ಗುತ್ತಿಗೆ ಪಾವತಿ ಬಿಕ್ಕಟ್ಟು; ಆಧಾರ್ ನೋಂದಣಿ ಕೇಂದ್ರ ಕಾರ್ಯ ಸ್ಥಗಿತ
ಬಂಟ್ವಾಳ: ಗುತ್ತಿಗೆ ಸಂಸ್ಥೆಗಳೊಳಗಿನ ಬಿಕ್ಕಟ್ಟಿನಿಂದಾಗಿ ನಾಲ್ಕು ಜಿಲ್ಲೆಗಳ ಆಧಾರ್ ನೋಂದಣಿ ಕೇಂದ್ರಗಳು ಶುಕ್ರವಾರದಿಂದ ಸ್ಥಗಿತಗೊಂಡಿದೆ. ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ 16 ಆಧಾರ್ ನೋಂದಣಿ ಕೇಂದ್ರಗಳ ಸಹಿತ ನಾಲ್ಕು ಜಿಲ್ಲೆಗಳ 100ಕ್ಕೂ ಅಧಿಕ ಕೇಂದ್ರಗಳು ಬಾಗಿಲುಮುಚ್ಚಿದೆ.
ಕಳೆದ ಹಲವು ತಿಂಗಳುಗಳಿಂದ ರಾಜ್ಯದ ಬೆಂಗಳೂರು ನಗರ, ದಕ್ಷಿಣಕನ್ನಡ, ಗುಲ್ಬರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಆಧಾರ ನೋಂದಣಿ ಕೇಂದ್ರಗಳನ್ನು ನಿರ್ವಹಿಸುತ್ತಿದ್ದ ಮೈಸೂರು ಐಟಿ ಸೊಲ್ಯೂಷನ್ಸ್ ಪ್ರಮುಖ ಗುತ್ತಿಗೆ ಸಂಸ್ಥೆ ಮಾರ್ಸ್ ಟೆಲಿಕಾಂ ಸಿಸ್ಟಮ್ನೊಂದಿಗಿನ ಒಪ್ಪಂದವನ್ನು ಹಠಾತ್ ಮುರಿದುಕೊಂಡಿರುವುದು ಈ ಗೊಂದಲಕ್ಕೆ ಕಾರಣವೆನ್ನಲಾಗಿದ್ದು, ಈ ತೊಂದರೆಯನ್ನು ಮಾರ್ಸ್ ಸಂಸ್ಥೆ ತಾಂತ್ರಿಕ ದೋಷ ಎಂದು ಕರೆದುಕೊಂಡಿದೆ.
ಏನಾಗಿದೆ...?: ಸರ್ಕಾರದಿಂದ ಆಧಾರ್ ನೋಂದಣಿಯ ಗುತ್ತಿಗೆ ಪಡೆದುಕೊಂಡಿರುವ ಹೈದರಾಬಾದ್ ಮೂಲದ ಮಾರ್ಸ್ ಟೆಲಿಕಾಂ ಸಿಸ್ಟಮ್ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ನಾಲ್ಕು ಜಿಲ್ಲೆಗಳ ಆಧಾರ್ ನೋಂದಣಿ ಹೊಣೆಯನ್ನು ಮೈಸೂರು ಐಟಿ ಸೊಲ್ಯೂಷನ್ಸ್ಗೆ ವಹಿಸಿತ್ತು. ಅದರಂತೆ ಕಳೆದ 2012ರಿಂದೀಚೆಗೆ ಆಧಾರ್ ನೋಂದಣಿ ಕಾರ್ಯ ನಡೆಯುತ್ತಿತ್ತು.
ಆದರೆ ಪ್ರಮುಖ ಗುತ್ತಿಗೆ ಸಂಸ್ಥೆ ಮಾಸರ್, ಐಟಿ ಸೊಲ್ಯೂಷನ್ಸ್ಗೆ ನೀಡಬೇಕಿದ್ದ ಹಣದ ಮೊತ್ತ ನೀಡದಿರುವುದೇ ಈ ಗೊಂದಲಕ್ಕೆ ಕಾರಣ ಎಂದು ಹೇಳಲಾಗಿದೆ.
ಕಳೆದ ಹಲವು ತಿಂಗಳಿನಿಂದ ಬಾಕಿಯಿದ್ದ ಹಣ ಬಿಡುಗಡೆಗೆ ಮೈಸೂರು ಐಟಿ ಸೊಲ್ಯೂಶನ್ಸ್ ಸಂಸ್ಥೆಯವರು ಮಾರ್ಸ್ ಸಂಸ್ಥೆಯ ಮೇಲೆ ಒತ್ತಡ ಹೇರಿದ್ದರೂ, ಅವರು ಸ್ಪಂದಿಸದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಆಧಾರ್ ನೋಂದಣಿ ಕೇಂದ್ರಗಳನ್ನು ಬಂದ್ ಮಾಡುವುದಾಗಿ ಮೈಸೂರು ಐಟಿ ಸೊಲ್ಯೂಷನ್ಸ್ ಸಂಸ್ಥೆ ಘೋಷಿಸಿದೆ.
ಪರಿಣಾಮ...: ಉಂಟಾಗಿರುವ ಆಧಾರ್ ಗೊಂದಲದ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಿದರೆ, 16ರಿಂದ ಮತ್ತೆ ಆಧಾರ್ ಕೇಂದ್ರಗಳು ಕಾರ್ಯಾರಂಭಿಸಲಿವೆ ಎಂಬ ಮಾಹಿತಿ ದೊರೆತಿದೆ.
ಆದರೆ ಈಗ ಪ್ರಮುಖ ಗುತ್ತಿಗೆ ಸಂಸ್ಥೆಯೊಂದಿಗಿನ ಒಪ್ಪಂದ ಮುರಿದುಕೊಂಡಿರುವ ಮೈಸೂರು ಐಟಿ ಸೊಲ್ಯೂಶನ್ ಸಂಸ್ಥೆ ಎಲ್ಲಾ ಕೇಂದ್ರಗಳಲ್ಲಿ ಜೋಡಿಸಿದ್ದ ಕಂಪ್ಯೂಟರ್, ಕ್ಯಾಮೆರಾ, ಸ್ಕ್ಯಾನರ್ ಸಹಿತ ಎಲ್ಲಾ ಉಪಕರಣಗಳನ್ನು ತೆರವು ಮಾಡುವ ಹಿನ್ನೆಲೆಯಲ್ಲಿ ಆಧಾರ ಕೇಂದ್ರಗಳಲ್ಲಿ ಹೊಸದಾಗಿಯೇ ಎಲ್ಲವೂ ಸಿದ್ದಗೊಳ್ಳಬೇಕಿದೆ. ಈ ಕಾರಣದಿಂದ ಮಾರ್ಸ್ ಸಂಸ್ಥೆಗೆ ದೊಡ್ಡ ಹೊಡೆತವೇ ಬಿದ್ದ ಹಾಗಿದ್ದು, ವಾರದೊಳಗೆ ಚೇತರಿಸಿಕೊಳ್ಳುವುದು ಅನುಮಾನವಾಗಿದೆ.
ಸೋಮವಾರ ಹೊರತು ಪಡಿಸಿದರೆ ಜ.15 ರವರೆಗೆ ಸರ್ಕಾರಿ ರಜೆ ಇರುವ ಹಿನ್ನೆಲೆಯಲ್ಲಿ ಆಧಾರ್ ನೋಂದಣಿ ಕೇಂದ್ರಗಳ ಸುಧಾರಣೆಗೆ ಮತ್ತಷ್ಟು ದಿನ ಬೇಕಾಗಬಹುದು.
ಸಮಸ್ಯೆಗಳು: ನಿಯಮ ಪ್ರಕಾರ ಮಾರ್ಚ್ವರೆಗೆ ಮುಂದುವರಿಯ ಬೇಕಾಗಿದ್ದ ಆಧಾರ್ ಕೇಂದ್ರಗಳು ಹಠಾತ್ ಬಾಗಿಲು ಹಾಕಿರುವುದು ಸಮಸ್ಯೆಗೆ ಎಡೆಮಾಡಿಕೊಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 2012ರ ಡಿ.15ರಂದು ಆಧಾರ್ ಕೇಂದ್ರಗಳು ಆರಂಭವಾಗಿದ್ದು ಸುಮಾರು 18 ಲಕ್ಷಕ್ಕೂ ಅಧಿಕ ನೋಂದಣಿ ಮುಗಿದಿದೆ. ಇನ್ನು ಕೆಲವೇ ದಿನಗಳು ಬಾಕಿಯಿದ್ದ ಹಿನ್ನೆಲೆಯಲ್ಲಿ ನೋಂದಣಿಗೆ ಬಾಕಿಯಿದ್ದವರು ಆಧಾರ್ ನೋಂದಣಿಗೆ ಬರುತ್ತಿದ್ದರು. ಆದರೆ ಏಕಾಏಕಿ ಬಂದ್ ಆಗಿರುವುದು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ.
ಸರ್ಕಾರದ ಅನುದಾನ ವಿಳಂಬವೇ ಕಾರಣ: ಪ್ರಮುಖ ಗುತ್ತಿಗೆ ಸಂಸ್ಥೆ ಮಾರ್ಸ್, ಸಬ್ ಕಾಂಟ್ರ್ಯಾಕ್ಟ್ ವಹಿಸಿಕೊಂಡಿದ್ದ, ಐಟಿ ಸೊಲ್ಯೂಶನ್ಗೆ ಹಣ ಬಾಕಿಯಿರಿಸಿದ್ದೇ ಈ ಗೊಂದಲಕ್ಕೆ ಕಾರಣ ಎನ್ನಲಾಗಿದೆಯಾದರೂ. ಮುಖ್ಯ ಗುತ್ತಿಗೆ ಸಂಸ್ಥೆಗೆ ಸರ್ಕಾರದಿಂದ ಸಕಾಲದಲ್ಲಿ ಅನುದಾನ ಬಿಡುಗಡೆಯಾಗದಿರುವುದೇ ಈ ಸಮಸ್ಯೆ ಉದ್ಭವಿಸಲು ಕಾರಣವೆನ್ನಲಾಗಿದೆ. ಯಾವುದೂ ಇನ್ನೂ ಸ್ಪಷ್ಟಗೊಂಡಿಲ್ಲ.
ಮೌನೇಶ ವಿಶ್ವಕರ್ಮ