ಅವಧಿ ಪೂರ್ಣ ಅರಣ್ಯ ಗೇಣಿ ಜಮೀನು ಇಲಾಖೆ ವಶಕ್ಕೆ
ಸುಬ್ರಹ್ಮಣ್ಯ: ಸುಮಾರು 50 ವರ್ಷಗಳ ಹಿಂದೆ ಅರಣ್ಯ ಗೇಣು ಕಾಯ್ದೆಯಂತೆ 50 ವರ್ಷಗಳ ಅವಧಿಗೆ ಮಾಜಿ ಶಾಸಕ ಬಾಳುಗೋಡಿನ ದಿ. ವೆಂಕಟ್ರಮಣ ಗೌಡ ಹಾಗೂ ಪತ್ನಿ ದಿ. ಹೊನ್ನಮ್ಮ ಎಂಬವರು ಪಡಕೊಂಡಿರುವ 8 ಎಕ್ರೆ ಕೃಷಿಭೂಮಿಯ ಜಾಗವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ವಶಪಡಿಸುವ ಕಾರ್ಯಾಚರಣೆ ನಡೆಸಿದರು.
ಸುಳ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ದಿನೇಶ್ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯದ ಪ್ರೊಬೆಷನರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಗಿಳಿಯಿತು.
ಹಲವು ಕೃಷಿಕರಿದ್ದಾರೆ: ದ.ಕ. ಜಿಲ್ಲಾದ್ಯಂತ ಸುಳ್ಯ, ಪುತ್ತೂರು ಇತ್ಯಾದಿ ತಾಲೂಕುಗಳಲ್ಲಿನ ಕೃಷಿಕರು, ಹೆಚ್ಚಾಗಿ ಕೆಲ ವರ್ಷಗಳಿಂದ ಜಮೀನನ್ನು ಗೇಣಿಗೆ ಪಡೆದುಕೊಂಡು ಅನುಭವಿಸುತ್ತಾ ಬಂದಿದ್ದಾರೆ. ಅದರಲ್ಲೂ ಸುಳ್ಯ, ಪುತ್ತೂರಿನ ಹಲವು ಮಂದಿ ಕೃಷಿಕರು ಗೇಣಿಗೆ ಪಡೆದ ಜಾಗದಲ್ಲಿ ಕಂಗು, ತೆಂಗು ಹಾಗೂ ಇನ್ನಿತರ ಉಪ ಬೆಳೆಗಳನ್ನು ಬೆಳೆಯುತ್ತ ಕೃಷಿಯನ್ನು ಅವಲಂಬಿಸಿಕೊಂಡು ಜೀವನ ನಡೆಸುತಿದ್ದಾರೆ. ಅದರಂತೆ ದಿ. ವೆಂಕಟ್ರಮಣ ಗೌಡ ಕೂಜುಗೋಡು ಕಟ್ಟೆಮನೆ 5 ಎಕ್ರೆ, ಅವರ ಪತ್ನಿ ದಿ. ಹೊನ್ನಮ್ಮ 3 ಎಕ್ರೆ ಜಾಗವನ್ನು ಇಲಾಖೆಯಿಂದ ಗೇಣಿಗೆ ಪಡೆದಿದ್ದರು. ಅದರಂತೆ 2011ಕ್ಕೆ ಅವಧಿ ಪೂರ್ಣಗೊಂಡಿತ್ತು. ಆ ಸಂದರ್ಭ ಇವರ ಮಗ ಕೆ.ವಿ. ಸುಧೀರ್ ಕೋರ್ಟ್ಗೆ ಹೋಗಿದ್ದರು. ಕೋರ್ಟ್ನಲ್ಲಿ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಜಾಗವನ್ನು ಇಲಾಖೆಗೆ ಬಿಟ್ಟು ಕೊಡುವುದಾಗಿ ಸ್ವ ಹೇಳಿಕೆ ರೂಪದಲ್ಲಿ ಅಫಿದವಿತ್ ಸಲ್ಲಿಸಿದ್ದರು. ಅದರಂತೆ ಎರಡು ವರ್ಷ ಅವಧಿ 2013 ಡಿ. 31ಕ್ಕೆ ಪೂರ್ಣಗೊಂಡ ಕಾರಣ ಆದೇಶದಂತೆ ಸ್ಥಳ ಮಹಜರು ನಡೆಸಿ 8 ಎಕ್ರೆ ಸ್ಥಳವನ್ನು ವಶಕ್ಕೆ ಮುಂದಾಗಿದ್ದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆ ಸಂದರ್ಭ ಈ ಜಾಗಕ್ಕೆ ಸಂಬಂಧಿಸಿದಂತೆ ಕೋರ್ಟ್ನಿಂದ ತಡೆಯಾಜ್ಞೆ ಕೋರಿ ದಾವೆ ಹೂಡಲಾಗಿದೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಲ್ಲಿ ಕೇಳಿಕೊಂಡರು. ಕೋರ್ಟ್ನಿಂದ ತಡೆಯಾಜ್ಞೆ ತಂದ ಬಗ್ಗೆ ಪ್ರತಿಗಳು ನಮ್ಮ ಕೈ ಸೇರಿಲ್ಲ. ಹಾಗಾಗಿ ಈ ಕಾರ್ಯಾಚರಣೆಗೆ ಮುಂದಾಗಿದ್ದೇವೆ ಎಂದು ಉತ್ತರಿಸಿ ಕಾರ್ಯಾಚರಣೆ ಮುಂದುವರಿಸಿದರು. ಕಾರ್ಯಾಚರಣೆ ವೇಳೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಿಬ್ಬಂದಿ ಭದ್ರತೆ ಒದಗಿಸಿದ್ದರು.
ಕಾನೂನು ಹೋರಾಟ: ತಾಲೂಕಿನಾದ್ಯಂತ ಅಧಿಕಸಂಖ್ಯೆಯ ಮಂದಿ ಕೃಷಿಕರು ಲೀಸ್ನಲ್ಲಿ ಇಲಾಖೆಯಿಂದ ಜಮೀನು ಪಡೆದು ಕೃಷಿ ಮಾಡುತ್ತಿದ್ದು, ಅವರ ಅವಧಿ ಪೂರ್ಣಗೊಂಡು ವರ್ಷಗಳಾದರೂ ಅದನ್ನು ವಶಕ್ಕೆ ಪಡೆಯದೇ ಇದೀಗ ಏಕಾಏಕಿ ನಮ್ಮ ಜಮೀನನ್ನು ಇಲಾಖೆ ವಶಕ್ಕೆ ಮುಂದಾಗಿರುವ ಕ್ರಮ ಅರಣ್ಯಾಧಿಕಾರಿಗಳ ದಬ್ಬಾಳಿಕೆಯ ಪರಮಾವಧಿ ಕ್ರಮವಾಗಿದೆ. ಈ ಬಗ್ಗೆ ಈಗಾಗಲೇ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದು, ಮುಂದೆ ಕಾನೂನು ಹೋರಾಟ ನಡೆಸುವುದಾಗಿ ಪತ್ರಿಕೆಗೆ ಕೆ.ವಿ. ಸುಧೀರ್ ತಿಳಿಸಿದ್ದಾರೆ.