ಸುದ್ದಿ ಸಂಕ್ಷೇಪ
ನಿಧನ ಚಾರ್ಲ್ಸ್ ರೊಡ್ರಿಗಸ್
ಮೂಲ್ಕಿ: ಕಿನ್ನಿಗೋಳಿಯ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಚಾರ್ಲ್ಸ್ ರೊಡ್ರಿಗಸ್ (72) ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ನಿಧನ ಹೊಂದಿದರು. ಕಿನ್ನಿಗೋಳಿ ಕೆಥೋಲಿಕ್ ಸಭಾ ಅಧ್ಯಕ್ಷರಾಗಿದ್ದರು. ಸಾರ್ವಜನಿಕ ಗಣೇಶೋತ್ಸವ ಸಮಿತಿ, ಪಂಚಾಯಿತಿ ಸದಸ್ಯ, ಕಿನ್ನಿಗೋಳಿ ಚರ್ಚಿನ ಪಾಲನಾ ಮಂಡಳಿ ಸದಸ್ಯರಾಗಿದ್ದರು. ಪತ್ನಿ, ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ರವಿಶಂಕರ್ ಒಡ್ಡಂಬೆಟ್ಟು, ಅನಿತಾ ನರೇಶ್‌ಗೆ 'ಕನ್ನಡರತ್ನ' ಪ್ರಶಸ್ತಿ
ಮಂಗಳೂರು: ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಆಶ್ರಯದಲ್ಲಿ 2013ನೇ ಸಾಲಿನ ಕದ್ರಿ ಲಯನ್ಸ್ ಕನ್ನಡ ರತ್ನ ಪ್ರಶಸ್ತಿ(ಕಲಕ)ಯನ್ನು ಕವಿ, ಉಪನ್ಯಾಸಕ ರವಿಶಂಕರ ಒಡ್ಡಂಬೆಟ್ಟು ಹಾಗೂ 2014ನೇ ಸಾಲಿಗೆ ಲೇಖಕಿ ಅನಿತಾ ನರೇಶ್ ಮಂಚಿ ಇವರಿಗೆ ಪ್ರಕಟಿಸಲಾಗಿದೆ. ಜ.14ರಂದು ಕದ್ರಿ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯುವ ಸಾಂಸ್ಕೃತಿಕ ಸಂಕ್ರಾಂತಿ ಉತ್ಸವದಲ್ಲಿ ಸಂಜೆ 4ಕ್ಕೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸೀತಾರಾಮ ಪ್ರಭು (ಸಾಹಿತ್ಯ), ಚಂದ್ರಹಾಸ ದೇವಾಡಿಗ(ಸೇವೆ), ವಿಲ್ಸನ್ ಜೆಡಿಸೋಜ(ಚಿತ್ರಕಲೆ), ಶಂಕರನಾರಾಯಣ ಮಾಯಿಪ್ಪಾಡಿ (ಯಕ್ಷಗಾನ)ವಿನ್ನಿ ಫೆರ್ನಾಂಡಿಸ್(ಸಮಾಜಸೇವೆ-ಚಲನಚಿತ್ರ)ರನ್ನು ಸನ್ಮಾನಿಸಲಾಗುತ್ತದೆ. ಸಾಹಿತಿ ಮುರಳೀಧರ ಉಪಾಧ್ಯ ಹಿರಿಯಡಕ ಪ್ರಶಸ್ತಿ ಪ್ರದಾನ ಮಾಡಲಿದ್ದು, ಧರ್ಮದರ್ಶಿ ಹರಿಕೃಷ್ಣ ಪುನರೂರು ಅತಿಥಿಯಾಗಿ ಭಾಗವಹಿಸುವರು. ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಪಿ. ಜಯರಾಮ ಭಟ್ ಕಾರ್ಯಕ್ರಮ ಉದ್ಘಾಟಿಸುವರು. ಲಯನ್ಸ್ ಜಿಲ್ಲಾ ರಾಜ್ಯಪಾಲ ಕೆ.ಸಿ.ಪ್ರಭು ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ ಪೈ ಅಧ್ಯಕ್ಷತೆ ವಹಿಸುವರು. ಮಂಜುನಾಥ ಮೂರ್ತಿ, ಕವಿತಾ ಶಾಸ್ತ್ರಿ ಶುಭಾಶಂಸನೆ ಮಾಡುವರು. ಕಲಕ ಸಂಚಾಲಕ ಎನ್.ಟಿ.ರಾಜ, ಕನ್ನಡ ಅಭ್ಯುದಯ ವಿಭಾಗ ಸಂಯೋಜಕ ವಿಟ್ಲ ಮಂಗೇಶ್ ಭಟ್ ಹಾಜರಿರುವರು.