ಸುದ್ದಿ ಸಂಕ್ಷೇಪ
ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ
ಉಡುಪಿ: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷರಾಗಿ ಎಮ್. ನಾರಾಯಣ ಭಟ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆಯಾಗಿ ಎಚ್. ಕೃಷ್ಣಾಬಾಯಿ, ಕಾರ್ಯದರ್ಶಿಯಾಗಿ ಎಸ್.ಎಸ್. ತೋನ್ಸೆ, ಜೊತೆ ಕಾರ್ಯದರ್ಶಿಯಾಗಿ ಪಾಂಡು ಎಮ್. ಶೆಟ್ಟಿ, ಕೋಶಾಧಿಕಾರಿಯಾಗಿ ಪ್ರಭಾಕರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್.ಟಿ. ಕುಂದರ್, ಬಿ. ಶಂಕರ ಕಾಮತ್, ಪಿ. ಸಂಜೀವ ನಾಯಕ್, ಕೆ. ವಿಶಾಲಾಕ್ಷಿ, ಕೆ. ರಾಮಣ್ಣ, ಬಿ. ರವಿನಾಥ ಶೆಟ್ಟಿ, ಎಚ್. ಶಕುಂತಳಾ ಬಾಯಿ, ಕೆ. ಪುಷ್ಪಾ, ಕೆ. ಸುಂದರ ಪ್ರಭು, ಪೀಟರ್ ರಫಾಯೆಲ್ ಅರನ್ನಾ ಆಯ್ಕೆಯಾಗಿದ್ದಾರೆ.
ಕೋಟೇಶ್ವರ ಶಾಲೆ ವಾರ್ಷಿಕೋತ್ಸವ
ಕೋಟೇಶ್ವರ: ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಕೋಟೇಶ್ವರ ಗ್ರಾಮ ಪಂಚಾಯಿತಿ ಸದಸ್ಯ ಕೆ. ಸುರೇಶ್ ಶೇಟ್ ಧ್ವಜಾರೋಹಣಗೈಯವ ಮೂಲಕ ಚಾಲನೆ ನೀಡಿದರು. ಎಸ್ಡಿಎಮ್ಸಿ ಅಧ್ಯಕ್ಷೆ ಪ್ರಭಾವತಿ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಹಿತ ಕೋಟೇಶ್ವರ ಸೂರ್ಯನಾರಾಯಣ ರಾವ್, ಶಾರದ ಕುಂದಾಪುರ, ಮಾಲತಿ ನಾಯ್ಕ ಇದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಶೋಭಾ ಶೆಟ್ಟಿ ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್, ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷ ರಾಜಶೇಖರ್ ಶೆಟ್ಟಿ ಇದ್ದರು. ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು ಮತ್ತು ಶ್ರೀ ಕೃಷ್ಣ ವಿಜಯ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.
ಇಂದು, ನಾಳೆ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ
ಉಡುಪಿ: ಇಲ್ಲಿನ ಎಂಜಿಎಂ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ಯುಜಿಸಿ ಪ್ರಾಯೋಜಿತ ಜ.10 ಮತ್ತು 11 ರಂದು ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಮತ್ತು ಕಾರ್ಯಗಾರ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಎನ್. ಹಾಲಾ ನಾಯ್ಕ್ ಹೇಳಿದರು.
ಅವರು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದಿಯೇತರ ಪ್ರದೇಶಗಳಲ್ಲಿ ಹಿಂದಿ ಭಾಷೆ ಮತ್ತು ಸಾಹಿತ್ಯವನ್ನು ಕಲಿಯುವ ಮತ್ತು ಕಲಿಸುವ ಸಂಬಂಧ ಆಧುನಿಕ ವಿಧಾನದ ಈ ಕಾರ್ಯಗಾರದ ಉದ್ಘಾಟನೆಯನ್ನು ಮೈಸೂರು ವಿವಿಯ ನಿವೃತ್ತ ಪ್ರೊ.ಡಾ.ವಿ.ಡಿ. ಹೆಗ್ಡೆ ಮಾಡಲಿದ್ದಾರೆ. ದಿಕ್ಸೂಚಿ ಭಾಷಣವನ್ನು ಮಂಗಳೂರಿನ ಕಾರ್ಪೋರೇಶನ್ ಬ್ಯಾಂಕ್ನ ಸಹಾಯಕ ಮಹಾಪ್ರಬಂಧಕಿ ಡಾ. ಜಯಂತಿ ಪ್ರಸಾದ್ ನೌಟಿಯಾಲ್ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ನ ಆಡಳಿತಾಧಿಕಾರಿ ಡಾ. ಶಾಂತರಾಮ್ ವಹಿಸಲಿದ್ದಾರೆ ಎಂದರು.
ಈ ಕಾರ್ಯಗಾರದಲ್ಲಿ ರಾಜ್ಯ- ರಾಷ್ಟ್ರ ಮಟ್ಟದ ವಿಷಯ ತಜ್ಞರು ಭಾಗವಹಿಸಲಿದ್ದಾರೆ. ವಿವಿಧ ವಿವಿಗಳ ವ್ಯಾಪ್ತಿಯಲ್ಲಿ ಬರುವ ಸುಮಾರು 100ಕ್ಕೂ ಹೆಚ್ಚಿನ ಕಾಲೇಜು ಅಧ್ಯಾಪಕರು ಭಾಗವಹಿಸಲಿದ್ದು, ಅವರಲ್ಲಿ 25ಕ್ಕಿಂತ ಹೆಚ್ಚು ಅಧ್ಯಾಪಕರು ಶೋಧ ಪತ್ರವನ್ನು ಪ್ರಸ್ತುತ ಪಡಿಸಿಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಂಜಿಎಂ ಪಪೂ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ಹಿಂದಿ ವಿಭಾಗದ ಮುಖ್ಯಸ್ಥ ಎಸ್.ಆರ್. ಶೇಟ್, ಸುರೇಂದ್ರನಾಥ್ ಶೆಟ್ಟಿ ಇದ್ದರು.
17ರಂದು ಮಕ್ಕಳಿಗೆ ಸಮವಸ್ತ್ರ ವಿತರಣೆ
ಉಡುಪಿ: ಕಿನ್ನಿಮೂಲ್ಕಿಯ ಶ್ರೀಕೃಷ್ಣಗ್ರೂಪ್ ಆಫ್ ಡ್ಯಾನ್ಸ್ ವತಿಯಿಂದ ಪರ್ಯಾಯ ಮಹೋತ್ಸವ ಅಂಗವಾಗಿ 17ರಂದು ಸಂಜೆ 6ಕ್ಕೆ ಕಿನ್ನಿಮೂಲ್ಕಿ ಜಂಕ್ಷನ್ ಬಳಿ ನಡೆಸುವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಸ್ಟೀಲ್ ಡ್ರಮ್, ಫ್ಯಾನ್, ರಿಕ್ಷಾ ಚಾಲಕರಿಗೆ ಸಮವಸ್ತ್ರ, ಅಂಗನವಾಡಿ ಮಕ್ಕಳಿಗೆ ಆಟೋಟ ಸಾಮಾಗ್ರಿ ವಿತರಿಸಲಾಗುವುದು ಎಂದು ಶ್ರೀಕೃಷ್ಣ ಗ್ರೂಪ್ ನಿರ್ದೇಶಕ ಕೆ.ಕೃಷ್ಣಮೂರ್ತಿ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭರತನಾಟ್ಯ; ದೀಕ್ಷಾ, ಅಮೃತಾ ಸಾಧನೆ
ಉಡುಪಿ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2013ನೇ ಸಾಲಿನ ಭರತನಾಟ್ಯ ಜೂನಿಯರ್ ಶ್ರೇಣಿ ಪರೀಕ್ಷೆಯಲ್ಲಿ ಕುಂಜಿಬೆಟ್ಟು ಕಲಾನಿಧಿ ಸಂಸ್ಥೆಯ ವಿದುಷಿ ಪ್ರತಿಮಾ ಕಿರಣ್ ಹಾಗೂ ವಿದುಷಿ ಪ್ರವೀಣಾ ಮೋಹನ್ ಶಿಷ್ಯೆಯರಾದ ದೀಕ್ಷಾ ಶೇ. 94 ಮತ್ತು ಅಮೃತಾ ಶೇ. 93.5 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ರಿಕ್ಷಾ ಸಂಘಗಳಿಂದ ಮುಷ್ಕರ ಬೆದರಿಕೆ
ಉಡುಪಿ: ಇಲ್ಲಿನ ಶಾರದಾ ಆಟೋ ಯೂನಿಯನ್ ಮತ್ತು ಜಯಕರ್ನಾಟಕ ಆಟೋ ಯೂನಿಯನ್ ಆಟೋ ಮೀಟರ್ ದರ ಹೆಚ್ಚಳಕ್ಕೆ ಈಗಾಗಲೇ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಜಿಲ್ಲಾಡಳಿತ ಇದುವರೆಗೂ ಸ್ಪಂದಿಸದ ಕಾರಣ ಆಟೋ ರಿಕ್ಷಾ ಸಂಘಟನೆಗಳು ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಈಗ ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುವುದರಿಂದ ರಿಕ್ಷಾ ಚಾಲಕರು ತುಂಬಾ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಜ.10ರ ಒಳಗೆ ಜಿಲ್ಲಾಡಳಿತ ಆಟೋ ಮೀಟರ್ ದರ ಪರಿಷ್ಕರಣೆ ಮಾಡದಿದ್ದರೆ ಮುಂದಿನ 2 ದಿನಗಳಲ್ಲಿ ಉಡುಪಿ ಜಿಲ್ಲಾದ್ಯಂತ ಆಟೋರಿಕ್ಷಾ ಮುಷ್ಕರ ನಡೆಸಲಾಗುವುದು ಎಂದು ಶಾರದಾ ಆಟೋ ಯೂನಿಯನ್ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡಬೆಟ್ಟು, ಜಯಕರ್ನಾಟಕ ಆಟೋ ರಿಕ್ಷಾ ಚಾಲಕ ಮಾಲಕರ ಉಡುಪಿ ತಾಲೂಕು ಘಟಕದ ಅಧ್ಯಕ್ಷ ಕೆ. ರಮೇಶ್ ಶೆಟ್ಟಿ ತಿಳಿಸಿದ್ದಾರೆ.
ಸೈಕಲ್ ವಿತರಣೆ
ಉಡುಪಿ: ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಹೈಸ್ಕೂಲ್ ಅದಮಾರು ವಿದ್ಯಾರ್ಥಿಗಳಿಗೆ ತೆಂಕ ಗ್ರಾಪಂ ಅಧ್ಯಕ್ಷೆ ಜಯಶ್ರೀ ಹರೀಶ್ ಕೋಟ್ಯಾನ್ ಉಚಿತ ಸೈಕಲ್ಗಳನ್ನು ವಿತರಿಸಿದರು. ತಾಪಂ ಸದಸ್ಯೆ ಸುಮನಾ ಕಿಶೋರ್, ಎಂ.ಆರ್.ಪೈ, ಪಿ.ಕೆ. ಗಣಪತಿ ಭಟ್, ನವ್ಯ ಬಿ.ಎಸ್ ಇದ್ದರು.
ಏಡ್ಸ್ ಜಾಗೃತಿ ಕಾರ್ಯಕ್ರಮ
ಉಡುಪಿ: ಇಲ್ಲಿನ ಪೂರ್ಣಪ್ರಜ್ಞ ಪ.ಪೂ. ಕಾಲೇಜು ಅದಮಾರು ಇದರ ರೆಡ್ ರಿಬ್ಬನ್ ಕ್ಲಬ್ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಏಡ್ಸ್ ಜಾಗೃತಿ ಕಾರ್ಯಕ್ರಮ ಜರುಗಿತು. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಪ್ತ ಸಲಹೆಗಾರ ಸುಜಯ ಎಚ್.ಐ.ವಿ. ಸೋಂಕಿನ ಬಗ್ಗೆ ಮಾಹಿತಿ ನೀಡಿದರು. ಏಡ್ಸ್ ಜಾಗೃತಿಯ ತರಬೇತುದಾರ ರಾಮಕೃಷ್ಣ ಪೈ, ಪ್ರಾಂಶುಪಾಲ ರಮೇಶ್ ಹಂದೆ ಇದ್ದರು.
12ರಂದು ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ
ಉಡುಪಿ: ಕಲಾಭಿಮಾನಿ ಸಂಘ ಬಂಗ್ಲೆ ಮೈದಾನ ಕಾಪು ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ವತಿಯಿಂದ ಕಾಪು ಹಳೇ ಮಾರಿಯಮ್ಮ ದೇವಸ್ಥಾನದ ಸಭಾಗೃಹದಲ್ಲಿ 12ರಂದು ಜಿಲ್ಲಾಮಟ್ಟದ ಚೆಸ್ ಸ್ಪರ್ಧೆನಡೆಯಲಿದೆ. ಮೂಡುಬಿದಿರೆ ಆಳ್ವಾಸ್ ಆಂಗ್ಲ ಮಾಧ್ಯಮ ರೆಸಿಡೆನ್ಸಿಯಲ್ ಪ್ರೌಢಶಾಲೆಯ ಪ್ರಾಂಶುಪಾಲ ವಸಂತ ಕುಮಾರ್ ನಿಟ್ಟೆ ಉದದ್ಘಾಟಿಸುವರು. ಕಾಪು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಕೆ.ಪಿ.ಆಚಾರ್ಯ ಅಧ್ಯಕ್ಷತೆ ವಹಿಸಿದ್ದಾರೆ. ಸ್ಪರ್ಧೆಯ ವಯೋವುತಿ 7,9,11,13,15 ವರ್ಷ ಮತ್ತು ಮುಕ್ತ ವಿಭಾಗದಲ್ಲಿ ನಡೆಯಲಿದೆ ಎಂದು ಪ್ರಕಣೆ ತಿಳಿಸಿದೆ.
ಅನಿಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಕಾರ್ಕಳ: ಕಾರ್ಕಳ ಬಸ್ ನಿಲ್ದಾಣದಲ್ಲಿ ಬುಧವಾರ ಅಡುಗೆ ಅನಿಲ ಬೆಲೆಯೇರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನಾ ಸಭೆ ನಡೆಯಿತು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ರಶ್ಮಿ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶೀಲಾ ಶೆಟ್ಟಿ, ಸವಿತಾ ಎಸ್. ಕೋಟ್ಯಾನ್, ರೇಷ್ಮಾ ಉದಯ ಶೆಟ್ಟಿ, ಶೋಭಾ ದೇವಾಡಿಗ, ಸುಮಾ ಕೇಶವ್, ಆಶಾ ಜಗದೀಶ್, ರಾಜೇಶ್ವರಿ, ಲಲಿತಾ ಭಟ್, ದಿವ್ಯಾ ಡಿ. ಪೈ, ಮಮತಾ ಪೂಜಾರಿ, ಪ್ರಮೀಳಾ ಹರೀಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಚಾಲನೆ
ಉದ್ಯಾವರ: ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರ ಪ್ರದೇಶಾಭಿವೃದ್ಧಿ ನಿಧಿಯಿಂದ ಉದ್ಯಾವರ ಗ್ರಾಪಂ ವ್ಯಾಪ್ತಿಯ ಅಂಕುದ್ರು- ಮಚಾದೋ ಕುದ್ರು ರಸ್ತೆ ಕಾಂಕ್ರಿಟೀಕರಣಕ್ಕೆ 5 ಲಕ್ಷ ಅನುದಾನ ಮಂಜೂರಾಗಿದ್ದು, ಕಾಮಗಾರಿಗೆ ಸ್ಥಳೀಯ ಹಿರಿಯರಾದ ಪ್ರಭಾಕರ ಕೋಟ್ಯಾನ್ ಮತ್ತು ಜೆರೋಮ್ ಡಿಸೋಜ ಚಾಲನೆ ನೀಡಿದರು.
ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ತಾಪಂ ಸದಸ್ಯರಾದ ಗಿರೀಶ್ ಕುಮಾರ್, ಪಂಚಾಯಿತಿ ಸದಸ್ಯರಾದ ಮೇರಿ ಡಿಸೋಜಾ, ರಿಯಾಜ್ ಪಳ್ಳಿ, ಫ್ಯಾಟ್ರಿಕ್ ಡಿಸಿಲ್ವ, ಕಾಂಗ್ರೆಸ್ ಮುಖಂಡರಾದ ಶೇಖರ ಕೋಟ್ಯಾನ್, ತಿಲಕರಾಜ ಸಾಲ್ಯಾನ್, ಸರಳಾ ಕೋಟ್ಯಾನ್, ಸುಗಂಧಿ ಶೇಖರ ಕೋಟ್ಯಾನ್, ವಿಶ್ವನಾಥ ಪೂಜಾರಿ ಇದ್ದರು.