ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎತ್ತಿನಹೊಳೆ; ಕೇಂದ್ರ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ

Mainashree
Updated On : 11 Jan 2014, 10:41 am

ಮಂಗಳೂರು: ಎತ್ತಿನಹೊಳೆ ಮೂಲಕ ನೇತ್ರಾವತಿ ನದಿ ತಿರುಗಿಸುವ ಕೆಲಸಕ್ಕೆ ಮುಂದಾದರೆ ಕೇಂದ್ರದ ಸಚಿವರು ಜಿಲ್ಲೆಗೆ ಆಗಮಿಸುವಾಗ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ನೇತ್ರಾವತಿ ರಕ್ಷಣೆ ಸಮಿತಿ ಎಚ್ಚರಿಸಿದೆ.
ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಎಂ.ಜಿ.ಹೆಗಡೆ ಸಹಿತ ರೈತ, ರೈಲು, ಮೀನುಗಾರ ಹೋರಾಟ ಮುಖಂಡರು ಒಟ್ಟಾಗಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು.
ನೇತ್ರಾವತಿ ನದಿ ತಿರುಗಿಸುವ ಎತ್ತಿನಹೊಳೆ ಯೋಜನೆ ರಾಷ್ಟ್ರೀಯ ದುರಂತ. ಕೋಲಾರ ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರು ಒದಗಿಸುತ್ತೇವೆ ಎಂದು ಸುಳ್ಳು ಹೇಳಿ ಪಶ್ಚಿಮಘಟ್ಟದ ತಪ್ಪಲಿನ ನೀರು ಕೊಂಡೊಯ್ಯಲಾಗುತ್ತಿದೆ ಎಂದು ಎನ್‌ಐಟಿಕೆ ಎಂಜಿನಿಯರಿಂಗ್ ಕಾಲೇಜ್‌ನ ಉಪನ್ಯಾಸಕ ಎಸ್.ಜಿ. ಮಯ್ಯ ಆರೋಪಿಸಿದರು.
ಈ ನೀರನ್ನು ಮಧ್ಯೆ ಕೈಗಾರಿಕೆಗಳಿಗೆ ಬಳಸುವ ಯೋಜನೆ ಇದೆ. ಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿ ಈ ಯೋಜನೆಗೆ ಅನುಮತಿಗಾಗಿ ಈ ತಂತ್ರ ಹೆಣೆಯುತ್ತಿದ್ದಾರೆ.  ನದಿ ಸಮುದ್ರ ಸೇರಬೇಕಾದದು ನಿಯಮ. ಕೇವಲ ಮೂರು ತಿಂಗಳು ಮಾತ್ರ ನೀರು ಕೊಂಡೊಯ್ಯುತ್ತೇವೆ ಎನ್ನುತ್ತಾರೆ ಉಳಿದ 9 ತಿಂಗಳು ಪೈಪ್‌ಗಳನ್ನು ಖಾಲಿ ಬಿಡುತ್ತಾರೆಯೇ ? 24 ಟಿಎಂಸಿ ನೀರು ಸಿಗುತ್ತದೆ ಎಂದು ಲೆಕ್ಕಾಚಾರ ಹಾಕುತ್ತಾರೆ ಆದರೆ ಅಲ್ಲಿ ಸಿಗುವ ನೀರು ಕೇವಲ 8 ಟಿಎಂಸಿ ಎಂದು ಜಲ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಪರಮಶಿವಯ್ಯ ಮೂರ್ಖತನದ ಯೋಜನೆ ರೂಪಿಸಿದ್ದಾರೆ.  8 ಟಿಎಂಸಿ ನೀರಿಗೆ 8.5 ಸಾವಿರ ಕೋಟಿ ಖರ್ಚು ಮಾಡಬೇಕೆ ? ಇಲ್ಲಿಂದ ನೀರು ಅಲ್ಲಿಯವರೆಗೆ ಮುಟ್ಟಲು ಸಾಧ್ಯವೇ ಎಂದು ಮಯ್ಯ ಪ್ರಶ್ನಿಸಿದರು.
