ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಫೇಸ್‌ಬುಕ್‌ನಲ್ಲಿ ಪ್ರೇಯಸಿ ಮಾನ ಹರಾಜು: ಆರೋಪಿ ಯುವಕ ಸೆರೆ

Mainashree
Updated On : 11 Jan 2014, 10:40 am

ಮಣಿಪಾಲ: ಯುವತಿಯೊಬ್ಬಳೊಂದಿಗೆ ಸಲುಗೆಯಿಂದಿರುವ ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ಆಕೆಯ ಮಾನ ಹರಾಜು ಹಾಕಿದ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ.  ಕಟಪಾಡಿಯ ಮುಹಮ್ಮದ್ ನಾಸೀರ್ (32) ಬಂಧಿತ ಆರೋಪಿ. ಈತನ ವಿರುದ್ಧ ನಗರದ ಪ್ರತಿಷ್ಠಿತ ಪದವಿ ಕಾಲೇಜು ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ಆರೋಪಿಗೆ ಈ ವಿದ್ಯಾರ್ಥಿನಿ ಹೊರತಾಗಿ ದುಬೈನಲ್ಲಿ ಇನ್ನೊಬ್ಬಳು ಪ್ರೇಯಸಿಯಿದ್ದಾಳೆ ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆ: ಸಂತ್ರಸ್ತೆ ವಿದ್ಯಾರ್ಥಿನಿ ಮತ್ತು ನಾಸೀರ್ ನಡುವೆ ಕಳೆದ 10 ತಿಂಗಳಿಂದ ಪ್ರಣಯ ಪ್ರಸಂಗ ನಡೆಯುತ್ತಿದ್ದು, ಈ ಸಂದರ್ಭ ಇಬ್ಬರು ಸಾಕಷ್ಟು ಓಡಾಡಿದ್ದಾರೆ. ನಡುವೆ ಒಂದು ಬಾರಿ ಸಲಿಗೆಯಲ್ಲಿದ್ದಾಗ ಇಬ್ಬರು ಖುಷಿಗಾಗಿ ಈ ಫೋಟೊಗಳನ್ನು ಯುವಕನ ಮೊಬೈಲಿನಲ್ಲಿ ಸೆರೆ ಹಿಡಿದಿದ್ದರು.   ಈ ಫೋಟೊಗಳು ಕೆಲ ದಿನಗಳ ಹಿಂದೆ ಆತನ ಫೇಸ್ ಬುಕ್‌ನಲ್ಲಿ ಕಾಣಿಸಿಕೊಂಡಿದ್ದೇ ತಡ, 'ತನ್ನ ಮಾನ ಕಳೆದ' ಎಂದು ಆಕೆ ತನ್ನ ಪ್ರಿಯಕರನ ವಿರುದ್ಧವೇ ಮಣಿಪಾಲ ಠಾಣೆಗೆ ದೂರು ನೀಡಿದ್ದಾಳೆ.
ಪ್ರೇಯಸಿ ಜೊತೆ ಸಂಚು ಆರೋಪ: ದೂರಿನಲ್ಲಿ ಆಕೆ ನಾಸೀರ್ ಮತ್ತು ಆತನ ದುಬೈ ಪ್ರೇಯಸಿ ಸೇರಿಕೊಂಡು ಸಂಚು ನಡೆಸಿ ತಾವಿಬ್ಬರು ಜೊತೆಗಿದ್ದ ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ತನ್ನ ಮಾನಹಾನಿ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ.
ಪ್ರೇಯಸಿಯಿಂದ ಬೆದರಿಕೆ ಕರೆ: ತನಿಖೆಯ ವೇಳೆ ಈ ಕಾಲೇಜು ವಿದ್ಯಾರ್ಥಿನಿ ಇನ್ನೊಂದು ವಿಷಯ ಬಾಯಿಬಿಟ್ಟಿದ್ದಾಳೆ. ಕೆಲವು ದಿನಗಳ ಹಿಂದೆ ನಾಸೀರ್‌ನ ದುಬೈಯಲ್ಲಿರುವ ಪ್ರೇಯಸಿ ತನಗೆ ದೂರವಾಣಿ ಕರೆ ಮಾಡಿದ್ದು, 'ನಿನ್ನಿಂದಾಗಿ ನನ್ನ ಪ್ರಿಯಕರ ನಾಸೀರ್ ನನ್ನಿಂದ ದೂರವಾಗಿದ್ದಾನೆ, ದೂರವಾಣಿ ಕರೆ ಕೂಡ ಮಾಡುತ್ತಿಲ್ಲ, ನೀನು ಆತನಿಂದ ದೂರವಾಗದಿದ್ದರೆ ನಿನ್ನನ್ನು ನೋಡಿಕೊಳ್ಳುತ್ತೇನೆ' ಎಂದು ದುಬೈನಿಂದ ಜೀವಬೆದರಿಕೆ ಒಡ್ಡಿದ್ದಾಳೆ ಎಂದು ವಿದ್ಯಾರ್ಥಿನಿ ಪೊಲೀಸರಿಗೆ ತಿಳಿಸಿದ್ದಾಳೆ.
ಪ್ಲೇಟ್ ತಿರುಗಿಸಿದ ಆರೋಪಿ: ತನಿಖೆಯ ವೇಳೆ ನಾಸೀರ್ ಇನ್ನೊಂದು ಕತೆಯನ್ನು ಪೊಲೀಸರ ಮುಂದೆ ಹೇಳಿದ್ದಾನೆ. ತಾನು ಈ ಫೋಟೋಳನ್ನು ತನ್ನ ಕಾಲೇಜು ಪ್ರೇಯಸಿಯ ವಾಟ್ಸ್‌ಅಪ್ ಖಾತೆಗೆ ಕಳುಹಿಸಿದ್ದೆ, ಅದನ್ನು ದುಬೈಯಲ್ಲಿರುವ ತನ್ನ ಪ್ರೇಯಸಿ ಹ್ಯಾಕ್ ಮಾಡಿದ್ದಾಳೆ, ಮಾತ್ರವಲ್ಲ ತನ್ನ ಫೇಸ್‌ಬುಕ್‌ನ್ನು ಕೂಡ ಹ್ಯಾಕ್ ಮಾಡಿ ಅದಕ್ಕೆ ಈ ಫೋಟೊಗಳನ್ನು ಅಪ್‌ಲೋಡ್ ಮಾಡಿದ್ದಾಳೆ. ತನ್ನ ಕಾಲೇಜು ಪ್ರೇಯಸಿಯ ಮಾನಹಾನಿ ಮಾಡಿ ಆಕೆಯನ್ನು ತನ್ನಿಂದ ದೂರ ಮಾಡಲು ದುಬೈ ಪ್ರೇಯಸಿ ಹೀಗೆಲ್ಲಾ ಮಾಡಿದ್ದಾಳೆ ಎಂದು ಹೇಳಿದ್ದಾನೆ.
ಆರೋಪಿ ನಿರುದ್ಯೋಗಿ: ಐಟಿಐ ಕೋರ್ಸ್ ಮಾಡಿರುವ ದುಬಾರಿ ಡ್ಯೂಕ್ ಬೈಕ್‌ನಲ್ಲಿ ತಿರುಗಾಡುವ (ತನ್ನ ಪ್ರೇಯಸಿಯನ್ನು ತಿರುಗಾಡಿಸುವ) ಈ ಯುವಕ ನಿರುದ್ಯೋಗಿ. ಕೆಲವು ತಿಂಗಳ ಹಿಂದೆ ದುಬೈಗೆ ಹೋಗಿ 3 ತಿಂಗಳು ಇದ್ದು ಬಂದಿದ್ದ, ಈ ಸಂದರ್ಭ ಈ ದುಬೈನಲ್ಲಿ ಪ್ರೇಯಸಿಯನ್ನು ಗಳಿಸಿದ್ದ. ಇತ್ತ ಊರಿನಲ್ಲಿಯೂ ಕಾಲೇಜು ವಿದ್ಯಾರ್ಥಿಯನ್ನು ಪ್ರೀತಿಸುತ್ತಿದ್ದ, ಇದನ್ನು ಆತನೇ ಪೊಲೀಸರೆದುರು ಬಾಯಿ ಬಿಟ್ಟಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement