ಸೇವಾ ಸಹಕಾರಿ ಸಂಘದಿಂದ ಖಾಲಿ ಚೆಕ್ ಅಪಹರಿಸಿ ರು. 3 ಲಕ್ಷ ಪಡೆದು ವಂಚನೆ
ಬೆಳ್ತಂಗಡಿ: ವೇಣೂರು ಸೇವಾ ಸಹಕಾರಿ ಸಂಘದಲ್ಲಿ ಸಹಿ, ಮೊಹರು ಹಾಕಿದ್ದ ಖಾಲಿ ಚೆಕ್‌ನ್ನು ಯಾರೋ ಅಪಹರಿಸಿ ಸಂಬಂಧಪಟ್ಟ ಬ್ಯಾಂಕಿಗೆ ತಂದು ರು. 3 ಲಕ್ಷ ನಗದೀಕರಿಸಿ ವಂಚಿಸಿದ ಘಟನೆ ನಡೆದಿದೆ. ಈ ಕುರಿತು ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಈಗಿನ ಕಾರ್ಯನಿರ್ವಹಣಾಧಿಕಾರಿ ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲಿಸಿದ್ದಾರೆ. ಚೆಕ್ ಕ್ರಮಬದ್ಧವಾಗಿದ್ದ ಕಾರಣ ನಗದು ನೀಡಲಾಗಿದೆ. ಬ್ಯಾಂಕ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಕೊಂಡೊಯ್ದು ತನಿಖೆ ನಡೆಸುತ್ತಿದ್ದಾರೆ. ಸಂಘದವರ ಶಾಮೀಲಾತಿ ಇಲ್ಲದೇ ಈ ರೀತಿ ಆಗಲು ಸಾಧ್ಯವಿಲ್ಲ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಚೆಕ್‌ನಲ್ಲಿ ವ್ಯಕ್ತಿಯ ಹೆಸರು ಬರೆದು ಸಹಿ ಮಾಡಲಾಗಿತ್ತು. ಚೆಕ್ ನಗದೀಕರಣದ ವೇಳೆ ಬ್ಯಾಂಕ್‌ಗೆ ಆಗಮಿಸಿದ ಗ್ರಾಹಕರ ಕುರಿತು ಪೊಲೀಸರು ಗಮನ ಹರಿಸಲಿದ್ದಾರೆ. ಬ್ಯಾಂಕ್‌ನಿಂದ ಚೆಕ್ ಹೇಗೆ ನಾಪತ್ತೆಯಾಯಿತು ಎನ್ನುವ ಕುರಿತು ಸ್ಪಷ್ಟ ಚಿತ್ರಣ ಸಿಗಬೇಕು ಎಂದು ಆಡಳಿತ ಮಂಡಳಿ ಪಟ್ಟು ಹಿಡಿದಿದೆ.