ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುದ್ದಿ ಸಂಕ್ಷೇಪ

Mainashree
Updated On : 10 Jan 2014, 10:15 am

ಯುವಕ ನಾಪತ್ತೆ
ಕುಂದಾಪುರ: ಎಟಿಎಂನಿಂದ ಹಣ ತೆಗೆದುಕೊಂಡು ಬರುವುದಾಗಿ ಹೋದ ವ್ಯಕ್ತಿ ಇದುವರೆಗೂ ವಾಪಸ್ ಬಾರದೆ ಕಾಣೆಯಾದ ಪ್ರಕರಣ ಕುಂದಾಪುರ ಶಾಸ್ತ್ರೀ ವೃತ್ತದ ಬಳಿ ನಡೆದಿದೆ. ಕಾಣೆಯಾದವರು ಸತೀಶ್. ಇವರು ತಂದೆ ಶ್ರೀನಿವಾಸ ಅವರೊಂದಿಗೆ ಶಾಸ್ತ್ರೀ ವೃತ್ತದ ಬಳಿ ಇರುವ ಅಂಬೇಡ್ಕರ್ ಭವನದಲ್ಲಿ ಆಧಾರ್ ದಾಖಲೆ ಹೊಂದುವ ಬಗ್ಗೆ ಪತ್ರಗಳನ್ನು ಭರ್ತಿ ಮಾಡುತ್ತಿರುವ ಸಂದರ್ಭದಲ್ಲಿ ಸತೀಶ ತಾನು ಎಟಿಎಂನಿಂದ ಹಣ ಪಡೆದು ಬರುವುದಾಗಿ ಹೋದವನು ವಾಪಾಸ್ ಬಾರದೆ ಕಾಣೆಯಾಗಿದ್ದಾನೆ. ಈ ಬಗ್ಗೆ ಶ್ರೀನಿವಾಸ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನಿರುದ್ಯೋಗಿ  ಆತ್ಮಹತ್ಯೆ
ಬ್ರಹ್ಮಾವರ: ಇಲ್ಲಿನ ಉಪ್ಪೂರು ಗ್ರಾಮದ ಹೆರಾಯಿಬೆಟ್ಟು ಎಂಬಲ್ಲಿ ನಿರುದ್ಯೋಗಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಮೃತರು ಗಣೇಶ್ ರಾವ್(48). ಕೆಲಸವಿಲ್ಲದೆ ಮನೆಯಲ್ಲಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ಮನೆ ಸಮೀಪದ ಸಾರ್ವಜನಿಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಹೋದರ ಉದಯ ಕುಮಾರ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಡಕೆ ನಿಷೇಧಿಸಿದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ: ಬಂಗೇರ
ಉಪ್ಪಿನಂಗಡಿ: ಜಿಲ್ಲೆಯ ಜನತೆಗೆ ಜೀವನಾಧಾರವಾಗಿರುವ ಅಡಕೆ ನಿಷೇಧಿಸಿದರೆ ಶಾಸಕತ್ವಕ್ಕೆ ರಾಜಿನಾಮೆ ನೀಡಿ ಸರ್ಕಾರದಿಂದ ನಿರ್ಗಮಿಸುವ ಮೊದಲ ಶಾಸಕ ನಾನಾಗುವೆನಂದು ಬೆಳ್ತಂಗಡಿ ಶಾಸಕ ವಸಂತ ಬಂಗೇರ ಘೋಷಿಸಿದರು.
ಅವರು ತಣ್ಣೀರುಪಂತ ಗ್ರಾಮದ ಕಲ್ಲೇರಿಯ ಪಂಚಾಯಿತಿ ಸಭಾ ಭವನದಲ್ಲಿ ಅಡಕೆ ಕೊಳೆ ರೋಗ ಪೀಡಿತರಿಗೆ ಸರ್ಕಾರ ಒದಗಿಸಿದ ಪರಿಹಾರ ಧನ ವಿತರಿಸಿ ಮಾತನಾಡಿದರು.
ಅಡಕೆ ಬೆಳೆಗಾರರ ಹಿತ ಕಾಯುವ ಕಾರ್ಯವನ್ನು ಈ ಹಿಂದೆಯೂ ಮಾಡಿದ್ದೇನೆ. ಇನ್ನು ಮುಂದೆಯೂ ಮಾಡುವೆ ಎಂದರು.
ಅಡಕೆ ಬೆಳೆಗಾರರ ಹಿತ ಕಾಯಲು ವಾರಣಾಸಿ ಸುಬ್ರಾಯ ಭಟ್ಟರು ಕ್ಯಾಂಪ್ಕೋ ಸಂಸ್ಥೆ ಹುಟ್ಟು ಹಾಕಿ, ಅವಿಶ್ರಾಂತ ಶ್ರಮಿಸಿದರೆಂದು ವಿಶ್ಲೇಷಿಸಿದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಬಾವಂತಬೆಟ್ಟು ನಿರಂಜನ, ದಿನೇಶ್ ಗೌಡ, ಪಂಚಾಯಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಇದ್ದರು.
ಮಹಿಳೆ ನೇಣಿಗೆ ಶರಣು
ಕಾರ್ಕಳ: ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಳಾ ಗ್ರಾಮದಲ್ಲಿ  ಬುಧವಾರ ನಡೆದಿದೆ. ಮೃತರು ಲಲಿತಾ (55). ಇವರು ಮಾನಸಿಕ ಕಾಯಿಲೆಯಿಂದ ಬಳಲುತಿದ್ದು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇರಳೆ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಪತಿ ರಾಮಣ್ಣ ಮೊಯ್ಲಿ ನೀಡಿದ ದೂರಿನಂತೆ ಕಾಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಡಿಕ್ಕಿ: ಪಾದಚಾರಿ ಸಾವು
ಬೆಳ್ತಂಗಡಿ: ಗುರುವಾಯನಕೆರೆ ಸಮೀಪದ ಬೈಕೊಂದು ಡಿಕ್ಕಿಯಾಗಿ ಅಯ್ಯಪ್ಪ ಮಂದಿರದ ಬಳಿ ರಸ್ತೆ ದಾಟಲು ನಿಂತಿದ್ದ ಪಾದಚಾರಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. ಓಡಿಲ್ನಾಳ ಗ್ರಾಮದ ಮೈರಲಿಕೆ ಸಮೀಪದ ಬನತ್ತಡಿ ಬಾಬು ಶೆಟ್ಟಿ (70) ಮೃತರು. ಮೃತರ ಅಳಿಯ ಗುರುವಾರ ಶಬರಿಮಲೆ ಯಾತ್ರೆಗೆ ಗುರುವಾಯನಕರೆ ಅಯ್ಯಪ್ಪ ಮಂದಿರದಿಂದ ಹೊರಡಲಿದ್ದು, ಅವರನ್ನು ಬೀಳ್ಕೊಡಲು ಅವರು ತನ್ನ ಮಗಳು ದೇವಕಿಯೊಂದಿಗೆ ಬಂದಿದ್ದರು. ಮಂದಿರದ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭ ಬೈಕೊಂದು ಗುದ್ದಿದೆ. ತಲೆಗೆ ಗಂಭೀರ ಗಾಯಗೊಂಡಿದ್ದರಿಂದ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರ ಮಗಳು ದೇವಕಿ ದೂರು ನೀಡಿದ್ದು, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ: ಓರ್ವ ಗಂಭೀರ
ಉಪ್ಪಿನಂಗಡಿ: ಇಲ್ಲಿನ ಸಮೀಪದ ಶಿರಾಡಿಯ ಕೊಡ್ಯಕಲ್ಲು ಎಂಬಲ್ಲಿ ರಾ.ಹೆ. 75ರಲ್ಲಿ ಸಿಮೆಂಟ್ ಸಾಗಾಟದ ಲಾರಿಯೊಂದು ಗುರುವಾರ ಅಪಘಾತಕ್ಕೀಡಾಗಿ, ಲಾರಿಯ ಕ್ಲೀನರ್ ಪುನೀತ್ ಎಂಬವರು ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಸನದಿಂದ ಮಂಗಳೂರಿನತ್ತ ಸಿಮೆಂಟ್ ಹೇರಿಕೊಂಡು ಸಾಗುತ್ತಿದ್ದ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಲುಕದೇ ಕೊಡ್ಯಕಲ್ಲು ಎಂಬಲ್ಲಿ ಮಗುಚಿ ಬಿತ್ತು. ಈ ಪರಿಣಾಮ ಲಾರಿಯಡಿ ಸಿಲುಕಿದ್ದ ಕೀನರ್ ಪುನೀತ್ ಗಂಭೀರ ಸ್ವರೂಪದ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಬುಧವಾರ ರಾತ್ರಿ ಇದೇ ಪರಿಸರದಲ್ಲಿ ಟ್ಯಾಂಕರೊಂದು ಅಪಘಾತಕ್ಕೀಡಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಟ್ರಾಫಿಕ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಜೂಜು; ಮೂವರ ಸೆರೆ
ಹೆಬ್ರಿ: ಇಲ್ಲಿನ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದಲ್ಲಿರುವ ಹಾಡಿಯಲ್ಲಿ ಜೂಜಾಟ ಆಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ ಘಟನೆ ಬುಧವಾರ ನಡೆದಿದೆ. ಆರೋಪಿಗಳಾದ ರಮೇಶ್ ಆಚಾರಿ, ಅನಿಲ್ ಲೋಬೋ,ಕೆ. ಶಂಕರ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆಟಕ್ಕೆ ಬಳಸಿದ 1,120 ಹಾಗೂ ಇನ್ನಿತ್ತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಿಣೆ ಕಿರುಕುಳ, ಹಲ್ಲೆ; ದೂರು

ಸುಬ್ರಹ್ಮಣ್ಯ: ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸಿ ಮಾನಸಿಕ ಹಾಗೂ ದೈಹಿಕ ಹಲ್ಲೆ ನಡೆಸಿದ್ದಾಗಿ ಆರೋಪಿಸಿ ಕಮಿಲ ನಿವಾಸಿ ಲತಾ ಎಂಬವರು ಅತ್ತೆ, ಮಾವ ಹಾಗೂ ಗಂಡನ ವಿರುದ್ಧ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಗುತ್ತಿಗಾರು ಸಮೀಪದ ಕಮಿಲ ನಿವಾಸಿ ಲತಾ ಎಂಬವರು 3 ವರ್ಷಗಳ ಹಿಂದೆ ರಾಮಚಂದ್ರ ಎಂಬವರನ್ನು ವಿವಾಹವಾಗಿದ್ದರು. ಗಂಡ ರಾಮಚಂದ್ರ, ಬಾಲಕೃಷ್ಣ ಗೌಡ (ಮಾವ), ವಿಮಲ (ಅತ್ತೆ) ಮನೆಯಿಂದ ಹಣ ತರುವಂತೆ ಒತ್ತಾಯಿಸಿದ್ದಲ್ಲದೆ ಮಾನಸಿಕವಾಗಿ ಹಿಂಸೆ ನೀಡಿ, ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಈ ಮೂವರ ವಿರುದ್ಧ ಕೇಸು ದಾಖಲಾಗಿದೆ.

ಪೆಟ್ರೋಲ್ ಸುರಿದು ವ್ಯಕ್ತಿ ಆತ್ಮಹತ್ಯೆ
ಕೋಟ: ವ್ಯಕ್ತಿಯೊಬ್ಬರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾರ್ದಳ್ಳಿ ಮಂಡಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
 ಪರಮೇಶ್ವರ ಮೃತರು. ಇವರು ವಿಪರೀತ ಶರಾಬುಕುಡಿಯುವ ಚಟ ಹೊಂದಿದ್ದರು. ಪ್ರತಿ ದಿನ ಶರಾಬು ಕುಡಿದು ಮನೆಗೆ ಬಂದು ಗಲಾಟೆ ಮಾಡಿ ಸಾಯುತ್ತೇನೆಂದು ಜೀವ ಬೆದರಿಕೆಯನ್ನು ಹಾಕುತ್ತಿದ್ದರು. ಮಂಗಳವಾರ ಮದ್ಯ ಸೇವನೆ ಮಾಡಿ ಬಂದು ಗಲಾಟೆ ಮಾಡಿ ರಬ್ಬರ್ ಪ್ಲಾಂಟೇಶನ್ ಕೆಲಸಕ್ಕೆಂದು ತಂದಿರಿಸಿದ್ದ ಪೆಟ್ರೋಲನ್ನು ಮೈಮೇಲೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ.
 ತಕ್ಷಣ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಮಗಳು ಪವಿತ್ರ ನೀಡಿದ ದೂರಿನಂತೆ ಕೋಟಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಾನಸಿಕ ಅಸ್ವಸ್ಥೆ ಆತ್ಮಹತ್ಯೆ
ಕಾರ್ಕಳ: ಇಲ್ಲಿನ ಮಾಳ ಗ್ರಾಮದ ಮಾಳಚೌಕಿ ಎಂಬಲ್ಲಿ ಮಾನಸಿಕ ಅಸ್ವಸ್ಥೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಮೃತರು ಜಲಜ ಶೆಟ್ಟಿ (60). ಮಾನಸಿಕ ಕಾಯಿಲೆಯಿಂದ ಜಿಗುಪ್ಸೆಗೊಂಡು ಹಲಸಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಮಗ ಹರೀಶ್ ಶೆಟ್ಟಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement