ಮಲೇರಿಯಾಕ್ಕೆ ಬಲಿಯಾದ ಬಾಲಕಿ ಸಹೋದರನೂ ಆಸ್ಪತ್ರೆಯಲ್ಲಿ ಸಾವು
ಉಪ್ಪಿನಂಗಡಿ: ಮಲೇರಿಯಾ ಮತ್ತು ಜಾಂಡೀಸ್ ಕಾಯಿಲೆಗೆ ತುತ್ತಾಗಿ ಶಿಶಿಲದ ಬಾಲಕಿ ಹರಿಣಾಕ್ಷಿ (10) ಮೃತಪಟ್ಟ ಎರಡೇ ದಿನದಲ್ಲಿ ಆಕೆಯ ಸಹೋದರ 8ರ ಹರೆಯದ ಅಜಿತ್ ಕೂಡ ಗುರುವಾರ ಮೃತಪಟ್ಟಿದ್ದಾನೆ. ಇದರೊಂದಿಗೆ ಮಲೇರಿಯಾ ರೋಗಕ್ಕೆ ಒಂದೇ ಕುಟುಂಬದ ಇಬ್ಬರು ಬಲಿಯಾದಂತಾಗಿದೆ.
ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮದ ಕಾರೆಗುಡ್ಡೆ ಮನೆ ನಿವಾಸಿ ತನಿಯ ಮುಗೇರ ಹಾಗೂ ಬಾಬಿ ದಂಪತಿಯ ಇಬ್ಬರು ಮಕ್ಕಳು ಮಲೇರಿಯಾಕ್ಕೆ ಬಲಿಯಾಗಿದ್ದು, ಮಲೇರಿಯಾದಿಂದ ಬಳಲುತ್ತಿದ್ದ ಇವರಿಬ್ಬರನ್ನು ಮಂಗಳೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಿಬ್ಬರೂ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯೇ ಮೃತಪಟ್ಟಿರುವುದರಿಂದ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ವಿವರ: ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹರಿಣಾಕ್ಷಿಯನ್ನು 5ರಂದು ಮಂಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈಕೆ ಜ.7ರಂದು ಮೃತಪಟ್ಟಿದ್ದಳು. ಇದೇ ರೋಗ ಲಕ್ಷಣಕ್ಕೆ ತುತ್ತಾದ ಈಕೆಯ ತಮ್ಮ ಅಜಿತ್ನನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಕ್ಕ ಮೃತಪಟ್ಟ ಎರಡೇ ದಿನದಲ್ಲಿ ಈತನೂ ಅಸುನೀಗಿದ್ದಾನೆ.
ತನಿಖಾ ತಂಡ ರಚಿಸಿತ್ತು: ಹರಿಣಾಕ್ಷಿ ಸಾವನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಬುಧವಾರವಷ್ಟೇ ಉನ್ನತ ಮಟ್ಟದ ತನಿಖಾ ತಂಡವನ್ನು ತಾಲೂಕಿಗೆ ಕಳುಹಿಸಿತ್ತು. ತನಿಖಾ ತಂಡ ಬಂದ ಬೆನ್ನಲ್ಲೇ ಅಜಿತ್ ಕೂಡ ಚಿಕಿತ್ಸೆ ವೇಳೆಯಲ್ಲೇ ಮೃತಪಟ್ಟಿರುವುದರಿಂದ ಈ ಎರಡು ಪ್ರಕಣಗಳನ್ನು ಗಂಭೀರವಾಗಿ ಪರಿಗಣಿಸಿರುವ ತನಿಖಾ ತಂಡ ಈ ಬಗ್ಗೆ ಸಮಗ್ರ ತನಿಖೆ ಕೈಗೊಂಡಿದೆ.
ತನಿಯ ಮುಗೇರ- ಬಾಬಿ ದಂಪತಿಯ ಮೂವರು ಮಕ್ಕಳಲ್ಲಿ ಕೊನೆಯವರಾದ ಈ ಇಬ್ಬರ ಸಾವು ಕುಟುಂಬ ಶೋಕ ಸಾಗರದಲ್ಲಿದೆ.
ಮೂಲಗಳ ಪ್ರಕಾರ ಕಳೆದ ಎರಡು ಮೂರು ತಿಂಗಳ ಹಿಂದೆಯೇ ಜ್ವರಕ್ಕೆ ಸಿಲುಕಿದ್ದಾಳೆನ್ನಲಾದ ಹರಿಣಾಕ್ಷಿಯ ಬಗ್ಗೆ ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳು, ನೀಡಿದ ಔಷದೋಪಚಾರದ ಬಗ್ಗೆಯೂ ವಿಸ್ತೃತ ತನಿಖೆ ನಡೆಯಬೇಕಾಗಿದೆ.