ಸುದ್ದಿ ಸಂಕ್ಷೇಪ
ಹಂಗಾರಕಟ್ಟೆ: 13ರಂದು ಯಕ್ಷವರ್ಷ ಸಂಭ್ರಮ
ಹಂಗಾರಕಟ್ಟೆ: ಐರೋಡಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ತಿಂಗಳ ಯಕ್ಷಗಾನ ಸರಣಿ ಕಾರ್ಯಕ್ರಮ 'ಸಂಸ್ಕೃತಿ ಸಂಭ್ರಮ'ದಲ್ಲಿ ಯಕ್ಷವರ್ಷ 13ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ 'ಶಲ್ಯಪರ್ವ', 'ಗದಾಯುದ್ಧ' ಯಕ್ಷಗಾನ ಪ್ರದರ್ಶನವಾಗಲಿದೆ. ಕೆ.ಪಿ. ಹೆಗಡೆ, ಎನ್.ಜಿ. ಹೆಗಡೆ, ಮಂದಾರ್ತಿ ರಾಮಕೃಷ್ಣ, ಕೊಂಡದಕುಳಿ ರಾಮಚಂದ್ರ ಹೆಗಡೆ, ತಂಡಿಮನೆ ಶ್ರೀಪಾದ ಭಟ್ಟ, ಜಲವಳ್ಳಿ ವಿದ್ಯಾಧರ ರಾವ್, ಇಟಗಿ ಮಹಾಬಲೇಶ್ವರ ಹೆಗಡೆ, ಕಾಸರಕೋಡು ಶ್ರೀಧರ ಹೆಗಡೆ, ಕೃಷ್ಣಮೂರ್ತಿ ಉರಾಳ, ಅಂಬರೀಶ್ ಭಟ್, ವೈಕುಂಠ ಹೇರ್ಳೆ, ವಿಜಯ ಪುತ್ರನ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ತಿಳಿಸಿದ್ದಾರೆ.
14ರಿಂದ ನಮೋ ತೇರು
ಮಂಗಳೂರು: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಚಿಂತನೆ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ನಮೋ ತೇರು ಸಂಚರಿಸಲಿದೆ. ಜ.14ರಂದು ಕುಂದಾಪುರದ ಕುಂಭಾಶಿಯಲ್ಲಿ ನಮೋ ತೇರಿಗೆ ಚಾಲನೆ ನೀಡಲಾಗುವುದು ಎಂದು ನಮೋ ಬ್ರಿಗೇಡ್ ಕರ್ನಾಟಕ ತಿಳಿಸಿದೆ.
ಮರದಿಂದ ಬಿದ್ದು ವ್ಯಕ್ತಿ ಸಾವು
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಮುಗೇರಡ್ಕ ಎಂಬಲ್ಲಿ ಮೂರ್ತೆದಾರಿಕೆ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಮರದಿಂದ ಬಿದ್ದು, ಮುತ್ತಪ್ಪ ಪೂಜಾರಿ (50) ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಭವಿಸಿದೆ. ಬಂದಾರು ಗ್ರಾಮ ನಿವಾಸಿ ಮುತ್ತಪ್ಪ ಪೂಜಾರಿ, ಮುಗೇರಡ್ಕದ ಅಂತರ ಎಂಬಲ್ಲಿ ತಾಳೆ ಮರದಿಂದ ಮೂರ್ತೆದಾರಿಕೆ ಮಾಡುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಅವರು ಪತ್ನಿ , ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ಕಾರ್ಕಳ: ವಿಷ ಪದಾರ್ಥ ಸೇವಿಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ದುರ್ಗಾನಗರ ಎಂಬಲ್ಲಿ ಶುಕ್ರವಾರ ನಡೆದಿದೆ. ಮೃತರು ಹರೀಶ್ ಭೋವಿ(22). ಇವರು ಮಂಗಳವಾರ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ವಾಂತಿ ಮಾಡಿಕೊಂಡು ಬಿದ್ದಿದ್ದವರನ್ನು ಚಿಕಿತ್ಸೆಗಾಗಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆಗೆ ಸ್ಪಂದಿಸದ ಅವರು ಶುಕ್ರವಾರ ಮೃತಪಟ್ಟಿದ್ದಾರೆ. ಹರೀಶ್ ಭೋವಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ವಿಪರೀತ ಅಮಲು ಪದಾರ್ಥ ಸೇವಿಸುತ್ತಿದ್ದರು. ಔಷಧಿ ಎಂದು ಯಾವುದೋ ವಿಷ ಪದಾರ್ಥ ಸೇವಿಸಿ ಮೃತಪಟ್ಟಿದ್ದಾರೆ ಎಂಬುದಾಗಿ ಸುಭಾಷಿನಿ ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬೈಕ್ ಸ್ಕಿಡ್; ಸಹಸವಾರ ಮೃತ
ಕಾರ್ಕಳ: ಇಲ್ಲಿನ ಪಳ್ಳಿ ಗ್ರಾಮದ ಕೊಕಾಯಿಕಲ್ ಎಂಬಲ್ಲಿ ಬೈಕ್ ಸ್ಕಿಡ್ ಆಗಿ ಮಗುಚಿ ಬಿದ್ದು ಸಹಸವಾರ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಮೃತರು ಕುಟ್ಟಿ ಕುಲಾಲ್. ಇವರು ತಮ್ಮ ಸಹೋದರ ರಾಜು ಕುಲಾಲ್ ಎಂಬವರೊಂದಿಗೆ ಮನೆ ಕಡೆಗೆ ಬೈಕಿನಲ್ಲಿ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸತೀಶ್ ಕುಲಾಲ್ ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿನ ಬಿಡಿಭಾಗ ಕಳವು
ಉಪ್ಪಿನಂಗಡಿ: ಶಿಬಾಜೆಯ ಮನೆಯೊಂದರ ಶೆಡ್ನಲ್ಲಿ ನಿಲ್ಲಿಸಲಾದ ಓಮ್ನಿ ಕಾರಿನ ಟಯರ್ ಮತ್ತು ವೀಲ್ ಜಾಕ್ ಮತ್ತು ಟೂಲ್ಸ್ಗಳು ಕಳವಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಗಳನ್ನು ಸ್ಥಳೀಯರಾದ ಗುರುವ ಮುಗೇರ, ಹರೀಶ್, ಮಾಧವಗೌಡ ಎಂದು ಹೆಸರಿಸಿ ದೂರು ನೀಡಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯುವತಿ ನಾಪತ್ತೆ
ಹೆಬ್ರಿ: ಇಲ್ಲಿನ ನಾಲ್ಕೂರು ಗ್ರಾಮದ ಅಂಗಡಿಬೆಟ್ಟು ಎಂಬಲ್ಲಿನ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ಜ. 6ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಾಣೆಯಾದ ಯುವತಿ ಗುಲಾಬಿ (19). ಈಕೆ ಇಲ್ಲಿನ ನಿವಾಸಿ ಕಾಳು ನಾಯ್ಕ ಎಂಬವರ ಮಗಳು. ನಾಲ್ಕೂರು ಗ್ರಾಮದ ಕಜ್ಕೆಬೈಲಿನ ಗೇರು ಬೀಜ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಜ.6ರಂದು ಎಂದಿನಂತೆ ಬೆಳಗ್ಗೆ 7.30ಕ್ಕೆ ಕೆಲಸಕ್ಕೆಂದು ಹೋದವಳು ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಕಾಳು ನಾಯ್ಕ ಅವರು ನೀಡಿದ ದೂರಿನಂತೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಾಹಿತೆ ನಾಪತ್ತೆ
ವಿಟ್ಲ; ಮಹಿಳೆಯೊಬ್ಬರು ಕೆಲಸಕ್ಕೆಂದು ಮನೆಯಿಂದ ಹೋದವರು ಮರಳಿ ಬಾರದೆ ನಾಪತ್ತೆಯಾಗಿರುವುದಾಗಿ ಅವರ ಪತಿ ವಿಟ್ಲ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ. ಕನ್ಯಾನ ಗ್ರಾಮದ ಮಂಡ್ಯೂರು ನಿವಾಸಿ ಸುರೇಶ್ ಅವರ ಪತ್ನಿ ಉದಯಾಕ್ಷಿ(38) ಎಂಬವರು ಕಳೆದ 15 ದಿನಗಳ ಹಿಂದೆ ಸ್ಥಳೀಯ ದೇವಸ್ಥಾನದಲ್ಲಿ ಕೆಲಸಕ್ಕೆ ಸೇರಿದ್ದು, ಜನವರಿ 6 ರಂದು ಕೆಲಸಕ್ಕೆ ಹೋಗುವುದಾಗಿ ಹೋದವರು ಹಿಂತಿರುಗಿ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಭಿನ್ನ ಕೋಮಿನ ಜೋಡಿ ನಾಪತ್ತೆ
ಮಂಗಳೂರು: ಪಂಪ್ವೆಲ್ ಸಮೀಪದ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಮಧುಶ್ರೀ ಮತ್ತು ತಾಹಿರ್ ನಾಪತ್ತೆಯಾಗಿದ್ದಾರೆ. ಪುತ್ತೂರಿನ ಮಧುಶ್ರಿ ಮತ್ತು ಉಡುಪಿ ತಾಲೂಕಿನ ಎರ್ಮಾಳ್ ಶೇಕ್ ವೂರಾ ಮಂಝಿಲ್ನ ಮೊಹಮದ್ ತಾಹಿರ್ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇಬ್ಬರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಜತೆಯಾಗಿಯೇ ನಾಪತ್ತೆಯಾಗಿರಬೇಕು ಎಂದು ಶಂಕಿಸಲಾಗಿದೆ. ಮಧುಶ್ರೀ ಹೆತ್ತವರು ಕಾಲೇಜ್ಗೆ ಬಂದಾಗ ನಾಪತ್ತೆಯಾಗಿರುವುದು ಬೆಳಕಿಗೆ ಬಂತು.
ಬೈಕ್ ಅಪಘಾತ ಸವಾರ ಸಾವು
ಮೂಲ್ಕಿ: ಹಳೆಯಂಗಡಿಯ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದ ಗಾಯಾಳು ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಬೈಕ್ ಸವಾರ ಪಕ್ಷಿಕೆರೆ ನಿವಾಸಿ ಮಹಮ್ಮದ್ (65) ಮೃತರು. ಜ.1ರಂದು ಪಿಕ್ಅಪ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಮಹಮ್ಮದ್ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಾಳೆ ಡಾ.ರತಿದೇವಿ 18ನೇ ಕೃತಿ ಅನಾವರಣ
ಮಂಗಳೂರು: ಖ್ಯಾತ ಪ್ರಸೂತಿ ಹಾಗೂ ಸ್ತ್ರೀರೋಗ ಶಾಸ್ತ್ರಜ್ಞೆ ಡಾ.ಆರ್.ರತಿದೇವಿ ರಚಿಸಿದ 'ಜಾರುವ ಗರ್ಭಕೋಶ ಮತ್ತು ಪರಿಸರದ ಭಾಗಗಳು' ಕೃತಿ ಭಾನುವಾರ ಅನಾವರಣಗೊಳ್ಳಲಿದೆ. ಬೆಳಗ್ಗೆ 9.30ಕ್ಕೆ ಮಂಗಳೂರಿನ ಶಾರದಾ ಕಾಲೇಜಿನ ಧ್ಯಾನ ಮಂದಿರದಲ್ಲಿ ನಡೆಯುವ ಸಮಾರಂಭವನ್ನು ಹಿರಿಯ ಸಾಹಿತಿ ಹಾಗೂ ವಿಮರ್ಶಕ ವಿ.ಗ.ನಾಯಕ ಉದ್ಘಾಟಿಸಲಿದ್ದಾರೆ. ರಾಜ್ಯ ಜಮಾತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಉಪಸಂಚಾಲಕಿ ಶಮೀರ ಜಹಾನ್ ಕೃತಿ ಅನಾವರಣ ಮಾಡಲಿದ್ದಾರೆ. ಮಂಗಳೂರು ಶಾರದಾ ಕಾಲೇಜಿನ ಪ್ರಿನ್ಸಿಪಾಲ್ ಡಾ. ಲೀಲಾ ಉಪಾಧ್ಯಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ನಮ್ಮ ಕುಡ್ಲ ವಿಫೋರ್ ಮೀಡಿಯಾದ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಮಾಜಸೇವಕಿ, ಬಹುಮುಖ ಪ್ರತಿಭೆ ಕೆ.ಎ.ರೋಹಿಣಿ ಅವರನ್ನು ಸನ್ಮಾನಿಸಲಾಗುವುದು.
ರತಿದೇವಿ ಕುರಿತು...: ಸುದೀರ್ಘ ವೃತ್ತಿ ಬದುಕು ಹಾಗೂ ರೋಗಿಗಳ ಬದುಕಿನ ಅವಲೋಕನದ ಅನುಭವದ ನೆಲೆಗಟ್ಟಿನಿಂದ ಕೃತಿಗಳನ್ನು ರಚಿಸುತ್ತ ಬಂದ ರತಿದೇವಿ ಅವರದು ಅನವರತ ಅಕ್ಷರ ಸೇವೆ. ತಮ್ಮ ಕೃತಿಗಳಿಗೆ ಬೆಲೆ ನಿಗದಿಗೊಳಿಸದ ಅವರದು ಕೃತಿಯನ್ನೋದಿ ಆರೋಗ್ಯ ಕಾಪಾಡಿಕೊಳ್ಳಬೇಕು ಎನ್ನುವ ಕಳಕಳಿ.