ಅರ್ಕಾವತಿ ಆಣೆಕಟ್ಟುಗಳಿಂದ ಹೋಗುವ ನಾಲೆಗಳ ಜಾಗವನ್ನೇ ಅತಿಕ್ರಮಿಸಿ ಮನೆ ಕಟ್ಟಿದ್ದಾರೆ, ಮೊದಲು ಮನೆಗಳನ್ನು ತೆರವುಗೊಳಿಸಲಿ. ಅಲ್ಲಿಂದ ನೀರು ಹಾಯಿಸಲಿ, ಮಳೆ ನೀರು ಸಂಗ್ರಹ, ಕೆರೆ, ಬಾವಿ ಜಲ ಮರುಪೂರಣ ಮಾಡಿದರೆ ಅಲ್ಲಿಯವರಿಗೆ ಬೇಕಾದಷ್ಟು ನೀರು ಸಾಕು ಎಂದರು.
ಕೊಲಾರಕ್ಕೆ ಕೊಳವೆ  ಮಾತ್ರ !: ಎಂ.ಜಿ.ಹೆಗಡೆ ಮಾತನಾಡಿ, ಪಶ್ಚಿಮಘಟ್ಟದಿಂದ ನದಿ ತಿರುಗಿಸಿ ಕೋಲಾರದವರೆಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ಕೇವಲ ರಾಜಕಾರಣಿ ಮತ್ತು ಅಧಿಕಾರಿಗಳು ಶೇ.20 ಕಮಿಷನ್ ಆಸೆಗಾಗಿ ಜಾರಿ ಮಾಡುತ್ತಿದ್ದಾರೆ. 8ರಿಂದ 9 ಕೋಟಿ  ಹೇಳುತ್ತಾರೆ, ಯೋಜನೆ ಮುಗಿಯುವೇಳೆ ದುಪ್ಪಟ್ಟು ಆಗಬಹುದು. ಈ ಯೋಜನೆಯಲ್ಲಿ ಕೋಲಾರಕ್ಕೆ ನೀರು ಮುಟ್ಟುವುದಿಲ್ಲ, ಕೇವಲ ಕೊಳವೆಗಳು ಮುಟ್ಟಬಹುದು ಎಂದು ವ್ಯಂಗ್ಯವಾಡಿದರು.
ಮೀನುಗಾರ ಮುಖಂಡ ವಾಸುದೇವ ಬೋಳೂರು ಮಾತನಾಡಿ, ನದಿ ನೀರು ಸಮುದ್ರಕ್ಕೆ ಹರಿಯದಿದ್ದರೆ ಮಿನುಗಳಆಹಾರ ಸಿಗುವುದಿಲ್ಲ, ಮೀನುಗಳು ನದಿ ನೀರು ಸೇರುವ ಅಳಿವೆಯಲ್ಲಿ ಮರಿ ಹಾಕಲು ಬರುತ್ತವೆ. ನೀರು ಬತ್ತಿದರೆ ಮೀನುಗಳ ಸಂತತಿ ನಾಶವಾಗುತ್ತದೆ, ಮೀನುಗಾರರ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ ಎಂದರು.
ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಮಾತನಾಡಿ,  ಕಾಂಗ್ರೆಸ್‌ನಲ್ಲಿ ಯಾವುದೇ ಹುದ್ದೆ, ಅಧಿಕಾರದ ಆಸೆ ಹೊಂದಿಲ್ಲ, ನೇತ್ರಾವತಿ ನದಿ ರಕ್ಷಣೆಗಾಗಿ ನಾನು ಅಧಿಕಾರವನ್ನು ತ್ಯಜಿಸಲು ಸಿದ್ಧ ಎಂದರು
ಪಿ.ವಿ.ಮೋಹನ್, ತುಳು ರಕ್ಷಣೆ ವೇದಿಕೆಯ ಯೋಗೀಶ್ ಕುಮಾರ್ ಜೆಪ್ಪು, ಹಸಿರು ಸೇನೆ ರೋಹಿತಾಕ್ಷ ರೈ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement