ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಿಂಡಿಕೇಟ್ ಬ್ಯಾಂಕ್ ರು. 200 ಕೋಟಿ ಮೌಲ್ಯದ ಶೇರು ಸರ್ಕಾರಕ್ಕೆ ನೀಡಲು ಮಹಾಸಭೆ ನಿರ್ಧಾರ

Mainashree
Updated On : 11 Jan 2014, 10:45 am

ಮಣಿಪಾಲ: ಸಿಂಡಿಕೇಟ್ ಬ್ಯಾಂಕ್‌ನ ರು. 200 ಕೋಟಿ ಮೌಲ್ಯದ ಶೇರುಗಳನ್ನು ಸರ್ಕಾರಕ್ಕೆ ನೀಡುವುದಕ್ಕೆ ಬ್ಯಾಂಕ್ ಆಡಳಿತ ಮಂಡಳಿ ನಿರ್ಧರಿಸಿದೆ. ಈ ಬಗ್ಗೆ ಶುಕ್ರವಾರ ಬ್ಯಾಂಕಿನ ವಿಶೇಷ ಮಹಾಸಭೆ ಕರೆಯಲಾಗಿದ್ದು, ಬ್ಯಾಂಕ್ ಅಧ್ಯಕ್ಷ-ವ್ಯವಸ್ಥಾಪಕ ನಿರ್ದೇಶಕ ಸುಧೀರ್ ಕುಮಾರ್ ಜೈನ್ ಈ ಪ್ರಸ್ತಾವವನ್ನು ಶೇರುದಾರರ ಮುಂದೆ ಮಂಡಿಸಿದರು.
 ಸಭೆಯ ನಂತರ ಸಿಂಡಿಕೇಟ್ ಬ್ಯಾಂಕ್ ದೇಶದ 8 ಪ್ರಮುಖ ನಗರಗಳಲ್ಲಿ 8 ಕ್ಷೇತ್ರೀಯ ಮಹಾಪ್ರಬಂಧಕ ಕಚೇರಿಗಳನ್ನು ತರೆಯುತ್ತಿದ್ದು, ಮೊದಲ ಕಚೇರಿಯನ್ನು ಜೈನ್ ಅವರು ಮಣಿಪಾಲದಲ್ಲಿ ಉದ್ಘಾಟಿಸಿದರು.
ಶೇ.25 ಮಧ್ಯಂತರ ಲಾಭಾಂಶ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ವರ್ಷದ ತೃತೀಯ ಕಾಲುವಾರ್ಷಿಕ ಆಡಳಿತ ಮಂಡಳಿ ಸಭೆಯಲ್ಲಿ ಬ್ಯಾಂಕಿನ ಶೇರುದಾರರಿಗೆ ಶೇ. 25ರಷ್ಟು ಮಧ್ಯಂತರ ಲಾಭಾಂಶ ನೀಡಲು ನಿರ್ಧರಿಸಲಾಗಿದೆ ಎಂದು ಘೋಷಿಸಿದರು.  ಪ್ರಸ್ತುತ ವರ್ಷದಲ್ಲಿ ಈಗಾಗಲೇ ಬ್ಯಾಂಕಿನ 145 ಹೊಸ ಶಾಖೆ ತೆರೆಯಲಾಗಿದ್ದು, ವರ್ಷಾಂತ್ಯದೊಳಗೆ ಇನ್ನೂ 100 ಶಾಖೆಗಳನ್ನು ತೆರೆಯಲಾಗುವುದು. 2014-15ರಲ್ಲಿ 200 ಶಾಖೆಗಳನ್ನು ತೆರೆಯುವ ಗುರಿ ಹಾಕಿಕೊಳ್ಳಲಾಗಿದೆ, ಈಗಾಗಲೇ ಲಂಡನ್‌ನಲ್ಲಿ ಸಾಗರೋತ್ತರ ಶಾಖೆ ಇದ್ದು, ಮುಂದೆ ಯುಎಇ, ಹಾಂಗ್ ಕಾಂಗ್, ಚೀನಾ, ದಕ್ಷಿಣ ಆಫ್ರಿಕಾಗಳಲ್ಲಿಯೂ ವಿದೇಶಿ ಶಾಖೆಗಳನ್ನು ತೆರೆಯಲಾಗುತ್ತದೆ. ಜೊತೆಗೆ 2500 ಮಂದಿ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.  ಬ್ಯಾಂಕಿನ ಅನುತ್ಪಾದಕ ಆಸ್ತಿ ಶೇ. 2.88 ಇದ್ದು, ಇದು ಬ್ಯಾಂಕಿಂಗ್ ಕ್ಷೇತ್ರದ ಶೇ. 4.5ಕ್ಕಿಂತ ಬಹಳ ಕಡಿಮೆ ಇದೆ ಎಂದು ಜೈನ್ ಸಂತಸ ವ್ಯಕ್ತಪಡಿಸಿದರು.
ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಎಂ. ಆಂಜನೇಯ ಪ್ರಸಾದ್, ಟಿ.ಕೆ. ಶ್ರೀವಾಸ್ತವ,  ಕ್ಷೇತ್ರೀಯ ಮಹಾಪ್ರಬಂಧಕ ಪಿ. ಪಳನಿಸಾಮಿ, ಬ್ಯಾಂಕಿನ ನಿರ್ದೇಶಕರು, ಪ್ರಧಾನ ಹಾಗೂ ನಿಗಮ ಕಚೇರಿಯ ಮಹಾಪ್ರಬಂಧಕ, ಇತರ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement