಭಟನೆ ನಡೆಸಲಿದೆ ಎಂದು ವಿಶ್ವ ಹಿಂದು ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ಭಾಯಿ ತೊಗಾಡಿಯಾ ಆಗ್ರಹಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಮತಬ್ಯಾಂಕಿಗಾಗಿ ಅಲ್ಪಸಂಖ್ಯಾತರನ್ನು ಓಲೈಸುತ್ತಿದ್ದು, ಈ ಮೂಲಕ ಹಿಂದೂ ಕಾರ್ಯಕರ್ತರನ್ನು ವಿವಿಧ ಕಾನೂನು ಕಾಯ್ದೆಯಡಿಯಲ್ಲಿ ಬಂಧಿಸುವಲ್ಲಿ ಕಾರ್ಯಾಚರಿಸುತ್ತಿದೆ. ಹಿಂದೂಗಳನ್ನು ಹಣಿಯಲು ಐಪಿಸಿ 153 ಸೆಕ್ಷನ್ನ್ನು ಬಳಸಿ ಹಿಂದೂ ಕಾರ್ಯಕರ್ತರನ್ನು ಬಂಧಿಸುವ ಮೂಲಕ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದರು.
ರಾಜ್ಯ ಸರ್ಕಾರ ನಡೆಸುತ್ತಿರುವ ನಾಟಕೀಯ ವರ್ತನೆಯ ಬಗ್ಗೆ ಕೇಂದ್ರ ಸರ್ಕಾರ ನಿಗಾ ವಹಿಸಿ ಸರಿಪಡಿಸಲಿ. ವಿನಾ ಕಾರಣ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿರುವುದನ್ನು ನಿಲ್ಲಿಸದಿದ್ದಲ್ಲಿ, ಮುಂದಿನ ಪರಿಣಾಮ ಸರ್ಕಾರ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
ಬೆನ್ನಿಹಿನ್ ಗುರಿ ಕೇವಲ ಮತಾಂತರ: ಅಂತಾರಾಷ್ಟ್ರೀಯ ಧರ್ಮಪ್ರಚಾರಕ ಬೆನ್ನಿಹಿನ್ ಬೆಂಗಳೂರಿಗೆ ಆಗಮಿಸುತ್ತಿರುವ ಉದ್ದೇಶ ರೋಗ ಗುಣಪಡಿಸುವುದಲ್ಲ, ಮತಾಂತರಗೊಳಿಸುವುದಾಗಿದೆ. ಸ್ವಇಚ್ಛೆಯಿಲ್ಲದೆ ಯಾರನ್ನೂ ಮತಾಂತರಗೊಳಿಸಬಾರದು ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹಿಂದೂಗಳನ್ನು ಗುರಿಯಾಗಿಸಿ ಕಾರ್ಯಕ್ರಮ ನಡೆಯುತ್ತಿದ್ದು, ಆಕ್ಷೇಪಿಸುವುದಾಗಿ ಹೇಳಿದರು.
ಪಕ್ಷಬೇಧ ಮರೆತು ಬೆಂಬಲ: ಹಿಂದೂಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಯಾರಾದರೂ ಸರಿಯೇ ಅವರನ್ನು ಪಕ್ಷಬೇಧ ಮರೆತು ಬೆಂಬಲಿಸುತ್ತೇವೆ. ಮುಖ್ಯವಾಗಿ ಹಿಂದೂಗಳ ಅಭಿವೃದ್ಧಿ ಇವರ ಮುಖ್ಯ ಉದ್ದೇಶವಾಗಿರಬೇಕು ಎಂದರು.
ಕಾಂಗ್ರೆಸ್ಗೆ ಮುಸ್ಲಿಂರ ಭಯ: ದೇರಳಕಟ್ಟೆ ಕೃತ್ಯ ಖಂಡನೀಯ. ಕರ್ನಾಟಕ ಸರ್ಕಾರಕ್ಕೆ ಮುಸ್ಲಿಂರ ಭಯವಿದ್ದಂತೆ ಕಾಣುತ್ತದೆ. ಅದಕ್ಕಾಗಿ ಘಟನೆಯ ಆರೋಪಿಗಳಿಗೆ ಶಿಕ್ಷೆ ನೀಡಲು ಹಿಂದೇಟು ಹಾಕುತ್ತಿದೆ. ಇಂಥ ಕೃತ್ಯ ಮಾಡಿದವರನ್ನು ಜಾತಿ ಬೇಧ ಮರೆತು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದರು.
50 ವರ್ಷದ ಪ್ರಯುಕ್ತ ಹಲವು ಯೋಜನೆ
ಆಗಸ್ಟ್ 16ಕ್ಕೆ ವಿಶ್ವ ಹಿಂದೂ ಪರಿಷತ್ 50 ವರ್ಷಕ್ಕೆ ಕಾಲಿಡುತ್ತಿದ್ದು, ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ಶಾಖೆಗಳನ್ನು ದೇಶಾದ್ಯಂತ 3 ಲಕ್ಷಕ್ಕೆ ವಿಸ್ತರಿಸಲಿದೆ. ಹಿಂದೂಗಳಿಗಾಗಿ 6 ಸಾವಿರಕ್ಕೂ ಮಿಕ್ಕಿದ ಶಿಕ್ಷಣ ಸಂಸ್ಥೆ, ಸ್ವಉದ್ಯೋಗ, ಭದ್ರತೆ ಒದಗಿಸುವ ಯೋಜನೆ ರೂಪಿಸಲಿದೆ.
ಈ ಎಲ್ಲ ಯೋಜನೆಗಳನ್ನು ಹಿಂದೂ ಸಮಾಜ ಒಪ್ಪಿಕೊಳ್ಳುವ ನಂಬಿಕೆ ಇದೆ ಎಂದು ಪ್ರವೀಣ್ಭಾಯಿ ತೊಗಾಡಿಯಾ ಹೇಳಿದರು.