ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಯೇಸುದಾಸ್ 74ನೇ ಜನ್ಮದಿನಾಚರಣೆ

Mainashree
Updated On : 11 Jan 2014, 10:45 am

ಉಡುಪಿ: ಅಂತಾರಾಷ್ಟ್ರೀಯ ಖ್ಯಾತಿ ಗಾಯಕ ಕೆ.ಜೆ. ಯೇಸುದಾಸ್ ಅವರು ತಮ್ಮ 74ನೇ ಹುಟ್ಟುಹಬ್ಬವನ್ನು ತಮ್ಮ ಪ್ರೀತಿಯ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಅತ್ಯಂತ ಭಕ್ತಿ ಶ್ರದ್ಧೆಯಿಂದ ಶುಕ್ರವಾರ ಆಚರಿಸಿದರು.
 ತಮಗೆ 60 ವರ್ಷ ತುಂಬಿದ ಸಂದರ್ಭದಲ್ಲಿ 2000ನೇ ಇಸವಿಯಲ್ಲಿ ಪ್ರಥಮ ಬಾರಿಗೆ ಕೊಲ್ಲೂರಿನಲ್ಲಿ ಹುಟ್ಟುಹಬ್ಬ ಆಚರಿಸಿದ ಯೇಸುದಾಸ್, ಕಳೆದ 14 ವರ್ಷಗಳಿಂದ ಸತತವಾಗಿ ತಮ್ಮ ಹುಟ್ಟಹಬ್ಬವನ್ನು ಮೂಕಾಂಬಿಕೆಗೆ ಸಂಗೀತಾರಾಧನೆ ಮಾಡುವ ಮೂಲಕ ಆಚರಿಸುತ್ತಿದ್ದಾರೆ.
ಎಂದಿನಂತೆ ಮುಂಜಾನೆ ಹತ್ತಾರು ಮಂದಿ ಸಹಗಾಯಕರೊಂದಿಗೆ ದೇವಳಕ್ಕೆ ಆಗಮಿಸಿದ ಯೇಸುದಾಸ್ ಕ್ರೈಸ್ತ ಧರ್ಮಿಯರಾಗಿದ್ದರೂ ದೇವಳವನ್ನು ಪ್ರವೇಶಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲದಿದ್ದರೂ, ತಮ್ಮದೇ ನಿಯಮವನ್ನು ಪರಿಪಾಲಿಸಿ, ದೇವಳದೊಳಗೆ ಹೋಗದೆ ಹೊರಗಿನ ಸರಸ್ವತಿ ಮಂಟಪದಲ್ಲಿ ಕುಳಿತು ಸಂಗೀತ ಕಛೇರಿ ನಡೆಸಿದರು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಹತ್ತಾರು ಸಂಗೀತ ಕೃತಿಗಳನ್ನು ಹಾಡಿದ ಯೇಸುದಾಸ್ ಅವರು ಸೇರಿದ್ದ ನೂರಾರು ಮಂದಿಯನ್ನು ಮಂತ್ರಮುಗ್ಧಗೊಳಿಸಿದರು.
 ಪತ್ನಿ ಪ್ರಭಾ ಅವರೊಂದಿಗೆ ಆಗಮಿಸಿದ್ದ ಅವರನ್ನು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ ಬರ ಮಾಡಿಕೊಂಡು ಗೌರವಿಸಿದರು. ಅಧಿಕಾರಿ ವರ್ಗದವರು ಹಾಜರಿದ್ದರು.
 ತಮ್ಮ ಅಪಾರ ಸಂಗೀತ ಸಾಧನೆ- ಕೊಡುಗೆಗಾಗಿ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಯೇಸುದಾಸ್, ದೇಶದ ಯಾವುದೇ ಗಾಯಕ ಮಾಡಲಾಗದ ಅನೇಕ ದಾಖಲೆಗಳನ್ನು ಮಾಡಿದ್ದಾರೆ. ನಮ್ಮ ದೇಶದ ಬಹುತೇಕ ಮತ್ತು ವಿದೇಶಿ ಭಾಷೆಗಳು ಸೇರಿ 20ಕ್ಕೂ ಅಧಿಕ ಭಾಷೆಗಳ ಸಿನೆಮಾಗಳಿಗೆ ಹಾಡಿದ್ದಾರೆ. ಹಿನ್ನೆಲೆ ಗಾಯನಕ್ಕಾಗಿ 7 ಬಾರಿ ರಾಷ್ಟ್ರೀಯ ಪ್ರಶಸ್ತಿ, 40ಕ್ಕೂ ಅಧಿಕ ಬಾರಿ ರಾಜ್ಯ ಪ್ರಶಸ್ತಿಗಳನ್ನು ಪಡೆದ ಏಕೈಕ ಗಾಯಕರಾಗಿದ್ದಾರೆ. 2006ರಲ್ಲಿ 4 ಭಾಷೆಗಳ 16 ಹಾಡುಗಳನ್ನು ಒಂದೇ ದಿನ ರೆಕಾರ್ಡಿಂಗ್ ಮಾಡಿದ್ದು ಇವರ ಇನ್ನೊಂದು ಸಾಧನೆ.
 ಕೇರಳ ಸರ್ಕಾರದಿಂದ ಆಸ್ಥಾನ ಗಾಯಕ ಪ್ರಶಸ್ತಿ ಪಡೆದ ಏಕೈಕ ಗಾಯಕ ಯೇಸುದಾಸ್ 50 ಸಾವಿರ ಹಾಡುಗಳನ್ನು ಹಾಡಿರುವ ಅವರಿಗೆ 100ಕ್ಕೂ ಅಧಿಕ ಪ್ರಶಸ್ತಿಗಳು ದೊರಕಿವೆ, 4 ವಿವಿಗಳ ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ.

ಸುಭಾಶ್ಚಂದ್ರ ಎಸ್. ವಾಗ್ಳೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement